ಹಾವೇರಿ: “ಹಾವು’ ಎಂಬ ಶಬ್ದ ಕೇಳಿದರೆ ಸಾಕು ಹೌಹಾರುವವರೇ ಹೆಚ್ಚು. ಅದರಲ್ಲಂತೂ ಮನೆಯೊಳಗೆ, ಅಂಗಳಕ್ಕೆ ಹಾವು ಹೆಡೆಎತ್ತಿ ಬಂತೆಂದರೆ ಕಾಲಿಗೆ ಬುದ್ದಿ ಹೇಳುವವರೇ ಹೆಚ್ಚು. ಆದರೆ, ಹಾವೇರಿಯ ರಮೇಶ “ಹಾವು’ ಎಂಬ ಶಬ್ದ ಕೇಳಿದರೆ ಸಾಕು ಹಾವಿದ್ದಲ್ಲಿಯೇ ಓಡಿ ಬರುತ್ತಾರೆ!
ಈ ರಮೇಶ ಅವರಿಗೆ ಹಾವು ಎಂದರೆ ಸ್ವಲ್ಪವೂ ಅಂಜಿಕೆಯೇ ಇಲ್ಲ. ವೃತ್ತಿಯಲ್ಲಿ ಪೊಲೀಸ್ ಆಗಿದ್ದು, ಈತನ ಪೊಲೀಸ್ ವರಸೆಗೆ ಹಾವುಗಳು ಹೆದರಿ ಸುಮ್ಮನೆ ಅವರ ಕೈವಶ ವಾಗುತ್ತವೆ. ಪೊಲೀಸ್ ವೃತ್ತಿಯ ಜತೆಗೆ ಹಾವು ಹಿಡಿಯುವ ಪ್ರವೃತ್ತಿ ಹೊಂದಿರುವ ರಮೇಶ, ಹಾವಿಗೆ ಯಾವ ತೊಂದರೆಯಾಗದ ಹಾಗೆ ಸಲೀಸಾಗಿ ಹಾವು ಹಿಡಿದು ಹತ್ತಿರದ ಕಾಡಿಗೆ ಬಿಟ್ಟು ಬರುತ್ತಾರೆ. ರಮೇಶ ಅವರು ಪೊಲೀಸ್ ಇಲಾಖೆ ಸೇರಿ 15ವರ್ಷ ಗತಿಸಿವೆ. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾವೇರಿಯ ಸುತ್ತಮುತ್ತಲಿನ ಜನರು ಇವರನ್ನು “ಸ್ನೇಕ್ ರಮೇಶ’ ಎಂದೇ ಕರೆಯುತ್ತಾರೆ.
ಹಾವು ಹಿಡಿಯುವ ಧೈರ್ಯ, ಚಾಕಚಕ್ಯತೆ ಇವರಿಗೆ ಬಾಲ್ಯದಿಂದಲೇ ಬಳುವಳಿಯಾಗಿ ಬಂದಿದೆ. ರಮೇಶ ಅವರ ತಂದೆ ಹಿರೇಕೆರೂರ ತಾಲೂಕಿನ ಡಮ್ಮಳ್ಳಿ ಗ್ರಾಮದ ನಿವಾಸಿ. ಅವರು ಮೀನುಗಳನ್ನು ಹಿಡಿಯಲು ಕೆರೆಗಳಿಗೆ ತೆರಳುತ್ತಿದ್ದರು. ಮೀನಿನ ಬಲೆಯಲ್ಲಿ ಸಣ್ಣಪುಟ್ಟ ಹಾವುಗಳು ಸಹ ಬಂದು ಬಿಡುತ್ತಿದ್ದವು. ತಂದೆಯೊಡನೆ ರಮೇಶ ಆ ಕಾಲದಲ್ಲಿಯೇ ಅವುಗಳನ್ನು ಹಿಡಿದು ಜೀವಂತವಾಗಿ ಹೊರಗೆ ಬಿಡುತ್ತಿದ್ದರು. ಹೀಗಾಗಿ ಅವರಿಗೆ ಹಾವೆಂದರೆ ಅಂಜಿಕೆ ಎಂಬುದೇ ಇಲ್ಲ. ಇದೇ ಮುಂದೆ ರಮೇಶ ಅವರಿಗೆ ಹವ್ಯಾಸವಾಗಿ ಬಿಟ್ಟಿದೆ. ಯಾರಾದರೂ ಹಾವು ಬಂದಿದೆ ಎಂದಾಗ ಪ್ರೌಢಶಾಲೆಯಲ್ಲಿದ್ದಾಗಲೂ ಅನೇಕ ಹಾವುಗಳನ್ನು ರಮೇಶ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಂತರದ ಅವ ಧಿಯಲ್ಲಿ ಹಾವು ಹಿಡಿಯ ಬಲ್ಲ ಅನೇಕ ವ್ಯಕ್ತಿಗಳನ್ನು ಭೇಟಿ ಮಾಡಿ ಅವರು ಅನುಸರಿಸುವ ತಂತ್ರಗಾರಿಕೆಯನ್ನು ಅರಿತುಕೊಂಡು ಅದನ್ನು ಪ್ರಯೋಗಿಸಲು ಶುರುಮಾಡಿದ್ದು, ಈಗ ಹಾವು ಹಿಡಿಯುವುದರಲ್ಲಿ ಕರಗತರಾಗಿದ್ದಾರೆ.
ಈ ವರೆಗೆ 3500ಕ್ಕೂ ಅಧಿಕ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗರಹಾವು, ಕೊಳಕ ಮಂಡಲ, ನೀರು ಹಾವು, ಹಸಿರು ಹಾವು ಇತ್ಯಾದಿ 8-10 ಜಾತಿಯ ಹಾವುಗಳನ್ನು ಹಿಡಿದ ಸಾಹಸಿಯಾಗಿದ್ದಾರೆ.ಬರಿ ಕೈಯಿಂದಲೇ ಹಾವಿನ ಬಾಲ ಹಿಡಿದುಅದನ್ನು ಚೀಲಕ್ಕೆ ಹಾಕುತ್ತಾರೆ. ಹಾವು ಬಂದಿದೆ ಎಂದು ಯಾರೇ ಕರೆ ಮಾಡಿದರೂ ಸಾಕು ರಮೇಶ ಬಿಡುವಿದ್ದರೆ ಸ್ಥಳಕ್ಕೆ ಧಾವಿಸಿ, ಹಾವನ್ನು ಹಿಡಿದು ಹಾವುಗಳನ್ನು ಸಾಯಿಸದೇ ಅವುಗಳಿಗೂ ಬದುಕುವ ಅವಕಾಶ ನೀಡಿ ಎಂದು ಜನರಲ್ಲಿ ತಿಳಿವಳಿಕೆ ನೀಡುತ್ತಾರೆ. ಪೊಲೀಸ್ ಇಲಾಖೆಗೆ ಸೇರಿದ ಬಳಿಕ ಹಿರಿಯ ಅ ಧಿಕಾರಿಗಳು ಹಾವು ಹಿಡಿಯುವ ರಮೇಶ ಅವರ ಪ್ರವೃತ್ತಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಹಾವು ಯಾವಾಗ, ಎಲ್ಲಿ ಬರುತ್ತದೆಂದು ಹೇಳಲು ಆಗದು. ಆದ್ದರಿಂದ ನಿಮ್ಮ ಮೊಬೈಲ್‌ನಲ್ಲಿ ಸ್ನೇಕ್ ರಮೇಶ್ ಅವರನ್ನು ಸಂಪರ್ಕಿಸಲು ಮೊ. 81978 48386 /97425 63214ನ್ನು ನಮೂಸಿಟ್ಟುಕೊಂಡರೆ ಉಪಯೋಗಕ್ಕೆ ಬರಬಹುದು.
ಹಾವು ಹಿಡಿಯುವುದು ಅಪಾಯಕಾರಿ ಕೆಲಸ ಎಂದು ಗೊತ್ತಿದೆ. ಆದರೆ, ಈ ವರೆಗೂ ಯಾವುದೇ ತೊಂದರೆ ಎದುರಾಗಿಲ್ಲ. 3500ಕ್ಕೂ ಅಧಿಕ ಹಾವು ಹಿಡಿದಿದ್ದೇನೆ. ಇದರಲ್ಲಿ ತಂತ್ರಗಾರಿಕೆ ಮಹತ್ವ. ಹಾವುಗಳನ್ನು ಹಿಡಿಯುವ ವಿಚಾರದಲ್ಲಿ ಯಾವುದೇ ಫಲ ಅಪೇಕ್ಷಿಸದೆ ಇದೊಂದು ಸಾಮಾಜಿಕ ಸೇವೆ ಎಂದು ಮಾಡುತ್ತಿದ್ದೇನೆ. –
ರಮೇಶ, ಉರಗ ಪ್ರೇಮಿ ಪೊಲೀಸ್