ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಜೀವಶಾಸ್ತ್ರ ವಿಷಯಕ್ಕೆ ಶೇ.75.90ರಷ್ಟು ಹಾಗೂ ಗಣಿತ ವಿಷಯದಲ್ಲಿ ಶೇ.91.72ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.
ಜೀವಶಾಸ್ತ್ರ ವಿಭಾಗದಲ್ಲಿ ಸುಮಾರು ಶೇ.24ರಷ್ಟು ವಿದ್ಯಾರ್ಥಿಗಳು ಮತ್ತು ಗಣಿತ ವಿಷಯದಲ್ಲಿ ಸುಮಾರು ಶೇ.8ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಇದರಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಣಿತ ಪರೀಕ್ಷೆ ಸುಲಭವಾಗಿದ್ದು, ಜೀವಶಾಸ್ತ್ರ ಪರೀಕ್ಷೆ ಸ್ವಲ್ಪ ಕಷ್ಟವಾಗಿತ್ತು ಎಂದು ಹಲವು ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಹೇಳಿಕೊಂಡಿದ್ದಾರೆ. ಜೀವಶಾಸ್ತ್ರ ವಿಷಯದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಪ್ರಶ್ನೆಗಳು ಬಂದಿದ್ದರಿಂದ ಹಲವು ಗೊಂದಲವಾಗಿದೆ. ಆದರೆ, ಮಧ್ಯಾಹ್ನ ನಡೆದ ಗಣಿತ ಪರೀಕ್ಷೆ ಸುಲಭವಾಗಿತ್ತು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಒಳಗೆ ಕೈಗಡಿಯಾರ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಮೊದಲೇ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು. ಆದರೂ, ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಕೈಗಡಿಯಾರ ಕಟ್ಟಿಕೊಂಡು ಬಂದಿದ್ದರು. ಕೊಠಡಿ ಮೇಲ್ವಿಚಾರಕರು ಅಂತಹ ವಿದ್ಯಾರ್ಥಿಗಳಿಂದ ಕೈಗಡಿಯಾರ ಬಿಚ್ಚಿಸಿ, ನಂತರ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.
ಮಂಗಳವಾರ, ಏ.30ರಂದು ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 1ರಂದು ಬೆಂಗಳೂರು ಕೇಂದ್ರದಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.