ಕಂಪ್ಲಿ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಆರು ಕೊಳಚೆ ಪ್ರದೇಶಗಳನ್ನು ಸರ್ಕಾರ ಗುರುತಿಸಿದ್ದು, 900 ಮನೆಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ಸುಧೀರ್ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ನಡೆದ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆ ಬೈಪಾಸ್ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಎದುರಾಗಿರುವ ತಾಂತ್ರಿಕ ವಿಘ್ನಗಳು ಆದಷ್ಟು ಬೇಗ ಪರಿಹಾರವಾಗಲಿದೆ. ಹೌಸಿಂಗ್ ಬೋರ್ಡ್‌ನಲ್ಲಿ ಉದ್ಯಾನವನ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
4ನೇ ವಾರ್ಡ್ ಸದಸ್ಯ ಸಿ.ಆರ್.ಹನುಮಂತ ಮಾತನಾಡಿ, ಚಂದ್ರಕಲಾ ಚಿತ್ರಮಂದಿರ ಬಳಿಯಿರುವ ಸ.ನಂ.1334/ಎ, 0.53 ಸೆಂಟ್ಸ್ ಎಕರೆ ಭೂಮಿಯು ಸರ್ಕಾರದ ಹೆಸರಿನಲ್ಲಿದ್ದು, ಪ್ರಭಾವಿ ವ್ಯಕ್ತಿಗಳು ಅದರ ಲಾಭ ಪಡೆಯುತ್ತಿದ್ದಾರೆ. ಕೂಡಲೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿ, ಜಾಗವನ್ನು ಸರ್ವೇ ಮಾಡಿಸಿ ಸ್ಥಳ ಗುರುತು ಮಾಡಿ ಪುರಸಭೆ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷೆ ಬಾವಿಕಟ್ಟೆ ಮಂಜುಳಾ ಸೇರಿ ಕೆಲ ಸದಸ್ಯರು ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಬಗ್ಗೆ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಅಲ್ಲದೇ ಆರು ತಿಂಗಳಿಗೊಮ್ಮೆ ಸಭೆ ಕರೆಯಲಾಗುತ್ತಿದ್ದು, ತಿಂಗಳಿಗೊಂದು ಸಭೆ ನಡೆಸಲೇಬೇಕೆಂದು ಒತ್ತಾಯಿಸಿದರು. ಇನ್ನು ಸದಸ್ಯರ ಮನವಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವಾದ ಮೇಲೆ ಸಭೆಯ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನಿಸಿದರು. ವಾರ್ಡ್ ಸಭೆ ನಡೆಸುವ ಮೂಲಕ ಅನಧಿಕೃತ ನಲ್ಲಿಗಳನ್ನು ಲೆಕ್ಕ ಹಾಕಿ ಹಣ ಕಟ್ಟಿಸಿಕೊಳ್ಳಬೇಕು. ಎಲ್ಲಾ ವಾರ್ಡ್‌ಗಳ ಒಟ್ಟು 33 ಶೌಚಾಲಯಗಳ ನಿರ್ವಹಣೆ ಸರಿಯಾಗಿಲ್ಲ. 4ನೇ ವಾರ್ಡ್‌ನ ಬಿ.ಟಿ.ರಸ್ತೆ ಬದಲಿಗೆ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಬೇಕಿದೆ. ಪುರಸಭೆ ವಾಹನಗಳಿಗೆ ಬಳಸಲಾದ ಡೀಸೆಲ್ ಬಿಲ್ ಬಗ್ಗೆ ತನಿಖೆಯಾಗಬೇಕಿದೆ. ಇನ್ನು ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು. ಸದಸ್ಯರ ಒತ್ತಾಯದಂತೆ ತಿಂಗಳಿಗೊಂದು ಸಭೆ ಕರೆಯುವಂತೆ ಅಧ್ಯಕ್ಷರು ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಸದಸ್ಯ ವಿ.ಎಲ್.ಬಾಬು ಮಾತನಾಡಿ, ಇಂಧನ ವೆಚ್ಚದಲ್ಲಿ ಅವ್ಯವಹಾರ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯರ ಅಭಿವೃದ್ಧಿ ಕೆಲಸಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ಕೆ.ದುರುಗಣ್ಣ, ಸದಸ್ಯರಾದ ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಗೆಜ್ಜಳ್ಳಿ ಬಾಷಾ, ತುಳಸಿ ರಾಮಚಂದ್ರ, ಮಾರೆಣ್ಣ, ಎಸ್.ಸುರೇಶ್, ನಾಗರಾಜ, ಸಣ್ಣ ಹುಲುಗಪ್ಪ, ರಾಜಸಾಬ್, ಸಪ್ಪರದ ರಾಘವೇಂದ್ರ, ಹುಸೇನ್ ಬೀ, ಹುಲಿಗಮ್ಮ, ಬಿ.ಲಕ್ಷ್ಮೀದೇವಿ, ಸರಸ್ವತಮ್ಮ, ಕಿರಿಯ ಅಭಿಯಂತರ ಗೋಪಾಲ, ಪುರಸಭೆ ಸಿಬ್ಬಂದಿಗಳಾದ ಸುಬ್ಬಣ್ಣ, ವೆಂಕೋಬ, ರಮೇಶ್, ಚಿದಾನಂದ, ವಸಂತಮ್ಮ, ಜಿ.ಆರತಿ, ಮೀನಾಕ್ಷಿ, ರಾಧಿಕಾ ಪಾಲ್ಗೊಂಡಿದ್ದರು.