ದಾಂಡೇಲಿ: ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ಹಳೆ ನಗರಸಭೆಯ ಮೈದಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.
ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ಅವರ ನೃತ್ಯನಿಕೇತನ ಕೊಡವೂರು ಕಲಾತಂಡದಿಂದ ನಡೆದ ನಾರಸಿಂಹ ನೃತ್ಯರೂಪಕ ಕಾರ್ಯಕ್ರಮ ಅಪಾರ ಜನಾಕರ್ಷಣೆಗೆ ಪಾತ್ರವಾಯಿತು. ಧಾರ್ಮಿಕ ಜಾಗೃತಿಯ ಜೊತೆಗೆ ಮಾನವೀಯ ಮೌಲ್ಯಗಳ ಹೊತ್ತ ಸಂದೇಶ ಇವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಡಕವಾಗಿದ್ದವು.
ಕಾರ್ಯಕ್ರಮದ ಕೊನೆಯಲ್ಲಿ ಸುಧೀರ್ ಹಾಗೂ ಮಾನಸಿ ಸುಧೀರ್ ಅವರನ್ನು ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಈ ನೃತ್ಯ ತಂಡದ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೊಲೀಸ್ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾನಸಿ ಸುಧೀರ್ ಹಾಗೂ ಸುಧೀರ್, ಹಸಿರುನಗರ ದಾಂಡೇಲಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅನಂತ ವಂದನೆಗಳು. ಇಲ್ಲಿಯ ಪ್ರೇಕ್ಷಕರು ನೀಡಿದ ಪ್ರೋತ್ಸಾಹ, ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯವರ ಸಹಕಾರ ಸದಾ ಸ್ಮರಣೀಯವಾಗಿದೆ. ಸರ್ವರ ಸಹಕಾರವಿದ್ದಾಗ ಕಲೆ ಮತ್ತು ಕಲಾವಿದ ಬೆಳೆಯಲು ಸಾಧ್ಯ ಎಂದರು.
ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸುನೀಲ ಹೆಗಡೆ, ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಹಾಗೂ ಆಚಾರ ವಿಚಾಗಳನ್ನು ಸದಾ ಉಳಿಸಿ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದೆ. ನವರಾತ್ರಿ ಉತ್ಸವ ದೇವಿಯ ಆರಾಧನೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಆಯೋಜನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಟಿ.ಎಸ್. ಬಾಲಮಣಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹ್ವಾಣ್, ಖಜಾಂಚಿ ಅಶುತೋಷ ಕುಮಾರ್ ರಾಯ್, ಪ್ರಮುಖರುಗಳಾದ ಶ್ರೀಪತಿ ಭಟ್, ಸುವರ್ಣಾ ಸುನೀಲ ಹೆಗಡೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಕಲಾವಿದರನ್ನು ಪರಿಚಯಿಸಿದರು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.