Advertisement

ಮೈಸೂರು-ಬೆಂಗಳೂರು ನಡುವೆ ಆಕಾಶ ಅಂಬಾರಿ

12:33 PM Aug 05, 2017 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಭಾಗವಾದ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಈ ಬಾರಿ ವಿಶೇಷ ಒತ್ತು ನೀಡಿದ್ದು, ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಹಲವಾರು ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ದಸರೆಗೆ ವ್ಯಾಪಕ ಪ್ರಚಾರ ನೀಡುವ ದೃಷ್ಟಿಯಿಂದ ಪ್ರಚಾರದ ಹೊಣೆಗಾರಿಕೆಯನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿ ಬೇರೆ ಬೇರೆ ಇಲಾಖೆಗಳ ನಡುವೆ ಹಂಚಿಹೋಗಿದ್ದ ಜವಾಬ್ದಾರಿ ಕೇಂದ್ರೀಕೃತಗೊಳಿಸಲಾಗಿದೆ.

Advertisement

ಸಂಪರ್ಕ ವ್ಯವಸ್ಥೆ: ಬೇರೆ ಬೇರೆ ನಗರಗಳಿಂದ ಮೈಸೂರಿಗೆ ರಸ್ತೆ ಸಂಪರ್ಕ ಉತ್ತಮವಾಗಿದ್ದು, ಮೈಸೂರು-ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿರುವುದರಿಂದ ರೈಲು ಸೇವೆಯೂ ಉತ್ತಮವಾಗಿದೆ. ಆದರೆ, ವೈಮಾನಿಕ ಸೇವೆ ಇಲ್ಲದಿರುವುದರಿಂದ ಗಗನಯಾನಿಗಳಿಗೆ ತೊಂದರೆ ಇದೆ. ಆದರೆ, ಕೇಂದ್ರಸರ್ಕಾರದ ಉಡಾನ್‌ ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಸೆಪ್ಟೆಂಬರ್‌ನಲ್ಲಿ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ಜತೆಗೆ ಬೆಂಗಳೂರು- ಮೈಸೂರು ನಡುವೆ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಇದೆ.

ಜಿಲ್ಲಾಧಿಕಾರಿ ಪತ್ರ: ದಸರಾ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುವುದರಿಂದ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ವಿಮಾನಯಾನ ಸೌಲಭ್ಯದ ಅಗತ್ಯತೆ ಇದೆ. ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಸೆ.21 ರಿಂದ 30ರ ವರೆಗೆ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಡುವೆ ಆಕಾಶ ಅಂಬಾರಿ ವಿಶೇಷ ವಿಮಾನ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಡಿ. ರಂದೀಪ್‌ ಪ್ರವಾಸೋದ್ಯಮ ಇಲಾಖೆ ಪತ್ರ ಬರೆದಿದ್ದಾರೆ.

ಪ್ಯಾಲೇಸ್‌ ಆನ್‌ ವೀಲ್ಸ್‌: ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಆರಂಭಿಸಿದ ಪ್ಯಾಲೇಸ್‌ ಆನ್‌ ವೀಲ್ಸ್‌ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹವಾನಿಯಂತ್ರಿತ ಬಸ್‌ನಲ್ಲಿ ದಿನ ಪೂರ್ತಿ ಅರಮನೆಗಳ ನಗರಿ ಮೈಸೂರಿನಲ್ಲಿರುವ ಎಲ್ಲಾ ಏಳು ಅರಮನೆಗಳನ್ನು ಕಣ್ತುಂಬಿಕೊಂಡು, ಲಲಿತಮಹಲ್‌ ಹೋಟೆಲ್‌ನಲ್ಲಿ ಭೋಜನ ಸವಿಯುವ ಅವಕಾಶ ಕಲ್ಪಿಸಿದ್ದರಿಂದ ಹೆಚ್ಚಿನ ಜನ ಆಕರ್ಷಿತರಾಗಿದ್ದರು.

ಈ ಕಾರ್ಯಕ್ರಮದಡಿ ನಗರದ ಪ್ರಮುಖ ಅರಮನೆ ಅಂಬಾವಿಲಾಸ ಸೇರಿದಂತೆ ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್‌, ಜಗನ್ಮೋಹನ ಅರಮನೆ, ರಾಜೇಂದ್ರ ವಿಲಾಸ ಅರಮನೆ, ಕಾರಂಜಿ ಮ್ಯಾನ್‌ಷನ್‌, ಚೆಲುವಾಂಬ ಮ್ಯಾನ್‌ಷನ್‌ ಹಾಗೂ ತಾರಾ ಹೋಟೆಲ್‌ ಆಗಿ ಪರಿವರ್ತಿತವಾಗಿರುವ ಲಲಿತ್‌ಮಹಲ್‌ ವೀಕ್ಷಣೆ ಜತೆಗೆ ಇಲ್ಲಿ ಮಧ್ಯಾಹ್ನದ ಭೋಜನ, ವಿವಿಧ ಅರಮನೆಗಳ ಪ್ರವೇಶ ಶುಲ್ಕ, ಸಂಜೆಯ ಕಾಫಿ-ತಿಂಡಿ ಎಲ್ಲವನ್ನೂ ಈ ಪ್ಯಾಕೇಜ್‌ ಒಳಗೊಂಡಿತ್ತು.

Advertisement

ದಿನಕ್ಕೆ 24 ಸಾವಿರ ರೂ. ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದ್ದ ಹವಾನಿಯಂತ್ರಿತ ಬಸ್‌ಗಳಲ್ಲಿ ಅರಮನೆಗಳ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಮೈಸೂರು ಪಾಕ್‌ ನೀಡಿ ಆತ್ಮೀಯವಾಗಿ ಸ್ವಾಗತಿಸಿ ಓರ್ವ ಮಾರ್ಗದರ್ಶಕರನ್ನೂ ಜತೆಗೆ ಕಳುಹಿಸಿಕೊಡಲಾಗುತ್ತಿತ್ತು. ಇದಲ್ಲದೆ ಕೆಎಸ್ಸಾರ್ಟಿಸಿ ಕೂಡ ದಸರಾ ಸಂದರ್ಭದಲ್ಲಿ ಗಿರಿ ದರ್ಶಿನಿ, ವನ ದರ್ಶಿನಿ, ಹೆಸರಿನಲ್ಲಿ ಪ್ರವಾಸಿ ಪ್ಯಾಕೇಜ್‌ ಆರಂಭಿಸಲು ಸಿದ್ಧತೆ ನಡೆಸಿದೆ. ಕೆಎಸ್‌ಟಿಡಿಸಿ ಕೂಡ ಪ್ರವಾಸಿ ಪ್ಯಾಕೇಜ್‌ನ ಸಿದ್ಧತೆ ನಡೆಸುತ್ತಿದೆ.

ಪ್ರವಾಸಿ ತಾಣಗಳ ತವರು
ಮೈಸೂರು:
ಮೈಸೂರು ಪ್ರವಾಸಿಗರ ನೆಚ್ಚಿನ ತಾಣ. ಹೀಗಾಗಿಯೇ ವರ್ಷವಿಡೀ ದೇಶ-ವಿದೇಶದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಹಾಗೆ ಪ್ರವಾಸಕ್ಕಾಗಿ ಬಂದವರು ಪ್ರಮುಖವಾಗಿ ನೋಡಿ ಹೋಗುವುದು ಮೈಸೂರು ಅರಮನೆ (ಅಂಬಾವಿಲಾಸ), ಶ್ರೀಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ ಪ್ರಕೃತಿ ಉದ್ಯಾನ, ಚಾಮುಂಡಿಬೆಟ್ಟ, ಸಂತ ಫಿಲೋಮಿನಾ ಚರ್ಚ್‌, ರೈಲು ಮ್ಯೂಸಿಯಂ, ಮೈಸೂರಿಗೆ ಹೊಂದಿಕೊಂಡಂತೆಯೇ ಇರುವ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ ಬೃಂದಾವನ ಉದ್ಯಾನ, ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು,

-ಶ್ರೀರಂಗಪಟ್ಟಣದ ರಂಗನಾಥ ದೇವಸ್ಥಾನ, ಟಿಪ್ಪುವಿನ ಕೋಟೆ,  ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಸೋಮನಾಥಪುರ, ತಲಕಾಡು, ಮೇಲುಕೋಟೆ, ಶಿವನಸಮುದ್ರ ಜಲಪಾತ, ಚಾಮರಾಜ ನಗರ ಜಿಲ್ಲೆಯ ಬಂಡೀಪುರ ಹಾಗೂ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳು ಹೀಗೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗಾಗಿಯೇ ಮೈಸೂರೆಂದರೆ ಪ್ರವಾಸೋದ್ಯಮ- ಪ್ರವಾಸೋದ್ಯಮವೆಂದರೆ ಮೈಸೂರು ಎಂಬ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ.

ಕಳೆದ ವರ್ಷ ಆರಂಭಿಸಲಾದ ಪ್ಯಾಲೇಸ್‌ ಆನ್‌ ವೀಲ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುಮಾರು 360 ಜನರು ಈ ಮೂಲಕ ನಗರದ ಎಲ್ಲಾ ಏಳು ಅರಮನೆಗಳನ್ನು ವೀಕ್ಷಿಸಿದ್ದಾರೆ. ಈ ಬಾರಿ ಇನ್ನೂ ಆಕರ್ಷಣೀಯವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗುವುದು.
-ಜನಾರ್ದನ್‌, ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next