Advertisement

ಪಾಲಿಕೆ ನೂತನ ಸದಸ್ಯರ ಪ್ರಮಾಣ

11:27 AM Nov 18, 2018 | Team Udayavani |

ಮೈಸೂರು: ಮೈಸೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ 65 ವಾರ್ಡ್‌ಗಳ ಸದಸ್ಯರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ನಗರ ಪಾಲಿಕೆ ಕೌನ್ಸಿಲ್‌ ಸಭಾಂಗಣದಲ್ಲಿ ನಡೆದ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಯಿತು.

Advertisement

ವಾರ್ಡ್‌ ಸಂಖ್ಯೆ ಆಧಾರದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ತಲಾ ಐದು ಮಂದಿ ಸದಸ್ಯರು ವೇದಿಕೆಗೆ ತೆರಳಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮೊದಲ ಬಾರಿಗೆ ಆಯ್ಕೆಯಾಗಿರುವ ಸದಸ್ಯರು ಹಾಗೂ ಹಳೆಯ ಸದಸ್ಯರು ತಮ್ಮ ತಂದೆ-ತಾಯಿ, ದೇವರು, ತಮ್ಮ ನೆಚ್ಚಿನ ರಾಜಕೀಯ ನಾಯಕರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು.

ಅದರಂತೆ ನಗರ ಪಾಲಿಕೆ 9ನೇ ವಾರ್ಡ್‌ ಪಕ್ಷೇತರ ಅಭ್ಯರ್ಥಿ ಸದಸ್ಯ ಸಮೀವುಲ್ಲಾ(ಅಜ್ಜು) “ಸಚಿವ ಜಮೀರ್‌ ಅಹಮದ್‌ ಖಾನ್‌, ಸಹೋದರ ಅಜೀಜುಲ್ಲಾ(ಅಜ್ಜು)’ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 26ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ತಸ್ಲಿಂ “ಭೂಮಿ, ಸತ್ಯದ ಹೆಸರಿನಲ್ಲಿ’ ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ 35ನೇ ವಾರ್ಡ್‌ ಬಿಜೆಪಿ ಸದಸ್ಯ ಹಾಗೂ ಮಾಜಿ ಮೇಯರ್‌ ಎಸ್‌.ಸಂದೇಶ್‌ ಸ್ವಾಮಿ ಪುತ್ರ ಸಾತ್ವಿಕ್‌, “ವಿಧಾನ ಪರಿಷತ್‌ ಸದಸ್ಯರೂ ಆದ ದೊಡ್ಡಪ್ಪ ಸಂದೇಶ್‌ ನಾಗರಾಜ್‌’ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. 55ನೇ ವಾರ್ಡ್‌ ಪಕ್ಷೇತರ ಸದಸ್ಯ ಮ.ವಿ. ರಾಮ್‌ಪ್ರಸಾದ್‌ “ವಾರ್ಡಿನ ಮತದಾರರು,

ಕಾರ್ಯಕರ್ತರು ಹಾಗೂ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 61ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಶೋಭಾ ಸುನಿಲ್‌ “ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಹೆಸರಿನಲ್ಲಿ’ ಪ್ರಮಾಣವಚನ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next