ಹರಪನಹಳ್ಳಿ: “ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದ ನಾನು ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಎಂ.ಪಿ. ಪ್ರಕಾಶ್ ಕಾರಣ’ ಇದು ಮಂಡ್ಯದ ಗಂಡು ಅಂಬರೀಷ್ ಹೇಳಿದ್ದ ಮಾತು.
2011ರ ಮಾ. 14 ರಂದು ಹರಪನಹಳ್ಳಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅಂಬರೀಷ್, ತಮಗೆ ಬೆಂಗಳೂರಲ್ಲಿ ನಿವೇಶನ ಸಿಕ್ಕ ಬಗ್ಗೆ ವಿವರಿಸಿದ್ದರು. “ಎಂ.ಪಿ. ಪ್ರಕಾಶ್ ಅವರು ತಮ್ಮ ಎರಡನೇ ಪುತ್ರಿ ಸುಮಾ ಅವರ ವಿವಾಹ ಆಮಂತ್ರಣ ಪತ್ರಿಕೆ ನೀಡಲು ನನ್ನನ್ನು ಹುಡುಕಾಡುತ್ತಿದ್ದರು. ನಾನು ವುಡ್ ಲ್ಯಾಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಮಾಹಿತಿ ಪಡೆದು ಅಲ್ಲಿಗೆ ಬಂದ್ರು. ನನ್ನ ಪರಿಸ್ಥಿತಿ ನೋಡಿ ಜಿ ಕೆಟೆಗರಿಯಲ್ಲಿ ನಿವೇಶನ ನೀಡಿ ಬೆಂಗಳೂರಿನಲ್ಲಿ ನೆಲೆಯೂರುವಂತೆ ಮಾಡಿದರು ಎಂದು ನೆನಪಿಸಿಕೊಂಡಿದ್ದರು.
ಮೊದಲಿನಿಂದಲೂ ದಿ|ಎಂ.ಪಿ. ಪ್ರಕಾಶ್ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬರೀಷ್, ಪ್ರಕಾಶ್ ಅವರ ಪುತ್ರ ದಿ|ಎಂ.ಪಿ.ರವೀಂದ್ರ ಜೊತೆ ಹೆಚ್ಚು ಒಡನಾಟ ಹೊಂದಿದ್ದರು. ನಟ ಶಿವರಾಜಕುಮಾರ್, ಮಧು ಬಂಗಾರಪ್ಪ, ಹಾಸನ್ ನಟರಾಜ್ ಅವರು ಎಂ.ಪಿ.ರವೀಂದ್ರ ಹಾಗೂ ಅಂಬರೀಷ್ ನಡುವಿನ ಬಾಂಧವ್ಯದ ಸೇತುವೆಯಾಗಿದ್ದರು. ಬೆಂಗಳೂರಿನ ಶಿವಾನಂದ್ ಸರ್ಕಲ್ ಬಳಿಯೇ ಎಂ.ಪಿ. ರವೀಂದ್ರ ಹೆಚ್ಚು ಇರುತ್ತಿದ್ದರು. ಗಾಲ್ಫ ಆಡಲು ಆ ಏರಿಯಾಗೆ ಅಂಬರೀಷ್ ಬರುತ್ತಿದ್ದರಿಂದ ಖಾಸಗಿ ಭೇಟಿಗಳು ಗೆಳೆತನ ಗಟ್ಟಿಯಾಗಲು ಕಾರಣವಾಗಿತ್ತು. ಬಳ್ಳಾರಿ ಗಣಿಧಣಿಗಳ ವಿರುದ್ಧ ಸಿದ್ದರಾಮಯ್ಯ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಅಂಬರೀಷ್, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಎಂ.ಪಿ. ರವಿಂದ್ರ, ಅನಿಲ್ ಲಾಡ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಅಂಬರೀಷ್ ವಸತಿ ಸಚಿವರಾಗಿದ್ದಾಗ ಎಂ.ಪಿ. ರವೀಂದ್ರ ಅವರ ಮೇಲಿನ ಪ್ರೀತಿಯಿಂದ ಹರಪನಹಳ್ಳಿ ತಾಲೂಕಿಗೆ ವಿಶೇಷವಾಗಿ 1850 ಮನೆಗಳನ್ನು ಮಂಜೂರು ಮಾಡಿ ಬಡವರಿಗೆ ಆಶ್ರಯ ಕಲ್ಪಿಸಿದ್ದರು.
ಹರಪನಹಳ್ಳಿ ತಾಲೂಕನ್ನು 371ಜೆ ಕಲಂ ಸೌಲಭ್ಯದಡಿ ತರಲು ನಡೆಯುತ್ತಿದ್ದ ಹೋರಾಟ ಸಂದರ್ಭದಲ್ಲಿ ಸಚಿವ ಸಂಪುಟ ಉಪ ಸಮಿತಿ ಸದಸ್ಯರಾಗಿದ್ದ ಅಂಬರೀಷ್ ಅವರು ಹರಪನಹಳ್ಳಿಗೆ 371ಜೆ ಕಲಂ ಸೌಲಭ್ಯ ಕಲ್ಪಿಸಿ ಕೊಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುವ ಮೂಲಕ ಎಂ.ಪಿ. ರವೀಂದ್ರ ಮತ್ತು ಈ ಭಾಗದ ಜನರ ಹೋರಾಟಕ್ಕೆ ಕೈ ಜೋಡಿಸಿದ್ದರು.
ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದ ಅಂಬರೀಷ್ ಅವರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಎಂ.ಪಿ. ರವೀಂದ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಅದೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದಂತೆ ರವೀಂದ್ರ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು ಎಂದು ಎಂ.ಪಿ.ರವೀಂದ್ರ ರಾಜಕೀಯ ಕಾರ್ಯದರ್ಶಿ ಇರ್ಫಾನ್ ಮುದುಗಲ್ ತಿಳಿಸುತ್ತಾರೆ. ಆದರೆ ಅಭಿವೃದ್ಧಿ ಕನಸು ಹೊತ್ತಿದ್ದ ಎಂ.ಪಿ. ರವೀಂದ್ರ ಮತ್ತು ಅಂಬರೀಷ್ ಕೆಲವೇ ದಿನಗಳ ಅಂತರದಲ್ಲಿ ಕಾಲನ ಕರೆಗೆ ಓಗೊಟ್ಟು
ತೆರಳಿರುವುದು ಮಾತ್ರ ವಿಷಾದದ ಸಂಗತಿ.
ಎಸ್.ಎನ್. ಕುಮಾರ್ ಪುಣಬಗಟ್ಟಿ