Advertisement

ಕೊರಗ ಕುಟುಂಬಕ್ಕೆ ನಿವೇಶನ: ಶಾಸಕರ ಕ್ಷಿಪ್ರ ಸ್ಪಂದನ

08:45 AM Jul 23, 2017 | Team Udayavani |

ಬೆಳ್ತಂಗಡಿ: ಕಲ್ಮಂಜ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಜಿರಡ್ಕದಲ್ಲಿ ಅಕೇಶಿಯಾ ಕಾಡಿನಲ್ಲಿ ಟರ್ಪಾಲು ಟೆಂಟ್‌ ಹಾಕಿ ವಾಸಿಸುತ್ತಿದ್ದ ಕೊರಗ, ಮೊಗೇರ, ಮಲೆಕುಡಿಯ ಕುಟುಂಬದ ಐದೂ ಮಂದಿಗೆ ಸೋಮವಾರ ಶಾಸಕ ಕೆ. ವಸಂತ ಬಂಗೇರ ಅವರು ನಿವೇಶನ ಮಂಜೂರಾತಿ ಪತ್ರ ಹಸ್ತಾಂತ ರಿಸಲಿದ್ದಾರೆ.

Advertisement

ಉದಯವಾಣಿ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟ ವಾದುದನ್ನು ಗಮನಿಸಿ ತತ್‌ಕ್ಷಣ ಸಂಬಂಧಪಟ್ಟವರನ್ನು ಕರೆಸಿದ ಶಾಸಕರು ಅವರಿಗೆ ಇಂದೇ ನಿವೇಶನ ಸಿದ್ಧಪಡಿಸಿ ಕೊಡಬೇಕೆಂದು ತಾಕೀತು ಮಾಡಿದರು.

1 ವಾರದಲ್ಲಿ ಪ್ರತಿ ಮನೆಯವರಿಗೂ ತಲಾ 2 ಲಕ್ಷ ರೂ.ಗಳಂತೆ ಅನುದಾನ ಮಂಜೂರು ಮಾಡಿಸಿ ಮನೆ ಕಟ್ಟಲು
ಸಹಕಾರ ನೀಡುವುದಾಗಿ ಉದಯವಾಣಿಗೆ ಪ್ರತಿಕ್ರಿಯಿಸಿದರು. ಪತ್ರಿಕೆಯಲ್ಲಿ ಈ ಕುರಿತು ಕಾಳಜಿಯಿಂದ ವರದಿ ಪ್ರಕಟಿಸಿದ್ದಕ್ಕೆ ಪತ್ರಿಕೆಯನ್ನು ಅಭಿನಂದಿಸಿದರು. ಪತ್ರಿಕಾ ವರದಿ ಓದಿದ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.

ಉಜಿರೆ ಧರ್ಮಸ್ಥಳ ರಸ್ತೆ ಅಥವಾ ಉಜಿರೆ ಚಾರ್ಮಾಡಿ ರಸ್ತೆಯಿಂದ ಸಮಾನವಾಗಿ 3 ಕಿ.ಮೀ. ದೂರದಲ್ಲಿ. ಕಲ್ಮಂಜ ಗ್ರಾ.ಪಂ. ಸರಹದ್ದಿನ ಪಜಿರಡ್ಕ ಎಂಬಲ್ಲಿ ಸರಕಾರಿ ಕಾಡಿನಲ್ಲಿ ಸೂರಿನ ಆಸರೆಯ ನಿರೀಕ್ಷೆಯಲ್ಲಿ ಕೊರಗುತ್ತಿದ್ದ ಕುಟುಂಬಗಳ ಬಗ್ಗೆ ಉದಯವಾಣಿ ವರದಿ ಮಾಡಿತ್ತು. ಇವರಿಗೆ ಸರಕಾರದ ಮನೆ, ನಿವೇಶನ, ಶೌಚಾಲಯ, ಪಡಿತರ ಚೀಟಿ, ಚುನಾವಣಾ ಗುರುತುಪತ್ರ ಸಿಕ್ಕಿಲ್ಲ. ಆಧಾರ್‌ ಕಾರ್ಡು ಬಿಟ್ಟರೆ ಬೇರೇನಿಲ್ಲ. ಸುಶೀಲಾ, ದೇವಕಿ, ಥಾಮಸ್‌, ಲಕ್ಷ್ಮೀ ಮಲೆಕುಡಿಯ, ಕಮಲ ಮೊಗೇರ ಅವರ ಮನೆಗಳಿವೆ. ಶಾಸಕರ ತತ್‌ಕ್ಷಣದ ಸ್ಪಂದನೆ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ. ಆದರೆ ಒಬ್ಬೇ ಒಬ್ಬ ಅಧಿಕಾರಿ ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿಲ್ಲ. ಈ ಮೊದಲೇ ದಲಿತರ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪವಾದಾಗಲೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಉದಯವಾಣಿ ವರದಿ ಬಳಿಕವೇ ಇವರ ಕೂಗಿಗೆ ಕೊರಳು ದೊರೆತದ್ದು.

Advertisement

Udayavani is now on Telegram. Click here to join our channel and stay updated with the latest news.

Next