Advertisement

ದುರಂತ ಅಂತ್ಯ ಕಂಡ ಜಂಗಲ್‌ ಜಾಕಿ ಕುಟುಂಬಕ್ಕೆ ನಿವೇಶನ

12:25 PM Dec 19, 2017 | Team Udayavani |

ಮೈಸೂರು: ನಾಗರಹೊಳೆ ಅರಣ್ಯದ ಬಳ್ಳೆ ಗಿರಿಜನ ಹಾಡಿಯಲ್ಲಿ ಸ್ವತ್ಛಂದವಾಗಿ ಬದುಕುತ್ತಿದ್ದು, ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಯಶಸ್ಸಿನ ಗೀಳಿನಿಂದ ಏನೋ ಆಗಲು ಹೋಗಿ ದುರಂತ ಅಂತ್ಯ ಕಂಡ ಜೇನು ಕುರುಬರ ರಾಜೇಶನ ಕುಟುಂಬಕ್ಕೆ ಸದ್ಯದಲ್ಲೇ ನಿವೇಶನ ಭಾಗ್ಯ ದೊರೆಯಲಿದೆ.

Advertisement

ಹಳ್ಳಿ ಹೈದ ಪ್ಯಾಟೇಗ್‌ ಬಂದ ಹೆಸರಿನಲ್ಲಿ ಖಾಸಗಿ ವಾಹಿನಿಯೊಂದು ನಡೆಸಿದ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ತನ್ನ ಮುಗ್ಧ, ಸಹಜ ನಡತೆಯಿಂದ ದಿನ ಬೆಳಗಾಗುವುದರೊಳಗೆ ರಾಜ್ಯದಲ್ಲಿ ಮನೆ ಮಾತಾಗಿದ್ದ. ಸಹಜವಾಗಿಯೇ ರಾಜೇಶ್‌ ರಿಯಾಲಿಟಿ ಶೋ ಗೆದ್ದ. ಶೋ ಗೆಲುವಿನ ಜತೆಗೆ ಬಂದ 10 ಲಕ್ಷ ರೂ., ನಗದು ಬಹುಮಾನದಿಂದ ಹಾಡಿ ಜೀವನಕ್ಕೆ ಗುಡ್‌ ಬೈ ಹೇಳಿ, ಕುಟುಂಬದೊಂದಿಗೆ ಮೈಸೂರಿಗೆ ವಲಸೆ ಬಂದು ಪರಸಯ್ಯನ ಹುಂಡಿಯಲ್ಲಿ ಭೋಗ್ಯಕ್ಕೆ ಮನೆ ಮಾಡಿ ವಾಸಿಸತೊಡಗಿದ್ದರು. 

ರಿಯಾಲಿಟಿ ಶೋ ಜನಪ್ರಿಯತೆ ಬಳಸಿಕೊಂಡ ನಿರ್ಮಾಪಕರೊಬ್ಬರು ರಾಜೇಶ್‌- ಐಶ್ವರ್ಯರನ್ನೇ ನಾಯಕ-ನಾಯಕಿಯನ್ನಾಗಿ ಹಾಕಿಕೊಂಡು  ಜಂಗಲ್‌ ಜಾಕಿ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಿದ್ದರು. ಹೇಳಿದಷ್ಟು ಸಂಭಾವನೆ ಕೊಡಲಿಲ್ಲ ಎಂದು ಚಿತ್ರದ ನಾಯಕಿ ನಟಿ ಐಶ್ವರ್ಯಾ ಕ್ಯಾತೆ ತೆಗೆದಿದ್ದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಯಿತು. ಇದರಿಂದ ಖನ್ನತೆಗೊಳಗಾದ ರಾಜೇಶ, ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ.

ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಅದಾದ ನಂತರ “ಲವ್‌ ಇಸ್‌ ಪಾಯಿಸನ್‌’ ಚಿತ್ರವನ್ನೂ ಒಪ್ಪಿಕೊಂಡ ರಾಜೇಶ, ಚಿತ್ರೀಕರಣದಲ್ಲಿ ತೊಡಗಿದ್ದ. ಆದರೆ, ತಲೆತಲಾಂತರದಿಂದ ಕಾಡಿನ ಗಿರಿಜನ ಹಾಡಿಯಲ್ಲಿ ಬದುಕು ಸವೆಸಿದ ಕುಟುಂಬ ಹೀಗೆ ಏಕಾಏಕಿ ಮೈಸೂರಿಗೆ ವಲಸೆ ಬಂದು ನಗರ ಬದುಕಿಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು.

ಜತೆಗೆ ರಾಜೇಶನ ಮುಗ್ಧತೆ ದುರುಪಯೋಗಪಡಿಸಿಕೊಳ್ಳುತ್ತಿದ್ದ ಸಿನಿಮಾ ನಿರ್ಮಾಪಕರು ಒಪ್ಪಿಕೊಂಡಷ್ಟು ಹಣ ನೀಡದೆ ಕೈ ಎತ್ತುತ್ತಿದ್ದರಿಂದ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕಿದ್ದ. ಆದರೆ, ನಗರ ಜೀವನಕ್ಕೆ ಮಾರುಹೋಗಿದ್ದ ರಾಜೇಶ ಮತ್ತೆ ಹಾಡಿ ಸೇರಲು ಬಯಸಲಿಲ್ಲ. ಇತ್ತ ರಿಯಾಲಿಟಿ ಶೋ ಹೆಸರಲ್ಲಿ ಕರೆ ತಂದಿದ್ದವರೂ ತಮ್ಮ ಕೆಲಸ ಮುಗಿದ ನಂತರ ಕೈ ಬಿಟ್ಟಿದ್ದರು.

Advertisement

ಈ ಎಲ್ಲಾ ಕಾರಣಗಳಿಂದ ಮಾನಸಿಕವಾಗಿ ಖನ್ನತೆಗೆ ಒಳಗಾಗಿದ್ದ ರಾಜೇಶ, 2013ರ ನ.4ರಂದು ಮನೆಯವರ ಜತೆ ಜಗಳ ಮಾಡಿಕೊಂಡು ವಾಸವಿದ್ದ ಮನೆ ಮಹಡಿ ಏರಿ ಕುಳಿತಿದ್ದ. ಆತನ ತಾಯಿ ಲಕ್ಷ್ಮಮ್ಮ ಅಲ್ಲಿಗೂ ಹೋಗಿ ಮಗನ ಮನವೊಲಿಸುವ ಪ್ರಯತ್ನ ಮಾಡಿದರಾದರೂ ತಾಯಿ ಮಾತನ್ನು ಕಿವಿಗೆ ಹಾಕಿಕೊಳ್ಳದ ರಾಜೇಶ, 2ನೇ ಮಹಡಿಯಿಂದ ಆಯತಪ್ಪಿ ಬಿದ್ದು ದುರಂತ ಅಂತ್ಯ ಕಂಡ.

ಮಗನನ್ನು ಕಳೆದುಕೊಂಡ ಲಕ್ಷ್ಮಮ್ಮನ ಕುಟುಂಬ ಮತ್ತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಬಳ್ಳೆ ಹಾಡಿಗೆ ಮರಳಿತು. ಕಳೆದ ನಾಲ್ಕೂವರೆ ವರ್ಷಗಳಿಂದ ತಮಗೊಂದು ಸೂರು ಕಲ್ಪಿಸಿಕೊಡುವಂತೆ ಕಂಡ ಕಂಡ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ರಾಜೇಶನ ಕುಟುಂಬದವರು ಬೇಡಿದರೂ ಪ್ರಯೋಜನವಾಗಿರಲಿಲ್ಲ. 

ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಮನವಿ ಮಾಡಿದ ಪರಿಣಾಮ, ರಾಜೇಶ್‌ ಕುಟುಂಬಕ್ಕೆ ಎಚ್‌.ಡಿ.ಕೋಟೆ ಪಟ್ಟಣದಲ್ಲಿ ನಿವೇಶನ ಕಲ್ಪಿಸುವಂತೆ ಮುಖ್ಯಮಂತ್ರಿ ಸಚಿವಾಲಯದಿಂದ ಜಿಲ್ಲಾಡಳಿತಕ್ಕೆ ಪತ್ರ ಬಂದಿದೆ. ಮುಖ್ಯಮಂತ್ರಿಯವರ ಪತ್ರದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಎಚ್‌.ಡಿ.ಕೋಟೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಜಂಗಲ್‌ ಜಾಕಿ ರಾಜೇಶ ಹಾಗೂ 2016ರ ಫೆಬ್ರವರಿಯಲ್ಲಿ ಸಿಯಾಚಿನ್‌ನಲ್ಲಿ ಹಿಮದ ರಾಶಿಯಡಿ ಸಿಲುಕಿ ಮೃತಪಟ್ಟ ಯೋಧ ಮಹೇಶ್‌ ಕುಟುಂಬಕ್ಕೆ ನಿವೇಶನ ಒದಗಿಸಲು ನಿರ್ಣಯ ಕೈಗೊಳ್ಳಲಾಗಿದೆ.

ರಾಜೇಶ್‌ ಜೇನು ಕುರುಬ ಜನಾಂಗಕ್ಕೆ ಸೇರಿರುವುದರಿಂದ ನಿವೇಶನ ದೊರೆತರೆ ಗಿರಿಜನ ಅಭಿವೃದ್ಧಿ ಯೋಜನೆಯಡಿ 4.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ಅವಕಾಶವಿದೆ ಎನ್ನುತ್ತಾರೆ ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ ಶಿವಕುಮಾರ್‌.
 
ಮುಖ್ಯಮಂತ್ರಿಯವರ ಪತ್ರದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನಿವೇಶನ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ನಗರದ ಸ್ಟೇಡಿಯಂ ಬಡಾವಣೆಯಲ್ಲಿ ನಿವೇಶನ ಗುರುತಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ, ರಾಜೇಶ್‌ ಮತ್ತು ಯೋಧ ಮಹೇಶ್‌ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗುವುದು.
-ವಿಜಯಕುಮಾರ್‌, ಎಚ್‌.ಡಿ.ಕೋಟೆ ಪುರಸಭೆ ಇಒ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next