ಬೆಂಗಳೂರು: ಅನಂತದಲ್ಲಿ ಲೀನವಾದ ಅನಂತ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಸೋಮವಾರ ಬೆಳಗ್ಗೆಯಿಂದಲೇ ಅವರ ಮನೆ ಮುಂದೆ ಜನ ಸಾಗರವೇ ಸೇರಿತ್ತು. ಮನೆಯ ಮುಂಭಾಗದಲ್ಲಿ ಅನಂತಕುಮಾರ್ ಅವರ ಹಸನ್ಮುಖೀ ಆಳೆತ್ತದ ಚಿತ್ರಪಟ ಇಟ್ಟು ಹೂವಿನ ಹಾರ ಹಾಕಲಾಗಿತ್ತು. ಅನಂತಕುಮಾರ್ ಅವರ ಪಾರ್ಥೀವ ಶಾರೀರ ಕೇಸರಿ ಬಣ್ಣದ ಕೋಟಿನಲ್ಲೇ ಇತ್ತು.
ಅನಂತ ಕುಮಾರ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಗರ ವಿವಿಧ ಭಾಗದಿಂದ ಸಾವಿರಾರು ಜನರು ಅವರ ಮನೆಮುಂದೆ ಸೇರಿದ್ದರು. ಮಕ್ಕಳಿಂದ ಹಿಡಿದು ಶತಾಯುಷಿಗಳು ಅಂತಿಮ ದರ್ಶನಕ್ಕೆ ಬಂದಿದ್ದರು. ಕುಟುಂಬದವರು, ಸಂಘಪರಿವಾರದ ಸದಸ್ಯರು, ಕಾರ್ಯಕರ್ತರು, ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿನ್ ಧರ್ಮಗುರುಗಳು ಅಂತಿಮ ದರ್ಶನ ಪಡೆದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಸಚಿವರಾದ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಸೇರಿದಂತೆ ಶಾಸಕರು, ಸಂಸದರು, ಪಾಲಿಕೆ ಸದಸ್ಯರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು, ಮುಖಂಡರು ಅಂತಿಮ ನಮನ ಸಲ್ಲಿಸಿದರು.
ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸೋಮವಾರ ಬೆಳಗ್ಗೆ ಮಾಡಲಾಗಿತ್ತು. ಗಣ್ಯರ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಮನೆಯಲ್ಲೇ ದಿನಪೂರ್ತಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಹಾಗೂ ಗಣ್ಯರ ಪ್ರವೇಶಕ್ಕಾಗಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಲಾಲ್‌ಬಾಗ್ ಪಶ್ಚಿಮ ದ್ವಾರದ ಸಮೀಪದಲ್ಲಿರುವ ಅನಂತಕುಮಾರ್ ಅವರ ಮನೆಯ ರಸ್ತೆಯಲ್ಲಿ ಸಂಪೂರ್ಣ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಟ್ರಾಫಿಕ್ ಸಮಸ್ಯೆ ಉದ್ಭವಿಸದಂತೆ ಸಂಚಾರ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರು.
ಬಿಗಿ ಬಂದೋಬಸ್ತ್: ಅನಂತಕುಮಾರ್ ಅವರ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಪಶ್ಚಿಮ ದ್ವಾರದ ಸುತ್ತಲು ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಮನೆಯ ಸುತ್ತಲಿನ ರಸ್ತೆಗಳಲ್ಲಿ ನೂರು ಮೀಟರ್ ವ್ಯಾಪ್ತಿವರೆಗೂ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಬಿಜೆಪಿಯ ಹಿರಿಯ ನಾಯಕರು, ಸಚಿವರು, ಶಾಸಕರು ಮತ್ತು ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರಧಾನಿ ಭೇಟಿ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ.