ಬೆಂಗಳೂರು: ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಏ.18ರಂದು ಮತದಾನ ನಡೆಯಲಿರುವ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ “ಮೌನ ಅವಧಿ’ (ಸೈಲೆನ್ಸ್ ಪಿರಿಯೆಡ್) ಜಾರಿಗೆ ಬರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾನದ ಅವಧಿ ಮುಗಿಯುವ ದಿನದ ಹಿಂದಿನ 48 ಗಂಟೆಗಳನ್ನು ಚುನಾವಣಾ ಆಯೋಗದ ಪರಿಭಾಷೆಯಲ್ಲಿ “ಸೈಲೆನ್ಸ್ ಪಿರಿಯೆಡ್” (ಮೌನ ಅವಧಿ) ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಎಲ್ಲ ರೀತಿಯ ಬಹಿರಂಗ ಚುನಾವಣಾ ಪ್ರಚಾರವನ್ನು ನಿಷೇಧಿಸಲಾಗಿರುತ್ತದೆ ಎಂದರು.
ಅದರಂತೆ ಮೊದಲ ಹಂತದಲ್ಲಿ ಏ.18ರಂದು ಮತದಾನ ನಡೆಯಲಿರುವ ದಕ್ಷಿಣ ಕರ್ನಾಟಕ ಭಾಗದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಏ.16ರ ಸಂಜೆ 6 ಗಂಟೆಯಿಂದ ಏ.18ರ ಸಂಜೆ 6 ಗಂಟೆ ತನಕ “ಮೌನ ಅವಧಿ’ ಜಾರಿಯಲ್ಲಿ ಇರಲಿದೆ.
ಈ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ಮಾದರಿ ನೀತಿ ಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಪ್ರತಿಯೊಬ್ಬ ಅಭ್ಯರ್ಥಿ ಕಡ್ಡಾಯವಾಗಿ ಪಾಲನೆ ಮಾಡಬೇಕು. ಉಲ್ಲಂಘನೆ ಕಂಡು ಬಂದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ವಿಚಾರ ಮಾಧ್ಯಮಗಳಿಗೂ ಅನ್ವಯವಾಗಲಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
ವೈಯಕ್ತಿಕ ನಿಂದನೆ ಬೇಡ: ಚುನಾವಣಾ ಪ್ರಚಾರದ ವೇಳೆ ರಾಜಕೀಯ ಮುಖಂಡರು, ಎದುರಾಳಿ ಪಕ್ಷದ ಮುಖಂಡರ ವೈಯಕ್ತಿಕ ಜೀವನ, ಖಾಸಗಿ ವಿಚಾರಗಳ ಕುರಿತು ಟೀಕೆ ಅಥವಾ ನಿಂದನೆ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವೈಯಕ್ತಿಕ ನಿಂದನೆಯ ಅನೇಕ ಸಂಗತಿಗಳು ಆಯೋಗದ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವು ದೂರುಗಳು ಸಹ ದಾಖಲಾಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಅವರಿಗೆ ತಾಕೀತು ಮಾಡಲಾಗಿದೆ. ಒಂದೊಮ್ಮೆ ಇದು ಮುಂದುವರಿದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಕೊಡಲಾಗಿದೆ ಎಂದರು.
ಚುನಾವಣಾ ಪ್ರಚಾರದ ವೇಳೆ ಎದುರಾಳಿ ಪಕ್ಷದ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಟೀಕೆ ಮಾಡಬಹುದು ಅಥವಾ ಅದರ ಬಗ್ಗೆ ವಿಶ್ಲೇಷಣೆ ಮಾಡಲು ಅವಕಾಶವಿದೆ. ಆದರೆ, ವ್ಯಕ್ತಿ ನಿಂದನೆ, ವೈಯಕ್ತಿಕ ಟೀಕೆ, ಖಾಸಗಿ ವಿಚಾರಗಳ ಪ್ರಸ್ತಾಪ ಮಾಡುವುದು ಸರಿಯಲ್ಲ.
ಇದು ನೀತಿ ಸಂಹಿತೆಯ ಉಲ್ಲಂಘನೆ ಆಗುವುದರ ಜೊತೆಗೆ ಕೆಲವೊಂದು ಸಂದರ್ಭಗಳಲ್ಲಿ ಅಂತಹ ನಡವಳಿಕೆ ಗಂಭೀರ ಅಪರಾಧ ಸಹ ಆಗುತ್ತದೆ. ಆದ್ದರಿಂದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನವಿ ಮಾಡಿದರು.