ವಾಡಿ: ಪಟ್ಟಣದಲ್ಲಿ ದಲಿತ ಯುವಕನ ಕೊಲೆ ನಡೆದರೂ ದಲಿತ ಸಂಘಟನೆಗಳು ಮತ್ತು ದಲಿತ ಮುಖಂಡರು ಪ್ರತಿಭಟಿಸದೇ ಮೌನ ವಹಿಸುವ ಮೂಲಕ ದಲಿತನಿಗೆ ಅನ್ಯಾಯ ಮಾಡಿವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮ ಯುವಕರಿಂದ ಕೊಲೆಗೀಡಾದ ದಲಿತ ಯುವಕ ವಿಜಯ ಕಾಂಬಳೆ ಅವರ ಮನೆಗೆ ಶನಿವಾರ ಭೇಟಿ ನೀಡಿ ಮಗನನ್ನು ಕಳೆದುಕೊಂಡ ತಾಯಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಸ್ಲಿಮ ಯುವತಿ ಮತ್ತು ದಲಿತ ಯುವಕ ಪ್ರೀತಿಸಿದರೆ ತಪ್ಪೇನು? ಮಾತುಕತೆ ಮೂಲಕ ಬಗೆಹರಿಸಬಹುದಾದ ಪ್ರಕರಣ ಕೊಲೆಯಲ್ಲಿ ಕೊನೆಗೊಂಡಿರುವುದು ಬೇಸರ ತರಿಸಿದೆ. ಹೀಗೆ ಹಾಡುಹಗಲೇ ದಲಿತ ಯುವಕನಿಗೆ ಚೂರಿ ಇರಿದು ಕೊಂದು ಹಾಕಿದರೂ ಸ್ಥಳೀಯ ದಲಿತರು ಸಿಡಿದೇಳದಿರುವುದು ವಿಷಾದನೀಯ ಸಂಗತಿಯಾಗಿದೆ.
ಮರ್ಯಾದಾ ಹತ್ಯೆಗೈದವರಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ದಲಿತ ಯುವಕನ ಕೊಲೆ ಘಟನೆಯನ್ನು ಬಿಜೆಪಿ ಸಹಿಸುವುದಿಲ್ಲ. ದಲಿತ ಯುವಕನ ಸಾವಿಗೆ ನ್ಯಾಯ ಕೂಡಿಸಲು ನಾವು ಈಗಾಗಲೇ ನಮ್ಮ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಸರ್ಕಾರದಿಂದ ಸಿಗಬೇಕಾದ ಪರಿಹಾರದ ಜತೆಗೆ ನೊಂದ ಕುಟುಂಬದ ಜೊತೆಗೆ ನಿಲ್ಲುತ್ತೇವೆ ಎಂದಿದ್ದಾರೆ. ದಲಿತ ಯುವಕನ ಕೊಲೆ ಹಿಂದೆ ಭಾರಿ ಸಂಚು ನಡೆದಿದೆ. ಕೊಲೆ ನಡೆದ ಗಳಿಗೆಯಲ್ಲಿ ಪಟ್ಟಣದಲ್ಲಿ ವಿದ್ಯುತ್ ಸ್ಥಗಿತಗೊಳಸಿದ್ದು ಅನುಮಾನ ಹುಟ್ಟಿಸುತ್ತಿದೆ. ಈ ಕುರಿತು ಸೋಮವಾರ ನಮ್ಮೆಲ್ಲ ಬಿಜೆಪಿ ಮುಖಂಡರೊಂದಿಗೆ ಎಸ್ಪಿ ಅವರನ್ನು ಭೇಟಿಯಾಗಿ ಸೂಕ್ತ ತನಿಖೆ ಕೈಗೊಂಡು ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಆಗ್ರಹಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಯುವ ಮುಖಂಡ ವಿಠuಲ ವಾಲ್ಮೀಕಿ ನಾಯಕ, ತಾಲೂಕು ಮಂಡಲ ಪ್ರಭಾರಿ ಶಶಿಧರ ಸೂಗುರ, ತಾಲೂಕು ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ, ಉಪಾಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರಾಮದಾಸ ಚವ್ಹಾಣ, ಸ್ಥಳೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ, ಮುಖಂಡರಾದ ಸಂದೀಪ ಕಟ್ಟಿ, ಭರತ ಭಂಕೂರ, ರವಿ ಇವಣಿ, ಹರಿ ಗಲಾಂಡೆ, ಅಶೋಕ ಪವಾರ, ಜಗತ್ ಸಿಂಗ್ ರಾಠೊಡ, ಆನಂದ ಇಂಗಳಗಿ, ಶಿವಕುಮಾರ ಒಡೆಯರಾಜ್ ಮತ್ತಿತರರು ಈ ಸಂದರ್ಭದಲ್ಲಿದ್ದರು.