ಸೊಕೊಟು ಪರ್ಷಿಯನ್ ಭಾಷೆಯ ಶೀರ್ಷಿಕೆಯುಳ್ಳ ಚಲನಚಿತ್ರ. ಇರಾನಿನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಮೊಹ್ಸಿನ್ ಮಕ್ಮಲ್ಭಫ್ ನಿರ್ದೇಶಿಸಿದ ಚಿತ್ರವಿದು. ಚಿತ್ರದ ಕಥೆ ಹೇಳುವುದಾದರೆ ಒಂದೇ ಸಾಲು-ನಾವು ನಮ್ಮ ಅಂತರಂಗದ ನಾದ ಕೇಳಲು ಯಾವ ಕಿವಿ ಬೇಕು? ಚರ್ಮಧ್ದೋ? ಮನಸ್ಸಿನಧ್ದೋ ಎಂಬುದು ಈ ಮಾತಿಗೆ ಬರುವ ಪ್ರಶ್ನೆಯ ಶೈಲಿಯ ಉತ್ತರ.
ಇಡೀ ಸಿನೆಮಾದಲ್ಲಿ ಬರುವ ಪಾತ್ರಗಳು ಎರಡು. ಒಂದು ಪುಟ್ಟ ಹುಡುಗಿ, ಮತ್ತೊಂದುಪುಟ್ಟ ಅಂಧ ಹುಡುಗ. ಕಣ್ಣು ಮುಚ್ಚಿದಷ್ಟೂ ಹೆಚ್ಚು ಕಲಿಯಬಹುದೆಂಬ ಸಂದೇಶವನ್ನೂ ಈ ಚಿತ್ರ ಸಾರುತ್ತದೆ.
ಒಬ್ಬ ಅಂಧ ಬಾಲಕ ಇಡೀ ಬದುಕನ್ನು ಅನುಭವಿಸುವ ಬಗೆಯೇ ಇಡೀ ಚಿತ್ರ. ಖುರ್ಷದ್ ಎಂಬ ಬಾಲಕನದ್ದು ಪಟ್ಟಣದ ಸಂಗೀತ ಉಪಕರಣಗಳಿಗೆ ಶ್ರುತಿ ಕೂಡಿಸುವ ಕೆಲಸ. ಉಪಕರಣಗಳಿಗೆ ಕಂಠದಾನ ಮಾಡುವನೆಂದುಕೊಳ್ಳೋಣ. ಇಂಥವನಿಗೆ ಮಧುರ ಸ್ವರವೆಂದರೆ ಪಂಚಪ್ರಾಣ. ಎಲ್ಲೇ ಮಧುರಧ್ವನಿ ಕೇಳಿದರೆ ಅದರ ಹಿಂದೆ ಹೊರಟ. ಅದರೊಳಗೆ ಕಳೆದೇ ಹೋಗುತ್ತಾನೆ.
ಅವನ ಕೆಲಸಕ್ಕೆ ಸಹಾಯ ಮಾಡುವ ಹುಡುಗಿ ನದಿರಾ. ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸರಿ ಇದೆ ಇಲ್ಲವೇ ಎಂದು ಹೇಳುವವಳು. ಸಿನೆಮಾ ಪೂರ್ತಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಪ್ರತಿ ಸನ್ನಿವೇಶಗಳನ್ನು ಕಲಾಕೃತಿ ಮಾದರಿಯಲ್ಲಿ ಕಟ್ಟಿಕೊಡಲು ಯತ್ನಿಸಿರುವುದು ಮೊಹ್ಸಿನ್ ಮಕ್ಮಲ್ಭಫ್ ನ ಹೆಚ್ಚುಗಾರಿಕೆ. ನಾದದೊಳಗಿನ ಅಧ್ಯಾತ್ಮವನ್ನು ಚಿತ್ರಪಟದ ಮೇಲೆ ತರಲು ಯತ್ನಿಸಿದಂತಿದೆ. ಇಡೀ ಕುಟುಂಬ, ಅದರಲ್ಲೂ ಪುಟ್ಟ ಮಕ್ಕಳೊಡನೆ ಈ ಚಿತ್ರ ನೋಡಿದರೆ ಬಹಳ ಖುಷಿ ನೀಡುತ್ತದೆ. ಈ ವೀಕೆಂಡ್‌ಗೆ ಮಿಸ್ ಮಾಡಬೇಡಿ.
ಯೂಟ್ಯೂಬ್ ಸಂಪರ್ಕ ಕೊಂಡಿ.
*ರೂಪರಾಶಿ