Advertisement

ಫಲಾನುಭವಿಗಳಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

08:48 AM Jul 02, 2019 | Suhan S |

ಶಿರಹಟ್ಟಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಾದ ಬಿಜಲಿ ಹರ್‌ ಘರ್‌ ಯೋಜನೆ ಜಾರಿಗೆ ತಂದಿದ್ದರೂ ಪಟ್ಟಣದಲ್ಲಿ ಅನುಷ್ಠಾನಗೊಳಿಸುವಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪಪಂ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ ನೇತೃತ್ವದಲ್ಲಿ ಫಲಾನುಭವಿಗಳು ಪಟ್ಟಣದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್‌ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯ ವೀರಣ್ಣ ಮಜ್ಜಗಿ, ಸಹಜ ಬಿಜಲಿ ಹರ್‌ ಘರ್‌ ಎಂಬ ಯೋಜನೆ ಸಮೃದ್ಧಿಯಾಗಲು ಅಪಾರ ಹಣ ತೆಗೆದಿರಿಸಲಾಗಿತ್ತು. ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಹೆಸ್ಕಾಂಗೆ ಇಚ್ಛಾಶಕ್ತಿಯಿಲ್ಲ. ಬರಿ ಹೆಸ್ಕಾಂ ಅಧಿಕಾರಿಗಳು ಲಾಭದಾಯಕವಾದ ವ್ಯವಹಾರದಲ್ಲಿ ತೊಡಗಲು ಮುಂದಾಗುತ್ತಾರೆ ಎಂದು ದೂರಿದರು.

ಜೂ. 30ರೊಳಗೆ ಬೇಡಿಕೆ ಈಡೇರಿಸಬೇಕೆಂದು ತಿಳಿಸಲಾಗಿತ್ತು. ಇಲ್ಲದಿದ್ದರೆ ಜು. 1ಕ್ಕೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದೇವೆ ಎಂದರು.

ಈ ವೇಳೆ ಹೆಸ್ಕಾಂ ಅಸಿಸ್ಟಂಟ್ ಇಂಜಿನಿಯರ್‌ ಕೃಷ್ಣಪ್ಪ ಹೆಂಡಗರ್‌ ಧರಣಿ ನಿರತರೊಂದಿಗೆ ಮಾತನಾಡಿ, ಈ ಯೋಜನೆ ಕುರಿತು ಈವರೆಗೆ ಸ್ಥಳೀಯವಾಗಿ ತಾನೇ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿದಾಗ ಅರ್ಜಿಯಲ್ಲಿ ತಿಳಿಸಿರುವ ಫಲಾನುಭವಿಗಳ ವಿಳಾಸ ಹಾಗೂ ವಿವರಗಳಲ್ಲಿ ಸ್ವಲ್ಪ ಗೊಂದಲವಾದ ಕಾರಣ ವಿಳಂಬವಾಗಿದೆ. ಬರುವ ಆ. 10ರೊಳಗೆ ಎಲ್ಲ ಫಲಾನುಭವಿಗಳ ಮನೆ ಮನೆಗೆ ಈ ಯೋಜನೆ ತಲುಪಿಸಿ ದೀಪ ಬೆಳಗುವಂತೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಹೆಸ್ಕಾಂ ಅಸಿಸ್ಟಂಟ್ ಇಂಜಿನಿಯರ್‌ ಕೃಷ್ಣಪ್ಪ ಹೆಂಡಗರ್‌ ಅವರಿಂದ ಲಿಖೀತ ರೂಪದ ಭರವಸೆ ಪಡೆದು ಧರಣಿ ಹಿಂಪಡೆದರು. ಪಪಂ ಸದಸ್ಯ ಮಹದೇವ ಗಾಣಿಗೇರ, ಡೊಂಕಬಳ್ಳಿ ಪರಶುರಾಮ ಡೊಂಕಬಳ್ಳಿ,ಪ್ರಕಾಶ ಬಾರಬಾರ, ಗೌರವ್ವ ಕಪ್ಪತ್ತನವರ, ನೀಲಮ್ಮ ಲಕ್ಕುಂಡಿಮಠ, ಪಾರವ್ವ ಇಟ್ಟಪ್ಪನವರ, ದೇವಕ್ಕ ಇಟ್ಟಪ್ಪನವರ, ನೀಲವ್ವ ಕುಳಗೇರಿ, ರೇಣವ್ವ ಕುರಿ, ಫಕ್ಕೀರವ್ವ ದಂಡಿನ, ಕರಿಯಪ್ಪ ಬಾಳೂಟಗಿ, ಕೆ.ಬಿ. ಬಳೂಟಗಿ, ಬಸವರಾಜ ಬಕ್ಸದ, ಬಸಪ್ಪ ಬಕ್ಸದ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next