ಹರಪನಹಳ್ಳಿ: ಕಳೆದ ಮೂರು ವರ್ಷದಿಂದ ಸತತವಾಗಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ತಾಲೂಕಿನಾದ್ಯಂತ ಕೆರೆ, ಗೋಕಟ್ಟೆ, ಚೆಕ್ ಡ್ಯಾಂ ಸೇರಿದಂತೆ ಎಲ್ಲಿಯೂ ಒಂದು ಹನಿ ನೀರು ಸಿಗುತ್ತಿಲ್ಲ. ಜನ, ಜನವಾರು, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಟ ನಡೆಸುತ್ತಿವೆ. ಇಂತಹ ಸಮಯದಲ್ಲಿ ಸಸಿಗಳಿಗೆ ನೀರುಣಿಸುವುದು ದುಸ್ಸಾಹಸ ಕೆಲಸವಾಗಿದೆ.
ಆದರೆ ಸ್ಥಳೀಯ ಟಿ.ಎಂ. ಶಿವಶಂಕರ್ ಸ್ಮಾರಕ ಟ್ರಸ್ಟ್ ಪದಾಧಿ ಧಿಕಾರಿಗಳು ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿ ಹಾಗೂ ನಗರ ಹಸರೀಕರಣ ಯೋಜನೆಯಡಿ 2015-16ನೇ ಸಾಲಿನಲ್ಲಿ ಎರಡು ವರ್ಷ ನೆಟ್ಟಿರುವ 4500 ಸಸಿಗಳಿಗೆ ಎರಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟ್ರಸ್ಟ್ ನಿರ್ಧರಿಸಿದೆ.
ಆಸ್ಟ್ರೇಲಿಯಾದಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮಾಡಿರುವ ಟ್ರಸ್ಟ್‌ನ ಕಾರ್ಯದರ್ಶಿ ಟಿ.ಎಂ.ಶಿವಶಂಕರ್ ಅವರು ಜನರಲ್ಲಿ ಜಾಗೃತಿ ಮತ್ತು ಪರಿಸರ ಉಳಿವಿಗೆ ಪಣತೊಟ್ಟು ಪಟ್ಟಣದ ಹೊರವಲಯದ ಆನಂತನಹಳ್ಳಿ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ಮಂಗಳವಾರ ಸಸಿಗಳಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ವಲಯ ಅರಣ್ಯಾಧಿಕಾರಿ ಎಂ.ಎಸ್. ಅಬ್ದುಲ್‌ಬಷೀರ್ ಮಾತನಾಡಿ, ನಗರ ಹಸರೀಕರಣ ಯೋಜನೆಯಡಿ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜ್ ಆವರಣ, ಕೊಟ್ಟೂರು ರಸ್ತೆ, ಆದರ್ಶ ವಿದ್ಯಾಲಯ ಆವರಣ, ಇಂಡಿಯನ್ ರಿಜರ್ ಬೆಟಲಿಯನ್ ವಲಯ, ಕೆಎಚ್‌ಬಿ ಕಾಲೋನಿ, ಟೀಚರ್ ಕಾಲೋನಿ, ಎಚ್‌ಪಿಎಸ್ ಕಾಲೇಜ್ ಆವರಣ ಸೇರಿ ಒಟ್ಟು 4500 ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ.
ಸಸಿಗಳನ್ನು ಪೋಷಣೆ ಮಾಡುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯವಲ್ಲ, ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಟಿ.ಎಂ. ಶಿವಶಂಕರ್ ಸ್ಮಾರಕ ಟ್ರಸ್ಟ್‌ನವರು ಮುಂದೆ ಬಂದಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ 5 ಸಸಿಗಳನ್ನು ದತ್ತು ಪಡೆಯುವಂತೆ ಅವರು ಮನವಿ ಮಾಡಿದರು.
ಟ್ರಸ್ಟ್‌ನ ಕಾರ್ಯದರ್ಶಿ ಟಿ.ಎಂ. ಶಿವಶಂಕರ್ ಮಾತನಾಡಿ, ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳನ್ನು ಉಳಿಸಲು ಅರಣ್ಯಾಧಿಕಾರಿ ಕೆ.ಕಿರಣ್ ಕುಮಾರ್ ಸಲಹೆಯಂತೆ ಎರಡು ಟ್ಯಾಂಕರ್ ಮೂಲಕ ನೀರುಣಿಸಲು ಮುಂದಾದೆ. ಟ್ರಸ್ಟ್ ವತಿಯಿಂದ ಈಗಾಗಲೇ ಉಚಿತ ಆರೋಗ್ಯ ಶಿಬಿರ, ಪಶು ಆರೋಗ್ಯ ಶಿಬಿರ, ಔಷಧಿ ವಿತರಣೆ ಸೇರಿದಂತೆ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉಪ ಅರಣ್ಯಾಧಿಕಾರಿ ಕೆ.ಕಿರಣ್ ಕುಮಾರ್, ಚಂದ್ರಶೇಖರಗೌಡ, ಟ್ರಸ್‌ನ ಎ.ವೀರಣ, ಟಿ.ಎಂ.ಸಿ.ಕೋಟ್ರಯ್ಯ, ಪಾಲಿಟೆಕ್ನಿಕ್ ಕಾಲೇಜ್ ಪ್ರಾಚಾರ್ಯ ಎಂ.ಎಸ್.ದೇವರಾಜ್, ಟಿ.ಸಿ. ಶ್ರೀಧರ್ ಹಾಗೂ ಅರಣ್ಯ ಸಿಬ್ಬಂದಿ ಹಾಜರಿದ್ದರು.