Advertisement

ರೋಗಪೀಡಿತ ಹುಳಿಮಾವು, ಹಿಮ್ಮವು, ಬೊಕ್ಕಹಳ್ಳಿ

12:23 PM Aug 08, 2017 | |

ನಂಜನಗೂಡು: ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹುಳಿಮಾವು, ಹಿಮ್ಮವು ಹಾಗೂ ಬೊಕ್ಕಹಳ್ಳಿಯಲ್ಲಿ ಜನತೆ ರೋಗಪೀಡಿತರಾಗಿದ್ದಾರೆ. ವಿವಿಧ ರೀತಿಯ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ.

Advertisement

ಸುಮಾರ 15 ದಿನಗಳ ಹಿಂದೆ ಈ ಹಳ್ಳಿಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ದಿನೇ ದೀನೆ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾಂಕ್ರಾಮಿಕವಾಗಿ ಜನತೆಯನ್ನು ಆವರಿಸುವ ಆತಂಕ ಎದುರಾಗಿದೆ. ಹಿಂದುಳಿದ ವರ್ಗದವರ ಕಾಲೋನಿಯಲ್ಲಿ ಈ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಜ್ವರ ಪೀಡಿತರಾಗಿದ್ದಾರೆ. ಕಾಯಿಲೆ ಯಾವುದೆಂಬುದು ಇದುವರೆಗೂ ತಿಳಿದು ಬಂದಿಲ್ಲ.

ಮಂಡಿ ನೋವು, ಕಾಲು ನೋವಿನೊಂದಿಗೆ ಪ್ರಾರಂಭವಾಗುವ ಈ ಜ್ವರವು ಬಳಿಕ ಕಾಲಿನ ಊತ ಕಾಣಿಸಿಕೊಳ್ಳಲಾರಂಭಿಸುತ್ತದೆ . ಜ್ವರ ಪೀಡಿತರು ಆಹಾರ ಸೇವಿಸಲಾಗದೇ ದಿನೇ ದಿನೆ ನಿತ್ರಾಣರಾಗುತ್ತಿದ್ದಾರೆ.  ಕೂಲಿ ಮಾಡಿ ಜೀವನ ಸಾಗಿಸುವ ಈ ಮಂದಿ ಜ್ವರಕ್ಕೆ ತುತ್ತಾಗಿರುವುದರಿಂದ ಚಿಕಿತ್ಸೆಗೂ ಪರದಾಡುವಂತಾಗಿದೆ.

ರೋಗಪೀಡಿತರು: ಹುಳಿಮಾವು ಗ್ರಾಮದ ಪಾಪಣ್ಣ, ಸಿದ್ದಯ್ಯ, ತಾಯಮ್ಮ, ಜವರಯ್ಯ, ನಿಂಗಯ್ಯ, ಸ್ವಾಮಿ, ನಿಂಗರಾಜು ರಂಗಸ್ವಾಮಿ, ತಾಯಮ್ಮ, ವಿಜಯ, ಪುಟ್ಟಮ್ಮ, ಮಂಗಳಮ್ಮ, ಸಾಕಮ್ಮ ಹಾಗೂ ಬೊಕ್ಕಹಳ್ಳಿ ಗ್ರಾಮದ ನಂಜಮ್ಮ, ರಾಚಯ್ಯ, ಉಷಾ, ನರೇಂದ್ರ, ಕೀರ್ತಿ, ಚಿಕ್ಕಮ್ಮ, ಚಂದ್ರು, ಸೇರಿದಂತೆ  60ಕ್ಕೂ ಹೆಚ್ಚು ಜನತೆ ಈ ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ.

ಈ ಮಧ್ಯೆ ಪಾಪಣ್ಣ ಕಳೆದ 8 ದಿನಗಳಿಂದ ತೀವ್ರವಾಗಿ ಜ್ವರ ಬಾಧಿಸುತ್ತಿದ್ದು, ಆಹಾರವನ್ನು ಸೇವಿಸದೇ ನಿತ್ರಾಣವಾಗಿ ಗಂಭೀರ ಸ್ಥಿತಿ ತಲುಪಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆಗೆ ದೂರು ನೀಡಿದ್ದರೂ ಇದುವರೆಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಬೊಕ್ಕಹಳ್ಳಿ ಲಿಂಗಯ್ಯ ದೂರಿದ್ದಾರೆ.

Advertisement

ಇಲ್ಲಿ ಆಸ್ಪತ್ರೆ ಇದೆಯಾದರೂ ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಘೋಷಣೆಯೊಂದಿಗೆ ವರ್ಷದ ಹಿಂದೆ ತೆರೆಯಲಾದ ಹೆಲ್ಪೇಜ್‌ ಇಂಡಿಯಾ(ಸಂಚಾರಿ ಆರೋಗ್ಯ ಸೇವೆ) ನೆಪ ಮಾತ್ರಕ್ಕಾಗಿದ್ದು, ಮೊಬೈಲ್‌ ಚಿಕಿತ್ಸಾ ವಾಹನ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಲಿಂಗಯ್ಯ ದೂರಿದ್ದಾರೆ.

ಜೊತೆಗೆ ಈ ಭಾಗದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಆಸ್ಪತ್ರೆಗೆ ಬೋರ್ಡ್‌ ಹಾಕಿ ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಆರು ವರ್ಷ ಕಳೆದರೂ ಈ ಕಟ್ಟಡದ ಬಾಗಿಲು ತೆರೆಯುವ ಸೌಜನ್ಯ ತೋರಿಲ್ಲ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಗ್ರಾಮದಲ್ಲಿ ಹಲವಾರು ಮಂದಿ ಹಲವು ರೀತಿಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದು, ಇಲ್ಲಿ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ರಾತ್ರಿಯ ವೇಳೆಯಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಮೈಸೂರಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಈ ಬಗ್ಗೆ ಹಲವು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದರೂ  ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಭರವಸೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಆಸ್ಪತ್ರೆಗೆ ಸಿಬ್ಬಂದಿ ನಿಯೋಜಿಸಿ ಚಿಕಿತ್ಸೆ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಳಿಮಾವು ಗ್ರಾಮದ 17 ಜನರಲ್ಲಿ ತೀವ್ರ ಜ್ವರ ಇರುವುದು ನಿಜ. ಅವರೆಲ್ಲರ ರಕ್ತ  ಸಂಗ್ರಹಿಸಲಾಗಿದೆ. ಅದನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳಿಸಿ ವರದಿ ಬಂದ ನಂತರವೇ ಈ ಜ್ವರದ ಮೂಲ ತಿಳಿಯಲಿದೆ. ತಾಲೂಕು ವೈದ್ಯಾಧಿಕಾರಿ ಕಲಾವತಿ ನಿರ್ದೇಶನದ ಮೇರೆಗೆ ತಾವು ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ ಬಹುತೇಕ ನೀರಿನ ತೊಟ್ಟಿಗಳಲ್ಲಿ ಲಾವಾ ಕಾಣಿಸಿಕೊಂಡಿದು, ನೈರ್ಮಲ್ಯ ಕೊರತೆಯಿಂದ ರೋಗ ಹರಡಿರುವ ಸಾಧ್ಯತೆ ಇದೆ.
-ಬಹುದುಲ್ಲಾ ಖಾನ್‌, ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next