Advertisement
“ಅಂಗಿ ಮೇಲಂಗಿ ಚಂದೇನೊ ನನ ರಾಯ?’ ಎಂಬ ಜನಪದ ಗೀತೆಯೊಂದಿದೆ. ಆ ಭಾವಕ್ಕೆ ತಕ್ಕಂತೆ ದಿರಿಸಿನ ಮೂಲಕ ಚಂದಗಾಣಬೇಕೆನ್ನುವುದು ಈ ಕಾಲದ ಮನಸ್ಥಿತಿ. ಅದರಂತೆ ಹುಟ್ಟಿಕೊಂಡಿದ್ದೇ ಫ್ಯಾಷನ್ ಬೈಯರ್ (Fashion buyer) ವೃತ್ತಿ. ಸಾಮಾನ್ಯವಾಗಿ ಫ್ಯಾಷನ್, ಫ್ಯಾಷನ್ ಡಿಸೈನಿಂಗ್, ಫ್ಯಾಷನ್ ಶೋಗಳ ಬಗೆಗಿನ ನಮ್ಮ ಕಲ್ಪನೆ ಸೀಮಿತವಾದದ್ದು. ಫ್ಯಾಷನ್ ಎಂದರೆ ಕೇವಲ ಅಂದಗಾಣುವ ಆಸೆಗೆ ಮಣೆ ಹಾಕುವ ಕೆಲಸ ಭಾವ ಬಹುತೇಕರಲ್ಲಿದೆ. ಆದರೆ, ಫ್ಯಾಷನ್ ಕ್ಷೇತ್ರ ಅವೆಲ್ಲಕ್ಕಿಂತಲೂ ವಿಸ್ತಾರವಾದುದು. ಬಟ್ಟೆ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಯಾರೇ ಒಬ್ಬ ವ್ಯಕ್ತಿ ಫ್ಯಾಷನ್ ಅನ್ನು ಒಪ್ಪಲಿ ಬಿಡಲಿ, ಬಟ್ಟೆಯನ್ನು ಖರೀದಿಸಲೇಬೇಕು. ಶೋರೂಮ್‌ಗಳ ಬ್ರಾಂಡೆಡ್ ದಿರಿಸಿನಿಂದ ಹಿಡಿದು ರಸ್ತೆ ಬದಿ ಮಾರಾಟವಾಗುವ ಬಟ್ಟೆಗಳ ಹಿಂದೆಯೂ ಫ್ಯಾಷನ್ ಕ್ಷೇತ್ರ ಕೆಲಸ ಮಾಡಿರುತ್ತದೆ. ಯಾವುದೇ ಬಟ್ಟೆ ಮಳಿಗೆಯ ವಿಚಾರಕ್ಕೆ ಬಂದಾಗ “ಅಲ್ಲಿ ಕಲೆಕ್ಷನ್ ಚೆನ್ನಾಗಿರುತ್ತದೆ’ ಎಂದು ಗ್ರಾಹಕರು ಮಾತಾಡುವುದನ್ನು ಕೇಳಿರಬಹುದು. ಅದರ ಶ್ರೇಯ ಸಲ್ಲಬೇಕಾಗಿರುವುದು ಫ್ಯಾಷನ್ ಬೈಯರ್‌ಗೆ. ಸಣ್ಣ ಪ್ರಮಾಣದ ಬಟ್ಟೆ ಮಳಿಗೆಗಳಲ್ಲದೆ, ದೊಡ್ಡ ಪ್ರಮಾಣದ ವಸ್ತ್ರೋದ್ಯಮ ನಡೆಸುವವರಿಗೂ ಫ್ಯಾಷನ್ ಬೈಯರ್‌ನ ಅವಶ್ಯಕತೆ ಇರುತ್ತದೆ.
ಫ್ಯಾಷನ್ ಬೈಯರ್ ಎಂದರೆ ತಾನು ಕೆಲಸ ಮಾಡುವ ಸಂಸ್ಥೆಗಳ ಪರವಾಗಿ ಕಾರ್ಖಾನೆಗಳಿಂದ ಬಟ್ಟೆಗಳನ್ನು ಖರೀದಿಸುವ, ಈ ಖರೀದಿಯ ಕರಾರುಗಳನ್ನು ಹೆಣೆಯುವ, ಸಪ್ಲೆçಯರ್‌ಗಳನ್ನು ಗುರುತಿಸುವ, ಅವುಗಳು ಮಾರಾಟವಾಗುವ ಮಳಿಗೆಗಳನ್ನು ಗೊತ್ತುಪಡಿಸುವವನು. ಯಾವ ಸ್ಥಳಗಳಲ್ಲಿ ಯಾವ ಯಾವ ಟ್ರೆಂಡ್‌ನ ಬಟ್ಟೆಗಳು ಹೆಚ್ಚು ಮಾರಾಟವಾಗುತ್ತವೆ ಎಂಬುದನ್ನು ಆತ ತಿಳಿದಿರುತ್ತಾನೆ. ಅದರ ಪ್ರಕಾರ ದಿರಿಸುಗಳ ಹಂಚಿಕೆ ನಡೆಸುತ್ತಾನೆ. ಈ ಕ್ಷೇತ್ರದಲ್ಲಿ ಬುದ್ಧಿವಂತಿಕೆ ಮಾತ್ರವಲ್ಲದೆ, ಸೃಜನಶೀಲತೆಯೂ ಬೇಕಾಗುತ್ತದೆ. ಯಾವುದೇ ಒಂದು ಟ್ರೆಂಡ್ ಜನರ ನಡುವೆ ಫೇಮಸ್ ಆಗುವುದಕ್ಕೆ ಮುಂಚೆಯೇ ಅದನ್ನು ಗುರುತಿಸಿ ಅನುಷ್ಠಾನಕ್ಕೆ ತರಬಲ್ಲವನಾಗಿರುತ್ತಾನೆ. ಹಿರಿಯ ಅಧಿಕಾರಿಗಳ ಜೊತೆಗೆ ಅಧಿಕಾರಯುತವಾಗಿ ಸಂವಹನ ನಡೆಸುವ ಛಾತಿ ಅವನಿಗಿರುತ್ತದೆ. ಅವನು ಕ್ಷಿಪ್ರವಾಗಿ ಆಲೋಚಿಸಿ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಬಲ್ಲ. ಸವಾಲೂ ಇದೆ…
ಫ್ಯಾಷನ್ ಬೈಯರ್ ಎಂಬುದು ಆಕರ್ಷಕ ವೃತ್ತಿಯೇನೋ ಹೌದು. ಆದರೆ, ಇದು ಅತ್ಯಂತ ಹೆಚ್ಚಿನ ಪ್ರತಿಸ್ಪರ್ಧಿಗಳಿರುವ ಕ್ಷೇತ್ರವೆನ್ನುವುದೂ ನಿಜ. ನಿತ್ಯ ಹೊಸತನ್ನು ಬೇಡುವ ಈ ಜಗತ್ತಿಗೆ ನೀವು ಅದನ್ನು ಪೂರೈಸುವ ಹೆಗಲೊಡ್ಡಿರುತ್ತೀರಿ. ಕೇವಲ ಹೊಸ ಫ್ಯಾಷನ್‌ಗಳನ್ನು ಪೂರೈಸುವುದಲ್ಲದೆ ಡಿಸೈನರ್‌ಗಳ ನಿರಂತರ ಸಂಪರ್ಕದಲ್ಲಿರಬೇಕಾಗುತ್ತದೆ. ಡಿಸೈನರ್‌ಗಳ ಬಟ್ಟೆ ಸಂಗ್ರಹವನ್ನು° ಗಮನಿಸುವುದು, ಟ್ರೇಡ್ ಶೋ, ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುವುದು, ಮಾರಾಟ ತಂತ್ರವನ್ನು ರೂಪಿಸುವುದು, ಡಿಸ್ಕೌಂಟ್ ಕುರಿತ ಚರ್ಚೆಯಲ್ಲಿ ಭಾಗವಹಿಸುವುದು, ಬೇಡಿಕೆ ಪಟ್ಟಿ (ಸೇಲ್ಸ್ ಆರ್ಡರ್) ಸಲ್ಲಿಸುವುದು, ಮಾರಾಟದ ವರದಿಗಳನ್ನು ಪರಿಶೀಲಿಸುವುದು ಇವೆಲ್ಲವನ್ನೂ ಮಾಡಬೇಕಾಗುವುದು. ಹೀಗಾಗಿ ಫ್ಯಾಷನ್ ಕ್ಷೇತ್ರದ ಕೆಲಸವೆಂದರೆ ಗ್ಲಾಮರಸ್ ಲೋಕದೊಂದಿಗಿನ ನಂಟು ಮಾತ್ರವೇ ಅಲ್ಲ.
Related Articles
ಈ ಕ್ಷೇತ್ರಕ್ಕೆ ಹೊಸದಾಗಿ ಬಂದವರು ಫ್ಯಾಷನ್ ಬೈಯರ್ ಅಸಿಸ್ಟೆಂಟ್ ಆಗಿ ವೃತ್ತಿ ಶುರುಮಾಡುತ್ತಾರೆ. ಅಲ್ಲಿ ಹೇಳಿಕೊಡುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು. ಮುಂದೆ ಫ್ಯಾಷನ್ ಬೈಯರ್ ಆಗುತ್ತಾರೆ. ಕಲಿತದ್ದನ್ನು ಪ್ರಾಕ್ಟಿಕಲ್ ಆಗಿ ಪ್ರಯೋಗಿಸುವ ಹಂತವಿದು. ಅಲ್ಲಿಂದ ಫ್ಯಾಷನ್ ಕೋ ಆರ್ಡಿನೇಟರ್ ಸ್ಥಾನಕ್ಕೇರಬಹುದು. ಅಲ್ಲಿ ಟೈಮ್ ಲೀಡರ್‌ನ ಜವಾಬ್ದಾರಿ ಹೆಗಲೇರುತ್ತದೆ. ಏಕಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಫ್ಯಾಷನ್ ಶೋ, ವಸ್ತ್ರಪ್ರದರ್ಶನ ಮೇಳಗಳ ನಿರ್ವಹಣೆ, ಜಾಹೀರಾತು- ಕೆಟಲಾಗ್‌ಗಳ ತಯಾರಿಕೆ ಮುಂತಾದ ಕೆಲಸಗಳ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಬೆಳೆಯುವುದಕ್ಕೆ ಶಕ್ತಿ ಇದ್ದಷ್ಟೂ ಬೆಳೆಯುವ, ಗಳಿಸುವ ಯುಕ್ತಿ ಇದ್ದಷ್ಟೂ ಗಳಿಕೆಗೆ ಅನುವು ಮಾಡಿಕೊಡುವ ಕ್ಷೇತ್ರ ಇದು.
Advertisement
ಯಾವ ಡಿಗ್ರಿಯೂ ಬೇಕಿಲ್ಲ…ನಿಜ ಹೇಳಬೇಕೆಂದರೆ, ಫ್ಯಾಷನ್ ಬೈಯರ್ ಆಗಲು ಇಂಥದ್ದೇ ವಿದ್ಯಾರ್ಹತೆ ಬೇಕು ಎಂಬ ನಿಯಮವೇನಿಲ್ಲ. ಆದರೆ ರಿಟೇಲ್, ಬೈಯಿಂಗ್, ಮಾರ್ಕೆಟಿಂಗ್, ಫ್ಯಾಷನ್ ಮತ್ತು ಬಿಸಿನೆಸ್ ಮ್ಯಾನೇಜ್‌ಮೆಂಟ್‌ಗಳ ವಿಷಯದಲ್ಲಿ ಡಿಪ್ಲೊಮಾ ಅಥವಾ ಪದವಿ ಹೊಂದಿದ್ದರೆ ಒಳಿತು. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಪ್ರಾಥಮಿಕ ಹಂತವಾದ ಸೇಲ್ಸ್‌ನಿಂದ ಮ್ಯಾನೇಜರ್‌ವರೆಗಿನ ಎಲ್ಲ ಕೆಲಸಗಳ ಅನುಭವವನ್ನು ಪಡೆದಿರುವುದು ಮುಖ್ಯ. ಹೀಗಾಗಿ ಎಲ್ಲಾ ವೃತ್ತಿಗಳಂತೆ ಫ್ಯಾಷನ್ ಕ್ಷೇತ್ರದಲ್ಲಿಯೂ ಕೆಳ ಹಂತದಿಂದಲೇ ನಮ್ಮ ಅನುಭವದ ಬುಟ್ಟಿ ತುಂಬಿಕೊಂಡರೆ ಭವಿಷ್ಯ ಸುಗಮ. ರಘು ವಿ., ಪ್ರಾಂಶುಪಾಲರು