Advertisement

ವಿವಿಧ ದೇಶಗಳ ಅತಿ ಸಣ್ಣ ಕತೆಗಳು

06:00 AM Aug 12, 2018 | |

ನ್ಯೂಜೀಲೆಂಡಿನ ಕತೆ
ಲೈನ್ಸ್‌ಮನ್‌
-ಜಾನೆಟ್‌ ಪ್ರೇಮ್‌

ನಿನ್ನೆ ಎದುರುಮನೆಯ ಟೆಲಿಫೋನ್‌ ಲೈನನ್ನು ರಿಪೇರಿ ಮಾಡುವುದಕ್ಕಾಗಿ ಮೂವರು ಗಂಡಸರು ತಮ್ಮ ಸಾಧನಗಳ ಜೊತೆ ಒಂದು ವ್ಯಾನಿನಲ್ಲಿ ಬಂದರು. ಇಬ್ಬರು ಮನೆಯೊಳಗೇ ತಮ್ಮ ಕೆಲಸದಲ್ಲಿ ತೊಡಗಿದರು. ಮೂರನೆಯವನು ತನ್ನ ಏಣಿಯನ್ನು ಮನೆಯಿಂದ ಇಪ್ಪತ್ತೈದು ಗಜ ದೂರದಲ್ಲಿದ್ದ ಟಿಲಿಫೋನ್‌ ಕಂಬಕ್ಕೆ ಒರಗಿಸಿದ. ಆ ಏಣಿಯನ್ನು ಹತ್ತಿದವನು ಅದರಾಚೆ ಕಂಬದ ಎರಡೂ ಕಡೆಗಳಲ್ಲಿ ಅಲ್ಲಲ್ಲಿದ್ದ ಮೆಟ್ಟಿಲುಗಳಂಥ ತಡೆಗಳ ಮೇಲೆ ತನ್ನ ಹೆಜ್ಜೆಗಳನ್ನೂರಿ, ಒಂದು ಆಯಕಟ್ಟಿನ ಜಾಗದಲ್ಲಿ ತನ್ನ ಸೇಫ್ಟಿ ಬೆಲ್ಟನ್ನು ಸರಿಮಾಡಿಕೊಂಡು, ಬಿಡುವಾಗಿದ್ದ ಕೈಗಳಿಂದ ತನ್ನ ಕೆಲಸ ಶುರುಮಾಡಿದ. ಅವನು ಕಂಬ ಹತ್ತುವುದನ್ನು ನಾನು ನೋಡಿರಲಿಲ್ಲ. ನನ್ನ ಕಿಟಕಿಯ ಮೂಲಕ ನೋಡಿದಾಗ ಅವನಾಗಲೇ ತನ್ನ ಸೇಫ್ಟಿ ಬೆಲ್ಟಿಗೆ ಜೋತುಬಿದ್ದು, ಅದನ್ನು ನಂಬಿಕೊಂಡು, ಕಂಬದಿಂದ ಹಿಂದಕ್ಕೆ ಬಾಗಿ, ತಾನು ಆರಾಮಾಗಿ, ಜೋಪಾನವಾಗಿ ಇರುವಂತೆ ಕಾಣಿಸುತ್ತ ವೈರುಗಳನ್ನು ಜೋಡಿಸುವ, ತಿರುಚುವ, ಸೂðಗಳನ್ನು ಬಿಚ್ಚುವ, ಹಾಕುವ ಕೆಲಸದಲ್ಲಿ ಮುಳುಗಿಹೋಗಿದ್ದ. 

Advertisement

ನಾನು ಅವನನ್ನೇ ದಿಟ್ಟಿಸಿ ನೋಡಿದೆ. ಕಿಟಕಿಯನ್ನು ಬಿಟ್ಟು ಬರುವುದಕ್ಕೆ ನನಗೆ ಮನಸ್ಸೇ ಇಲ್ಲ.  ಯಾಕೆಂದರೆ, ಆ ಲೈನ್ಸ್‌ಮನ್‌ ಕೆಲಸ ಮಾಡುವುದನ್ನು ನೋಡುವುದರಲ್ಲೇ ತಲ್ಲೀನಳಾಗಿಬಿಟ್ಟಿದ್ದ ನಾನು ಅವನು ಕೆಲಸ ಮುಗಿಸಿದ ಮೇಲೆ ಕಂಬದಿಂದ ಕೆಳಗಿಳಿಯುವುದನ್ನು ನೋಡಬೇಕೆಂದಿದ್ದೆ. 
ಆ ಟೆಲಿಫೋನ್‌ ಕಂಬದ ಬಳಿಯ ಮನೆಗಳವರು ತಮ್ಮ ಕಿಟಕಿಗಳ ಕರ್ಟನ್ನುಗಳನ್ನು ಎಳೆದುಬಿಟ್ಟಿದ್ದರು; ಅವರಿಗೆ ಯಾರೂ ತಮ್ಮನ್ನು ಕದ್ದು ನೋಡುವುದು ಬೇಕಿರಲಿಲ್ಲ. ಹಾಗೆ ನೋಡಿದರೆ ಅವನೇ ಕದ್ದು ನೋಡುವುದಕ್ಕೆ ತುಂಬ ಅನುಕೂಲವಾಗಿದ್ದ ಜಾಗದಲ್ಲಿದ್ದ; ಅವನಿಗೆ ಐದಾರು ಮನೆಗಳ ಮುಂಭಾಗದ ರೂಮುಗಳೊಳಗಿನ ದೃಶ್ಯ ಸ್ಪಷ್ಟವಾಗಿ ಕಾಣಿಸುವಂತಿತ್ತು.     

ಆಕಾಶದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸಾಗುತ್ತಿದ್ದ ಮೋಡಗಳು ಮೊಸರು ಕಡೆಯುತ್ತಿದ್ದವು. ಅದು ವಸಂತಕಾಲದ ಮೊದಲ ಭಾನುವಾರಗಳಲ್ಲಿ ಒಂದು ಭಾನುವಾರ. ಮನೆಗಳ ಹಿತ್ತಲುಗಳಲ್ಲಿ ತಂತಿಗಳ ಮೇಲೆ ಒಗೆದು ಒಣಹಾಕಿದ ಬಟ್ಟೆಗಳು ಗಾಳಿಯಲ್ಲಿ ಪಟಪಟವೆನ್ನುತ್ತಿದ್ದವು. ಯುವಕರು ಸ್ಕೂಟರುಗಳ ಭಾಗಗಳನ್ನು ಕಳಚಿ, ಅವುಗಳ ಹೊಟ್ಟೆಗಳಡಿ ಶರಣಾದವರಂತೆ ಮಲಗಿದ್ದರು; ಹೆಂಗಸರು ತಮಗೆ ಸೇರಿದ ಜಾಗದಲ್ಲಿ ಶನಿವಾರದ ರಾತ್ರಿಯ ಕಸವನ್ನು ಗುಡಿಸುತ್ತಿದ್ದರು. ಬಹುಶಃ ನನಗೆ ಏನನ್ನಾದರೂ ತಿನ್ನುವ ಸಮಯ ಒಂದು ಕಪ್ಪು ಕಾಫಿ, ಒಂದು ಬಿಸ್ಕತ್ತು, ಕೊಳ್ಳೆ ಹೊಡೆಯುತ್ತಿದ್ದ ಹತಾಶೆಯನ್ನು ತುಂಬಿಕೊಳ್ಳಲು ಏನನ್ನಾದರೂ.

ಆದರೂ ನನಗೆ ಕಿಟಕಿಯ ಬಳಿಯ ನನ್ನ ಜಾಗವನ್ನು ಬಿಟ್ಟು ಹೋಗಲಾಗಲಿಲ್ಲ. ವಸಂತಕಾಲದ ಪ್ರಕಾಶಮಾನವಾದ ಬೆಳಕು ನನ್ನ ಕಣ್ಣು ಕುಕ್ಕುವವರೆಗೂ ನಾನು ಆ ಲೈನ್ಸ್‌ಮನ್ನನ್ನು ನೋಡುತ್ತಲೇ ಇದ್ದೆ. ವೈರುಗಳನ್ನು ಕತ್ತರಿಸುವ, ತಿರುಚುವ, ಕೂಡಿಸುವ, ಬೋಲ್ಟಾಗಳನ್ನು ಹಿಂದೆ ಮುಂದೆ ತಿರುಗಿಸುವ ಅವನ ಕೆಲಸವನ್ನು ಗಮನಿಸುತ್ತಲೇ ಇದ್ದೆ. ಅಷ್ಟು ಹೊತ್ತೂ ನನಗೆ ಕಿಟಕಿಯನ್ನು ಬಿಟ್ಟು ಹೋಗುವುದಕ್ಕೇ ಭಯ. ನನ್ನ ದೃಷ್ಟಿ ಟೆಲಿಫೋನ್‌ ಕಂಬದ ತುದಿಯಲ್ಲಿ ತನ್ನ ಸೇಫ್ಟಿ ಬೆಲ್ಟಿನಲ್ಲಿ ತೂಗುಬಿದ್ದಿದ್ದ ಆ ಲೈನ್ಸ್‌ಮನ್ನಿನ ಮೇಲೇ ಇತ್ತು.  
ನೋಡಿ, ನಾನು ಕಾಯುತ್ತಿದ್ದದ್ದು ಅವನು ಬಿದ್ದುಬಿಡಬಹುದೆಂದು. 

ಫ್ರಾನ್ಸಿನ ಕತೆ
ವಿದೂಷಕನ ದೊರೆ
-ರೆನೆ ದ ಒಬಾಲ್ದಿಯ

Advertisement

ಅವನು ದೊರೆಯ ವಿದೂಷಕನಾಗಿದ್ದ ಎನ್ನುವುದಕ್ಕಿಂತ ದೊರೆಯೇ ಅವನ ವಿದೂಷಕನಾಗಿದ್ದ ಎನ್ನಬೇಕು. ಎಂಥ ದೊರೆ ! ಎಂಥ ವಿದೂಷಕ! ಗುರುತು ಹತ್ತದ ಆ ಪ್ರಪಂಚದಲ್ಲಿ ದೊರೆ ಯಾರು ವಿದೂಷಕ ಯಾರು ಎಂದು ಖಚಿತವಾಗಿ ತಿಳಿದುಕೊಳ್ಳುವುದೇನೂ ಸುಲಭವಾಗಿರಲಿಲ್ಲ. ವಿದೂಷಕ ಕುಳ್ಳ. ಅವನು ದೊರೆಯ ಅಂಗಭಂಗಿಗಳನ್ನು ಅಣಕಿಸುತ್ತಿರುವಾಗಲೆಲ್ಲ ಯಾವ ಪ್ರಯತ್ನವೂ ಇಲ್ಲದೆ ನಿಮಗಿಂತ, ನನಗಿಂತ ತುಂಬ ಅಗಾಧವಾಗಿ ಕಾಣಿಸುತ್ತಿದ್ದ. ತುಂಬ ಎತ್ತರಕ್ಕಿದ್ದ, ಅಗಾಧವಾಗಿದ್ದ ದೊರೆಗೆ ತನ್ನ ಎತ್ತರವನ್ನು, ಅಗಾಧತೆಯನ್ನು ಕುಗ್ಗಿಸಿ ಕುಗ್ಗಿಸಿ ಕುಗ್ಗಿಸಿಕೊಂಡು ವಿದೂಷಕನ ಹಾಗೆ ಕುಬ್ಜನಾಗಿಬಿಡುವ ವಿಧಾನ ಗೊತ್ತಿತ್ತು.

ದೊರೆಯೂ ವಿದೂಷಕನೂ ಆಡುತ್ತಿದ್ದ ಕಣ್ಣಾಮುಚ್ಚಾಲೆಗಳಿಗಂತೂ ಲೆಕ್ಕವಿರಲಿಲ್ಲ. ಅವರಿಗೆ ಅದೊಂದು ಹುಚ್ಚು. ಅರಮನೆ ಕೂಡ ಅವರ ಹುಚ್ಚಾಟಗಳಿಗೆ ಹೇಳಿ ಮಾಡಿಸಿದಂತಿತ್ತು. ಆಡುವ ಆಟ ತುಂಬ ಮಜವಾಗಿರಬೇಕೆಂದೇ ದೊರೆ ಹೊಸ ಹೊಸ ಅಡಗುದಾಣಗಳನ್ನು, ಎಲ್ಲಿಗೂ ಕರೆದೊಯ್ಯದ ಮೆಟ್ಟಿಲುಗಳನ್ನು, ಕಿಂಡಿ ಬಾಗಿಲುಗಳನ್ನು, ಗಡಿಗಳನ್ನು, ಎತ್ತರದ ಕಟ್ಟೆಗಳನ್ನು ನಿರ್ಮಿಸಿದ್ದ. 

ಇಬ್ಬರ ಕಣ್ಣಾಮುಚ್ಚಾಲೆ ಗಂಟೆಗಟ್ಟಲೆ, ಅಷ್ಟೇಕೆ ದಿನಗಟ್ಟಲೆ ನಡೆಯುತ್ತಿತ್ತು. ಆಸ್ಥಾನದಲ್ಲಿ ಉದ್ರಿಕ್ತ ವಾತಾವರಣ. ಹೊಳಪುಗಣ್ಣಿನ ದೊರೆ ಏದುಸಿರುಬಿಡುತ್ತ, ಕೂಗಿಕೊಳ್ಳುತ್ತ ಒಂದೇಟಿಗೇ ಮೆಟ್ಟಿಲುಗಳನ್ನು ಇಳಿದುಬಂದಾಗ ಮಂತ್ರಿಗಳಿಗೆ, ಪಾರುಪತ್ಯಗಾರರಿಗೆ ಗೋಡೆಗೆ ಆತುಕೊಳ್ಳುವಷ್ಟು ಮಾತ್ರ ಸಮಯವಿರುತ್ತಿತ್ತು. ಪರಿಚಿತರು ವಿದೂಷಕನನ್ನು ಆಗಾಗ ನೋಡುತ್ತಿದ್ದರೂ ದೊರೆಯನ್ನು ಮಾತ್ರ ವಾರಗಟ್ಟಲೆ ನೋಡದೆ ಹತಾಶರಾಗುತ್ತಿದ್ದರು. ಅಥವಾ ಹೆಂಡದ ಪೀಪಾಯಿಯ ಹಿಂದೆ ಅಡಗಿಕೊಂಡಿದ್ದ ದೊರೆಯೇನಾದರೂ ಕಣ್ಣಿಗೆ ಬಿದ್ದರೆ ಅವನು ವಿದೂಷಕನೆಂದೇ ಭಾವಿಸುತ್ತಿದ್ದರು. 

ದಿನನಿತ್ಯದ ಉಸ್ತುವಾರಿ ಮಾಡುತ್ತಿದ್ದವರೆಲ್ಲರೂ ಮಾಯವಾದರು. ದೊರೆ ಒಮ್ಮೊಮ್ಮೆ ತನ್ನ ಜೊತೆಯ ಆಟಗಾರನನ್ನು ಹುಡುಕಲಾಗದೆ, ಆಟವನ್ನೇ ಕೈಬಿಟ್ಟು ಮತ್ತೆ ಸಿಂಹಾಸನಾರೂಢನಾಗುತ್ತಿದ್ದದುಂಟು. ಅಂಥ ಸಂದರ್ಭಗಳಲ್ಲಿ ವಿದೂಷಕ ದೊರೆಯ ತೊಡೆಗಳ ಸಂಧಿಯಿಂದ ದಿಢೀರೆಂದು ಪ್ರತ್ಯಕ್ಷನಾಗುತ್ತಿದ್ದ. 

ದೊರೆಗೊಬ್ಬ ರಾಣಿ ಇದ್ದಳು. ವಿದೂಷಕನೇ ದೊರೆಯ ನಿಜವಾದ ಸಂಗಾತಿಯಾಗಿದ್ದರಿಂದ ಆಕೆ ಅರಮನೆಯ ಮೂಲೆಯೊಂದರಲ್ಲಿ ಬೇಸರದಿಂದ ನವೆಯುತ್ತಿದ್ದಳು. ವಿದೂಷಕನ ಹುಟ್ಟಾ ಶತ್ರುವಾಗಿದ್ದ ಆಕೆ ಅವನ ವಿರುದ್ಧ ಸದಾ ಸಂಚುಮಾಡುತ್ತಿದ್ದಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪಾಪ! ಅವಳ ಸಂಚು, ಪಿತೂರಿಗಳೆಲ್ಲವೂ ಒಂದೊಂದಾಗಿ ತಲೆಕೆಳಗಾಗುತ್ತಿದ್ದುದನ್ನು ಗಮನಿಸಿದರೆ ವಿದೂಷಕನಲ್ಲಿ ಯಾವುದೋ ಪೈಶಾಚಿಕ ಶಕ್ತಿಯಿದ್ದಂತಿತ್ತು. ಕಡೆಗೆ ರಾಣಿ ತನ್ನ ಕೆಲಸ ಸಾಧಿಸುವುದಕ್ಕಾಗಿ ಹೊಸದೊಂದು ಪ್ರಯೋಗ ಮಾಡಲು ನಿರ್ಧರಿಸಿದಳು.  

ದೊರೆ ಪೆಂಟಕೋಸ್ಟ್‌ ಹಬ್ಬವಾದಂದಿನಿಂದಲೂ ಅಡಗಿಕೊಳ್ಳುವ ಒಂದು ರೋಮಾಂಚಕಾರಿ ಆಟದಲ್ಲಿ ಮಗ್ನನಾಗಿ ವಿದೂಷಕನನ್ನು ಹುಡುಕುತ್ತಿದ್ದವನು ಅಕಸ್ಮಾತ್ತಾಗಿ ತನ್ನ ಹೆಂಡತಿಯ ಶಯ್ನಾಗಾರದ ಬಾಗಿಲು ನೂಕಿಬಿಟ್ಟ! ಒಳಗೆ ಆಕೆ ಬರಿಮೈಯಲ್ಲಿ ನಿಂತಿದ್ದಳು!
“”ಆಹಾ, ಸಿಕ್ಕಿಬಿಟ್ಟೆ. ಕಡೆಗೂ ನಿನ್ನನ್ನು ಹುಡುಕಿಬಿಟ್ಟೆ” ಎಂದು ವಿಜಯೋತ್ಸಾಹದಿಂದ ಕೂಗಿಕೊಳ್ಳುತ್ತ, ಸಂತೋಷದಿಂದ ಕೇಕೆ ಹಾಕುತ್ತ ಹೊರಗೆ ಓಡಿದ ದೊರೆ. ಈಗ ಅವಿತುಕೊಳ್ಳುವ ಸರದಿ ಅವನದು. 

ಮಹಾರಾಣಿ ಈ ಹದ್ದುಮೀರಿದ ವರ್ತನೆಯನ್ನು ಸಹಿಸಲಾಗದೆ ಅಸು ನೀಗಿದಳು.ಆಕೆಯ ಶವಸಂಸ್ಕಾರದಲ್ಲಿ ದೊರೆಯೂ ವಿದೂಷಕನೂ ಒಬ್ಬನಿಗೊಬ್ಬನು ಸಿಕ್ಕಿಬಿದ್ದು, ಒಬ್ಬನು ಇನ್ನೊಬ್ಬನ ಬೆನ್ನು ತಟ್ಟುತ್ತ ಕಣ್ಣಿನಲ್ಲಿ ನೀರು ಸುರಿಯುವವರೆಗೂ ಮನಃಪೂರ್ತಿ ನಕ್ಕಿದ್ದೇ ನಕ್ಕಿದ್ದು. 
ಆಮೇಲಷ್ಟೇ ದೇಶದ ಪ್ರಜೆಗಳೆಲ್ಲರೂ ಶಾಂತಿಯಿಂದ, ಸಮಾಧಾನದಿಂದ ಇರುವಂತಾಯಿತು.

ಬ್ರೆಜಿಲ್‌ನ ಕತೆ
ಕರೆಯದೆ ಬಂದವನು
-ಮಿಲ್ತನ್‌ ಹಾತೂಮ್‌

ನಾನು ಬರೆಯುವಾಗ ಓದುಗನ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ, ಕಳೆದ ವಾರ ಸರಿ ರಾತ್ರಿಯಲ್ಲಿ ಒಂದು ಬಾರಿನಲ್ಲಿ ಟೇಬಲಿನ ಬಳಿ ಕುಳಿತು ಹೋಹೆರ್‌ ಲೂಯಿಸ್‌ ಬೋರೆØಸ್‌ ಬರೆದ ಕತೆಯೊಂದನ್ನು ಓದುತ್ತಿ¨ªಾಗ ನನ್ನದೇ ವಯಸ್ಸಿನವನೊಬ್ಬ ಅದೇನೊ ಹಗೆ ಸಾಧಿಸುವವನಂತೆ ನನ್ನ ಬಳಿಗೆ ಬಂದ:

“”ನಾನೊಬ್ಬ ಓದುಗ. ನಿನ್ನ ಲೆಕ್ಕ ಚುಕ್ತಾ ಮಾಡುವುದಕ್ಕಾಗಿಯೇ ಬಂದಿದ್ದೇನೆ.” 
ನಾನೇನೋ ಕೇಳಬೇಕೆಂದಿದ್ದೆ. ಆದರೆ ಅವನು- 
“”ಎರಡು ಕಾರಣಗಳಿಗಾಗಿ: ಒಂದು, ನಿನ್ನ ಕಾದಂಬರಿಯಲ್ಲಿ ನನ್ನನ್ನ ಕೈಬಿಟ್ಟಿದ್ದಿ. ಇನ್ನೊಂದು, ತುಂಬ ಗಂಭೀರವಾದ್ದು. ಅದೇ     ಕಾದಂಬರಿಯಲ್ಲಿ  ನೀನು ನಮ್ಮಪ್ಪನನ್ನು ಕೊಂದಿದ್ದಿ”
ನಾನು ಅರ್ಜೆಂಟೀನಿಯನ್‌ ಲೇಖಕನ ಪುಸ್ತಕವನ್ನು ಮುಚ್ಚಿಟ್ಟವನು ಒಬ್ಬ ಶತ್ರುವಿನಂತೆ ಮಾತನಾಡಿದ ಈ ಆಗಂತುಕನನ್ನು ತುಸು ಹೆದರಿಕೆಯಿಂದಲೇ ನೋಡಿದೆ. ಅದು ಹೇಗೋ ಗೊತ್ತಿಲ್ಲ, ನನ್ನೊಳಗಿಂದ ಧ್ವನಿಯೊಂದು ಹೊರಗೆ ಬಂದಿತು:

“”ನಿನ್ನನ್ನು ಕೈಬಿಟ್ಟಿದ್ದೇನೆ? ನಿಮ್ಮ ತಂದೆಯನ್ನು ಕೊಂದುಬಿಟ್ಟೆ?”
“”ಕರೆಕುr. ನಿನ್ನ ಕಾದಂಬರೀಲಿರೋದು ಬರೀ ನಿಂದೆ, ಸುಳ್ಳು. ನೀನು ನೀಚತನದಿಂದ ಕಡೆಗಣಿಸಿದ ಮೂರನೆಯ ತಮ್ಮ ನಾನು. ಅಲ್ಲದೆ ನಮ್ಮಪ್ಪ ಇನ್ನೂ ಬದುಕಿ¨ªಾನೆ. ನಮ್ಮಪ್ಪ… ಅವನಿಗೆ ನೀನು ಮಾಡಿದ್ದು ತುಂಬಾ ಅನ್ಯಾಯ”
ನನಗೀಗ ಕೇಳಿಸಿದ್ದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತ ನಿರ್ಜನ ಬೀದಿಯತ್ತ ನೋಡಿದೆ. ಇರಿಚಲು ಮಳೆ. ಬೀದಿ ಬದಿಯಲ್ಲಿ ಯಾರೂ ಇಲ್ಲ. ಬಾರಿನ ವೆಯrರ್‌ ಮಟಮಾಯ. ತೆರೆದ ಬಾಗಿಲಿನ ಮೂಲಕ ಬೀಸಿಬರುತ್ತಿರುವ ತಂಗಾಳಿ. ಒಂದು ಗುಟುಕು ಕೊನ್ಯಾಕ್‌ ಹೀರಬೇಕೆಂದುಕೊಂಡದ್ದೇ ನನ್ನ ಕೈ ನಡುಗತೊಡಗಿತು. ನಾನು ಹೆದರಿಕೊಂಡಿದ್ದೇನೆಂದು ಅವನಿಗೆ ಗೊತ್ತಾಗುವುದು ತರವಲ್ಲವೆನ್ನಿಸಿ ಅವನನ್ನು ನೋಡದೆಯೇ ಮೆಲ್ಲನೆ ಮೇಲೆ¨ªೆ. ಅಲ್ಲಿ ನಾವಿಬ್ಬರೇ ಒಂಟಿಯಾಗಿದ್ದೇವೆಂದು ಅನ್ನಿಸಿತು. ಅದೇ ಹೊತ್ತಿಗೆ ಅವನು ನನಗಿಂತ ಸಾಕಷ್ಟು ಬಲವಾಗಿದ್ದನೆಂದು ಕೂಡ ಗೊತ್ತಾಯಿತು. ಒಂದು ಕ್ಷಣ, ಆರೋಪ-ಪ್ರತ್ಯಾರೋಪಗಳ ನಂತರ ನಮ್ಮ ಮಾತು ಕೊನೆಯಾಗಬಹುದೆಂದು ಅನ್ನಿಸಿದ್ದು ನಿಜ. ಯಾರೋ ಕುಡುಕ ನಮ್ಮ ಬ್ಲಾಕಿನ ಆಚೆ ಎಲ್ಲೋ ಕೂಗಿಕೊಂಡ. ಆ ಸದ್ದು ಮೌನವನ್ನು ಭೇದಿಸಿ ನಮ್ಮ ಉದ್ವೇಗವನ್ನು ತುಸು ಕಡಿಮೆಮಾಡಿತು. ಇದ್ದಕ್ಕಿದ್ದಂತೆ ಅವನು ತನ್ನ ಬಲಗೈಯನ್ನು ಜೇಬಿನೊಳಗಿಟ್ಟು ಇನ್ನೊಂದು ಕೈಯ ಬೆರಳುಗಳನ್ನು ಬಿಚ್ಚಿದ, ಒಬ್ಬ ಮಂತ್ರವಾದಿಯ ಹಾಗೆ. ಎಂಥ ಕರುಣಾಜನಕ ದೃಶ್ಯ! ಅವನ ಆ ಅಂಗೈಯಲ್ಲಿ ತುಕ್ಕು ಹಿಡಿದ ಒಂದು ಅಲಗು! ಅವನು ಗಂಭೀರವಾಗಿ ಹೇಳಿದ:

“”ನಿನ್ನಂಥ ಸುಳ್ಳುಗಾರನಿಗೆ, ಹೆದರುಪುಕ್ಕನಿಗೆ ತಪ್ಪಿಸಿಕೊಳ್ಳುವ ದಾರಿಯೇ ಇಲ್ಲ.”
“”ನಾನು ಗಾಬರಿಯಿಂದ ಮೆಲ್ಲನುಸುರಿದೆ: ಒಂದು ದಾರಿ ಉಂಟು”
ಅವನು ತನ್ನ ಬೆರಳುಗಳನ್ನು ಮತ್ತೆ ಮಡಿಚಿಕೊಂಡವನು ಕಳ್ಳನ ಹಾಗೆ ಬಾಗಿಲಿನತ್ತ ನೋಡಿ, ಒಂದು ಬಗೆಯ ತಿರಸ್ಕಾರದಿಂದಲೇ ಕೇಳಿದ:

“”ಏನದು?”
“”ಇನ್ನೊಂದು ಪುಸ್ತಕ ಬರೆಯುವುದು- ಕತೆಯಲ್ಲಿ ಮೂರನೆಯ ತಮ್ಮನನ್ನು ಸೇರಿಸುವುದಕ್ಕಾಗಿ; 
ಅವನ ತಂದೆಯನ್ನು ಬದುಕಿಸುವುದಕ್ಕಾಗಿ” 
ಮತ್ತೆ ನಾನು ಮಾಡಿದ್ದೂ ಅದೇ: ಉಸಿರಾಡುವುದಕ್ಕೂ ಬಿಡುವು ಕೊಡದೆ ಹುಚ್ಚನಂತೆ ಕುಡಿಯುತ್ತ, ಬೆಳಗಾಗುವವರೆಗೂ ಬರೆಯುತ್ತ ಆ ದುಃಸ್ವಪ್ನದಿಂದ ಹೊರಗೆ ಬಂದದ್ದು. 

ಎಸ್‌. ದಿವಾಕರ್‌

Advertisement

Udayavani is now on Telegram. Click here to join our channel and stay updated with the latest news.

Next