Advertisement

ಶರಣರ ದಾರಿಯಲಿ ನಡೆದ ಶಿವಯೋಗಿಗಳು

06:11 PM Mar 05, 2022 | Team Udayavani |

ತೆಲಸಂಗ: ಜಾತಿಯಿಂದಲ್ಲ ನೀತಿಯಿಂದ ಶ್ರೇಷ್ಠರು ಎಂಬ ಅದ್ಭುತವಾದ ಪರಿಕಲ್ಪನೆಯೊಂದಿಗೆ ಶೋಷಣೆರಹಿತ ಸಮಾಜವನ್ನು ಕಟ್ಟಲು ಬದುಕಿದ ಬಸವಾದಿ ಶಿವಶರಣರ ದಾರಿಯಲ್ಲಿ ಕೇವಲ ಆಡದೆ, ಬೋಧಿಸದೆ ಮೌನವಾಗಿಯೇ ನಡೆದು ತೋರಿಸಿದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಆದರ್ಶ ಯುವ ಪೀಳಿಗೆಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.

Advertisement

ಗ್ರಾಮದಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವದ ನಿಮಿತ್ತ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಸವಣ್ಣ ದುಡಿತಕ್ಕೆ ಗೌರವ ತಂದುಕೊಟ್ಟರು. ಅದೇ ದುಡಿತವನ್ನ ದೈವತ್ವಕ್ಕೆ ಏರಿಸಿದವರು. ಕಾಯವೇ ಕೈಲಾಸ ಎನ್ನುವುದರ ಮೂಲಕ ಇಡಿ ಜಗತ್ತಿಗೆ ಕಾಯಕದ ಶ್ರೇಷ್ಠತೆಯನ್ನು ಸಾರಿದರು. ದಾಸೋಹ, ಶಿವಯೋಗ, ಕಾಯಕವು ದೈಹಿಕ, ಮಾನಸಿಕ ಪರಿಪೂರ್ಣತೆಯನ್ನು ಕಾಪಾಡುತ್ತದೆ.

ಉಪವಾಸದಂತಹ ಆಚರಣೆ ಮೂಲಕ ದೇಹವನ್ನು ದಂಡಿಸಬೇಡಿ. ಮೈಮುರಿದು ದುಡಿಯುವುದನ್ನು ಕಲಿಯಿರಿ. ಬಸವಣ್ಣ ಅಂದರೆ ಬೆಳಕು, ಸಮಾನತೆ, ದಾಸೋಹ. ಅದರ ಮುಂದುವರೆದ ಭಾಗವಾಗಿ ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆಯ ವಿರುದ್ಧ ಮೌನವಾಗಿ, ಆಡದೆ ಆಚರಣೆಗೆ ತಂದ, ನುಡಿಯದೆ ನಡೆದು ತೋರಿಸಿದ ಏಕೈಕ ಯೋಗಿ ಮುರುಘೇಂದ್ರ ಶಿವಯೋಗಿಗಳು. ಇಂತಹ ಶ್ರೇಷ್ಠ ಶರಣರ ಚಿಂತನೆಯನ್ನು ಸಾಕಾರಗೊಳಿಸಿ ಬದುಕನ್ನು ಕಟ್ಟಿಕೊಳ್ಳಲು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಿ ಎಂದರು. ತೆಲಸಂಗ ಹಿರೇಮಠದ ವೀರೇಶ್ವರ ಸ್ವಾಮೀಜಿ, ಡಾ.ಬಸವಚೇತನ ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ ಆಶೀರ್ವಚನ ನೀಡಿದರು.

25 ಗ್ರಾಮದಲ್ಲಿ ಕಾರ್ಯಕ್ರಮ
ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವದ ನಿಮಿತ್ತ ಅಥಣಿ ತಾಲೂಕಿನ 25 ಗ್ರಾಮಗಳಲ್ಲಿ ನಿತ್ಯ ಪ್ರವಚನ, ಪಾದಯಾತ್ರೆ, ಧರ್ಮ ಸಭೆ ಹೀಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಸವಾದಿ ಶರಣರ ಚಿಂತನೆಯ ಅವಲೋಕನದ ಮೂಲಕ ಜಾತಿ ವ್ಯವಸ್ಥೆ, ದುಶ್ಚಟ, ಅಸಮಾನತೆ ಸೇರಿದಂತೆ ಸಮಾಜ ಕಂಟಕ ದೂರಮಾಡಿ ಮಾನವಿಯ ಮೌಲ್ಯಸಾರುವ ಕೆಲಸ ಮಾಡುತ್ತಿದ್ದು, ಪ್ರತಿದಿನ ಸಂಜೆ 6:30ರಿಂದ ನಡೆಯುವ ಪ್ರವಚ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖೆಯಲ್ಲಿ ಜನ ಪಾಲ್ಗೊಳ್ಳಬೇಕು.
ಶ್ರೀ ಶಿವಬಸವ
ಸ್ವಾಮೀಜಿ, ಗಚ್ಚಿನಮಠ, ಅಥಣಿ

Advertisement

Udayavani is now on Telegram. Click here to join our channel and stay updated with the latest news.

Next