Advertisement
ಕಲಾಸಂಗಮದ ವಿಜಯಕುಮಾರ್ ಕೊಡಿಯಾಲ್‌ಬೈಲ್ ನೇತೃ ತ್ವದ ತಂಡ ಈಗಾಗಲೇ ಹಲವು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿ ಯಶಸ್ವಿಯಾಗಿದೆ. ಈ ಬಾರಿಯ ಶಿವದೂತೆ ಗುಳಿಗೆ ನಾಟಕದ ಮೂಲಕ ತುಳು ರಂಗಭೂಮಿಯಲ್ಲೇ ಹೊಸ ಸಂಚಲನ ಮೂಡಿಸಿದೆ. ಈ ನಾಟಕದಲ್ಲಿ ಎಲ್ಲರಿಗೂ ತಿಳಿದಿರುವ ಕಥೆಯನ್ನೇ ತಿಳಿಸಲಾಗಿದೆ. ಆದರೆ ಅಲ್ಲಿನ ಒಂದೊಂದು ದೃಶ್ಯವೂ ಅದ್ದೂರಿಯಾಗಿ ಮತ್ತು ಹೊಸತನದ ಪ್ರತೀಕವಾಗಿ ನಮ್ಮ ಮುಂದಿದೆ. ಒಂದು ನಾಟಕವನ್ನು ಈ ರೀತಿಯಲ್ಲೂ ಮಾಡಬಹುದೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವಂತಿದೆ.
Related Articles
ಧರ್ಮೊನು ದಂಟ್‌ಂದ ಕೆರುವೆ ಶಿವದೂತೆ ಗುಳಿಗೆ
ಮುಕ್ಕಣ್ಣನ ಮೈ ಜತ್ತಿ ಬೆಗರ್
ಉಂಡಾಂಡ್ ಸತ್ಯೋದ ತುಡರ್
ಬೆಮ್ಮೆರೆ ಸೃಷ್ಟಿ, ಗುಳಿಗನ ದೃಷ್ಟಿ,
ನರಲೋಕ ಜತ್ತಿ ಆ ಮಲ್ಲ ಶಕ್ತಿ ಶಿವದೂತೆ ಗುಳಿಗೆ
ಬಾಜೆಲ್‌ಗ… ಸಾಗರೊನೆ ಪರುವೆ
ಬಡವಾಂಡ ಏರೆನಲಾ ಬುಡಯೆ
ಬತ್ತ್ಂಡ ಬಡವುಡೇ ಬರುವೆ
ತಣಿತ್‌ಂಡ ಅಭಯೊನೆ ಕೊರುವೆ ಶಿವದೂತೆ ಗುಳಿಗೆ
ಎಂಬ ಹಾಡು ಪಟ್ಲ ಸತೀಶ್ ಶೆಟ್ಟಿಯವರ ಕಂಠದಿಂದ ಹೊರಹೊಮ್ಮಿದ್ದು, ಇವರು ಮತ್ತು ದೇವದಾಸ್ ಕಾಪಿಕಾಡ್ ಅವರು ಹಾಡಿರುವ ಹಾಡುಗಳು ಇಡೀ ನಾಟಕಕ್ಕೆ ಮುಕುಟಪ್ರಾಯದಂತಿದೆ. ಒಂದು ಸಂದರ್ಭದಲ್ಲಿ ಕತ್ತಲೆಯಲ್ಲಿ ಇದೇ ಹಾಡಿಗೆ ಗುಳಿಗನ ನೃತ್ಯ ಅತ್ಯದ್ಭುತವಾಗಿ ಮೂಡಿ ಬಂದಿದೆ.
Advertisement
ಪಾಡ್ದನದ ಹಿನ್ನೆಲೆ, ಗುಳಿಗನ ಸ್ತುತಿ ಕಿವಿಗೆ ಮುದ ನೀಡಿದರೆ, ಕತೆಗೆ ಸಹಜವಾಗಿಯೇ ಇರುವ ಕ್ರೌರ್ಯ, ಅಟ್ಟಹಾಸಗಳು ಅತಿ ಎನಿಸಿದರೂ ಅನಿವಾರ್ಯವಾಗಿದೆ. ದೈವದ ನೇಮದ ಮಹತ್ವ ಅರಿಯದ ಹೊಸ ತಲೆಮಾರಿಗೆ ಕತೆ ಹೇಳುವಲ್ಲಿಂದ ಆರಂಭವಾಗುವ ನಾಟಕ ಬಳಿಕ ಕತೆಗೆ ಪೂರಕವಾಗಿ ಪೌರಾಣಿಕ ದೃಶ್ಯಗಳು, ಜತೆಗೆ ಭೂಲೋಕಕ್ಕಿಳಿದ ಆಧುನಿಕ ದೃಶ್ಯಗಳೊಂದಿಗೆ ಸೇರಿ ಪೌರಾಣಿಕ ಮತ್ತು ನವ್ಯ ನಾಟಕದ ಮಿಶ್ರಣವಾಗಿ ಸಾಗಿ ಕೊನೆಯ ದೃಶ್ಯದಲ್ಲಿ ಕತೆಗೊಂದು ದೈವಜಾಗೃತಿಯ ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಧ್ವನಿಯನ್ನು ಮುದ್ರಿಸಿಕೊಂಡಿದ್ದ ಕಾರಣ ಅದರಲ್ಲಿ ಸ್ಪಷ್ಟತೆಯಿರುವುದು ನಾಟಕದ ಹೆಚ್ಚುಗಾರಿಕೆ. ಧ್ವನಿ ಮುದ್ರಣಕ್ಕೆ ಕಾರಣ ಹಲವಿವೆ ಎಂದು ಕೊಡಿಯಾಲ್‌ಬೈಲ್ ಹೇಳುತ್ತಿದ್ದು, ಕಲಾವಿದರ ಬಾಯ್ತಪ್ಪಿ ತುಳುವೇತರ ಶಬ್ದ ಬರದಂತೆ ನೋಡಿಕೊಳ್ಳೋದು, ಏರು ದನಿಯೇ ಹೆಚ್ಚಿರುವುದರಿಂದ ಕಲಾವಿದರ ಆರೋಗ್ಯ ಕಾಪಾಡೋದು, ಪಾತ್ರಕ್ಕೆ ತಕ್ಕ ಸ್ವರ ಗಾಂಭೀರ್ಯ ನೀಡೋದು ಮುಂತಾದವು ಅವುಗಳಲ್ಲಿ ಕೆಲವು ಅಂಶಗಳು. ಜತೆಗೆ ಬೆಳಕಿನ ಕೌಶಲ ಕ್ಷಣಕ್ಷಣಕ್ಕೂ ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ಪರಮಾನಂದ ಸಾಲ್ಯಾನ್ ಸಸಿಹಿತ್ಲು ಅವರ ಸಂಭಾಷಣೆಯು ತುಳುವಿನ ಭಾಷಾ ಶ್ರೀಮಂತಿಕೆ ಹಾಗೂ ಜಾನಪದ ಸೊಬಗಿಗೆ ಸಾಕ್ಷಿಯಾಗಿದೆ.
ಪುತ್ತಿಗೆ ಪದ್ಮನಾಭ ರೈ