ಲಾಸ್ ಏಂಜಲೀಸ್: ಏಕಾಂಗಿಯಾಗಿದ್ದ ಮೂಕಿಯೊಬ್ಬಳು ಸಮುದ್ರ ಜೀವಿಯೊಂದಿಗೆ ಮಾನವೀಯ ಭಾವನೆಗಳನ್ನು ಬೆಸೆಯುವ ವಿಶಿಷ್ಟ ಕತೆಯುಳ್ಳ ಮೆಕ್ಸಿಕೋದ ಚಿತ್ರ “ಶೇಪ್ ಆಫ್ ದ ವಾಟರ್’, ನಾಲ್ಕು ಆಸ್ಕರ್ ಪ್ರಶಸ್ತಿಗಳಿಗೆ ಪಾತ್ರವಾಗಿದೆ.
ಶ್ರೇಷ್ಠ ಚಿತ್ರ ವಿಭಾಗದಲ್ಲಿ ತನಗೆ ತೀವ್ರ ಸ್ಪರ್ಧೆಯೊಡ್ಡಿದ್ದ “ಗೆಟ್ ಔಟ್’ ಹಾಗೂ “ತ್ರೀ ಬಿಲ್‌ಬೋರ್ಡ್ಸ್ ಔಟ್‌ಸೈಡ್ ಎಬ್ಬಿಂಗ್, ಮಿಸೌರಿ’ ಚಿತ್ರಗಳನ್ನು ಹಿಂದಿಕ್ಕಿದ “ದ ಶೇಪ್ ಆಫ್ ವಾಟರ್’ ಈ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಚಿತ್ರಕ್ಕಾಗಿ ದುಡಿದ ಗಿಲ್ಲೆರ್ಮೊ ಡೆಲ್ ಟೊರೊ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಗೆದ್ದರೆ, ಅಲೆಕ್ಸಾಂಡ್ರೆ ಡೆಸ್ಪಾಟ್ ಶ್ರೇಷ್ಠ ಹಿನ್ನೆಲೆ ಸಂಗೀತ ನಿರ್ದೇಶಕ ಹಾಗೂ ಪಾಲ್ ಡಿ. ಆಸ್ಟೆರ್‌ಬೆರ್ರಿ ಶ್ರೇಷ್ಠ ನಿರ್ಮಾಣ ವಿನ್ಯಾಸಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಅಲಿಗೆ ನಿರಾಸೆ: ಭಾರತೀಯ ನಟ ಅಲಿ ಫಸಲ್ ನಟಿಸಿದ್ದ “ವಿಕ್ಟೋರಿಯಾ ಆ್ಯಂಡ್ ಅಬ್ದುಲ್’ ಚಿತ್ರವು “ಶ್ರೇಷ್ಠ ಮೇಕಪ್ ಹಾಗೂ ಕೇಶಾಲಂಕಾರ’ ಮತ್ತು “ಶ್ರೇಷ್ಠ ವಸ್ತ್ರವಿನ್ಯಾಸ’ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸಿತ್ತು. ಆದರೆ, ಪ್ರಶಸ್ತಿ ಪಡೆಯುವಲ್ಲಿ ವಿಫಲವಾಯಿತು.
ಶಶಿ, ಶ್ರೀದೇವಿಗೆ ಶ್ರದ್ಧಾಂಜಲಿ: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ಶಶಿಕಪೂರ್ ಹಾಗೂ ಶ್ರೀದೇವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಕ್ಕೆ ಬಾಲಿವುಡ್ ಚಿತ್ರರಂಗ, ಹಾಲಿವುಡ್‌ಗೆ ಧನ್ಯವಾದ ಅರ್ಪಿಸಿದೆ.
ಸಮಾರಂಭದಲ್ಲಿ, “ಇನ್ ಮೆಮೊರಿಯಂ’ ಎಂಬ ಹಾಡಿನಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ನಿಧನರಾದ ಮಾಜಿ ಜೇಮ್ಸ್ ಬಾಂಡ್ ಸರ್ ರೋಜರ್ ಮೂರೆ ಸೇರಿ ಜಗತ್ತಿನ ಸಿನಿಮಾ ರಂಗದ ಸಾಧಕರನ್ನು ನೆನೆಯುವಾಗ ಶಶಿಕಪೂರ್, ಶ್ರೀದೇವಿ ಅವರನ್ನೂ ಸ್ಮರಿಸಲಾಯಿತು.