Advertisement

ಮತ್ತೆ ಬರದ ಛಾಯೆ: ಬಿಸಿಲಿನ ತಾಪಕ್ಕೆ ಒಣಗುತ್ತಿದೆ ತೊಗರಿ ಬೆಳೆ

11:13 AM Nov 17, 2018 | |

ಶಹಾಬಾದ: ಹೋಬಳಿ ವಲಯದಲ್ಲಿರುವ ರೈತರು ಮಳೆರಾಯನ ಅವಕೃಪೆಗೆ ಒಳಗಾಗಿ ಸಂಪೂರ್ಣ ಕಂಗಾಲಾಗಿದ್ದಾರೆ. ಬೆಳೆದಂತಹ ಬೆಳೆ ತಮ್ಮ ಮುಂದೆ ಬಾಡುತ್ತಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಮತ್ತೂಮ್ಮೆ ಈ ಭಾಗದ ರೈತರು ಬರದ ಛಾಯೆಯಿಂದ ಚಿಂತಾಜನಕರಾಗಿದ್ದಾರೆ.

Advertisement

ಮುಂಗಾರು ಮಳೆ ಅಲ್ಪ ಸ್ವಲ್ಪ ಬಂದಿದ್ದರಿಂದ ಬೆಳೆ ಸಾಧಾರಣವಾಗಿತ್ತು. ಹಿಂಗಾರಿನಲ್ಲಿಯೂ ಮಳೆ ಬಂದರೆ ಬೆಳೆ ಚೇತರಿಸಿಕಳ್ಳುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಈ ಭಾಗದ ಪ್ರಮುಖ ಬೆಳೆಯಾದ ತೊಗರಿ ಬಿಸಿಲಿನ ತಾಪಕ್ಕೆ ಒಣಗಲು ಆರಂಭಿಸಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. 

ಹೋಬಳಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ಇರುವುದರಿಂದ ಬರದ ಭೀತಿಯ ವಾತಾವರಣ ಮುಂದುವರಿದಿದೆ. ಹೂ ಬಿಟ್ಟು ಬೆಳೆದು ನಿಂತ ತೊಗರಿ ಬೆಳೆ ತೇವಾಂಶದ ಕೊರತೆಯಿಂದ ಒಣಗುತ್ತಿದೆ. ಹಾಗೇ ಹೂಗಳು ಉದುರುತ್ತಿರುವುದರಿಂದ ತೊಗರಿ ಬೇಸಾಯಗಾರರು ಹಿದೆಂದಿಗಿಂತಲೂ ಕಷ್ಟದಲ್ಲಿದ್ದಾರಲ್ಲದೇ ಸಾಲದ ಹೊರೆಯಿಂದ ತತ್ತರಿಸಿ ಹೋಗಿದ್ದಾರೆ. 

ಹೋಬಳಿ ವಲಯದಲ್ಲಿ ಸುಮಾರು 18070 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ತೊಗರಿ ಬೆಳೆದಿದ್ದಾರೆ. ಬೆಳೆಗಾಗಿ ಈಗಾಗಲೇ ಸಾಲ ಮಾಡಿ ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಅಲ್ಲದೇ ತೊಗರಿ ಕಾಯಿ ಕೊರಕ ಹಾವಳಿಯಿಂದ ತಪ್ಪಿಸಲು ಎರಡು ಬಾರಿ ಎಣ್ಣೆ ಸಿಂಪರಣೆ ಮಾಡಿದ್ದಾರೆ. 

ಆದರೆ ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ನಾಶ ಆಗುತ್ತಿರುವುದರಿಂದ ರೈತರ ಭವಿಷ್ಯ ಮಂಕಾಗಿದೆ. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರದೇ ಇರುವುದರಿಂದ ಸಾಲ ಮಾಡಿದ ರೈತರು ಸಾಲದ ಬಾಧೆಯಿಂದ ಬಳಲುತ್ತಿದ್ದಾರೆ.
 
ಹಿಂಗಾರಿನಲ್ಲಿ ಸ್ವಲ್ಪ ಮಳೆಯಾದರೆ ಸಾಕು ಜೋಳ ಬಿತ್ತನೆ ಮಾಡಬೇಕೆಂದು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಹಿಂಗಾರಿನಲ್ಲಿ ಮಳೆ ಬಾರದಿರುವುದರಿಂದ ಮಳೆಗಾಗಿ ಮುಗಿಲ ಕಡೆಗೆ ನೋಡುವ ಪರಿಸ್ಥಿತಿ ರೈತರಿಗೆ ಬಂದೊದಗಿದೆ.
 
ತಾಲೂಕಿನಲ್ಲಿ ಅಕ್ಟೋಬರ್‌ ತಿಂಗಳಲ್ಲಿ 58 ಮೀ. ಮೀ ವಾಡಿಕೆ ಮಳೆ ಆಗಬೇಕಿತ್ತು.ಆದರೆ ಕೇವಲ 4 ಮೀ.ಮೀ ಮಳೆಯಾಗಿದ್ದರಿಂದ, ಸರಿಸುಮಾರು ಶೇ. 93ರಷ್ಟು ಮಳೆ ಕೊರತೆಯಾಗಿದೆ. ಅಲ್ಲದೇ ಹಲವು ವರ್ಷಗಳಿಂದ ರೈತರು ಸಾಕಿದ ಎತ್ತು, ದನಕರುಗಳಿಗೆ ಮೇವಿನ ಕೊರತೆ ಉಂಟಾಗಲಿದೆ. ಈ ಪರಿಸ್ಥಿತಿಯಲ್ಲಿ ರೈತನಿಗೆ ಜಾನುವಾರುಗಳನ್ನು ಪೋಷಣೆ ಮಾಡುವುದು ಕಷ್ಟದ ಕೆಲಸವಾಗಿದೆ. 

Advertisement

ಆದ್ದರಿಂದ ರೈತನು ಅನಿವಾರ್ಯವಾಗಿ ತಾನು ಸಾಕಿದ ದನಕರುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ರೈತನ ಈ ಕಷ್ಟದ ಪರಿಸ್ಥಿತಿ ಅರಿತು ಸರಕಾರ ಅಗತ್ಯ ನೆರವು ನೀಡಿ, ಗೋ ಶಾಲೆ ಆರಂಭಿಸಿ ಮೇವು ಪೂರೈಕೆ ಮಾಡಿ ರೈತರು ಸಾಕಿಕೊಂಡಿದ್ದ ಜಾನುವಾರುಗಳನ್ನು ಉಳಿಯುವಂತೆ ಮಾಡಬೇಕಿದೆ. ಶೀಘ್ರವಾಗಿ ಸಂಪೂರ್ಣ ಸಾಲ ಮನ್ನಾ ಮಾಡಿ ರೈತನ ಬಾಳಿಗೆ ನೆರವು ನೀಡಬೇಕು. ಇಲ್ಲದಿದ್ದರೆ ದನಕರುಗಳು ಕಸಾಯಿಖಾನೆ ಪಾಲಾಗುವದು ಖಚಿತ. ಇದನ್ನು ತಪ್ಪಿಸಿ ಸರಕಾರ ರೈತ ಪರ ಕಾಳಜಿ ಮೆರೆಯಬೇಕಾಗಿದೆ ಎಂದು ರೈತ ಸದಾನಂದ ಕುಂಬಾರ ಒತ್ತಾಯಿಸಿದ್ದಾರೆ. 

ಮುಂಗಾರು ಮಳೆ ಸರಿಯಾಗಿ ಪ್ರಾರಂಭವಾಗಿ ಶುಭಾರಂಭ ನೀಡಿದ್ದರಿಂದ ಬಿತ್ತನೆ ಕಾರ್ಯ ಮಾಡಿದ್ದೆವು. ಈ ಬಾರಿ ಉತ್ತಮ ಇಳುವರಿ ಪಡೆಯಬಹುದೆಂಬ ಆಶಾಭಾವನೆ ಇತ್ತು. ಆದರೆ ಮಳೆ ಮುನಿಸಿಕೊಂಡಿದ್ದರಿಂದ ಸಾಲ ಮಾಡಿ ಬೆಳೆದ ಬೆಳೆ ಕಣ್ಮುಂದೆ ಬಾಡುತ್ತಿರುವುದನ್ನು ನೋಡಿ ಚಿಂತೆಯಾಗಿದೆ.
ಸಾಬಯ್ಯ ಗುತ್ತೇದಾರ, ಮುತ್ತಗಾ ರೈತ

ಮುಂಗಾರಿನಲ್ಲಿ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಹಿಂಗಾರಿನಲ್ಲಿ ಮಳೆಯಾಗದೇ ತೇವಾಂಶದ ಕೊರತೆಯಿಂದ ತೊಗರಿ ಬೆಳೆ ಒಣಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು.
ಅರುಣ ಪಟ್ಟಣಕರ್‌, ಬಿಜೆಪಿ ಹಿರಿಯ ಮುಖಂಡ

„ಮಲ್ಲಿನಾಥ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next