ವಾಹನ, ರಿಯಲ್ ಎಸ್ಟೇಟ್, ಉತ್ಪಾದನೆ ಬಳಿಕ ಇದೀಗ ಕುಸಿತದ ಸರದಿ ಟೆಲಿಕಾಂ ಉದ್ಯಮದ್ದು. ಈ ಕ್ಷೇತ್ರದಿಂದ ಬರುತ್ತಿರುವ ಸುದ್ದಿಗಳು ತೀರಾ ಕಳವಳ ಉಂಟು ಮಾಡುತ್ತಿವೆ. ಬ್ರಿಟನ್ ಸಹಯೋಗದ ವೋಡಾಫೋನ್ -ಐಡಿಯಾ ಕಂಪೆನಿ ಈಗಾಗಲೇ ದಿವಾಳಿ ಘೋಷಿಸುವ ಚಿಂತನೆಯಲ್ಲಿದೆ. ಇದರ ಬೆನ್ನಿಗೆ ಏರ್‌ಟೆಲ್ ಕಂಪೆನಿ ಅಗಾಧ ಮೊತ್ತದ ನಷ್ಟದ ಲೆಕ್ಕ ತೋರಿಸಿದೆ. ಸೆಪ್ಟೆಂಬರ್ ಅಂತ್ಯದ ತ್ತೈಮಾಸಿಕದಲ್ಲಿ ಸುಮಾರು 24,000 ಕೋ. ರೂ. ನಷ್ಟವಾಗಿದೆ ಎಂದು ಹೇಳುತ್ತಿದೆ ಏರ್‌ಟೆಲ್. ಇನ್ನೊಂದೆಡೆ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ನಷ್ಟ ಅನುಭವಿಸಲು ತೊಡಗಿ ಬಹಳ ವರ್ಷವಾಯಿತು. ಸರಕಾರ ಈ ಸಂಸ್ಥೆಗಳ ಪುನರುತ್ಥಾನಕ್ಕೆ ಮುಂದಾಗಿದ್ದರೂ ಅದು ಭಾರೀ ಸಮಯ ಬೇಡುವ ಪ್ರಕ್ರಿಯೆ.
ಟೆಲಿಕಾಂ ಉದ್ಯಮ ಎನ್ನುವುದು ಭಾರತದಲ್ಲಿ ಎಂದೆಂದಿಗೂ ನಷ್ಟ ಅನುಭವಿಸದ ಒಂದು ಆಕರ್ಷಣೀಯ ಉದ್ಯಮ ಎಂದೇ ಭಾವಿಸಲಾಗಿತ್ತು. ಇತ್ತೀಚೆಗಿನ ವರ್ಷಗಳ ತನಕ ಮಾರುಕಟ್ಟೆ ಪರಿಸ್ಥಿತಿಯೂ ಹಾಗೇ ಇತ್ತು. 90ರ ದಶಕದಲ್ಲಿ ಪ್ರಾರಂಭವಾದ ಟೆಲಿಕಾಂ ಕ್ರಾಂತಿ ದೇಶದ ಆರ್ಥಿಕತೆಯನ್ನು ಮಾತ್ರವಲ್ಲದೆ ರಾಜಕೀಯ ಮತ್ತು ಸಾಮಾಜಿಕ ಚಿತ್ರಣವನ್ನು ಬದಲಾಯಿಸಿದ ಪರಿ ನಮ್ಮ ಕಣ್ಣ ಮುಂದೆಯೇ ಇದೆ. ಸ್ಪೆಕ್ಟ್ರಂ ಆವಿಷ್ಕಾರದ ಬಳಿಕ ಟೆಲಿಕಾಂ ಉದ್ಯಮದ್ದೇನಿದ್ದರೂ ಏರುಗತಿಯೇ ಆಗಿತ್ತು. ಹೂಡಿಕೆದಾರರಿಗೆ, ಸರಕಾರಕ್ಕೆ, ಸೇವಾದಾರರಿಗೆ, ಸ್ಥಳೀಯ ವ್ಯಾಪಾರಿಗಳಿಗೆ…ಹೀಗೆ ಎಲ್ಲರಿಗೂ ಇದು ಚಿನ್ನದ ಮೊಟ್ಟೆಯಿಡುವ ಕೋಳಿಯಂತಿತ್ತು. ಇದೀಗ ಹಠಾತ್ ಎಂದು ಈ ಉದ್ಯಮ ಕುಸಿಯಲು ಕಾರಣ ಏನು ಎಂಬ ದೊಡ್ಡ ಪ್ರಶ್ನೆಯೊಂದು ದೇಶದ ಮುಂದಿದೆ.
ಮೊಬೈಲ್ ಫೋನ್‌ಗಳು ಈಗ ಜನರ ದೈನಂದಿನ ಬದುಕಿನ ಜೀವನಾಡಿಯೇ ಆಗಿದೆ. ಅತ್ಯಂತ ಕ್ಷಿಪ್ರವಾಗಿ ಮತ್ತು ಅಗಾಧವಾಗಿ ಬೆಳೆದ ಕ್ಷೇತ್ರವಿದು. ಪ್ರಸ್ತುತ ದೇಶದಲ್ಲಿ ಸುಮಾರು 50 ಕೋಟಿ ಸ್ಮಾಟ್‌ಫೋನ್ ಬಳಕೆದಾರರಿದ್ದಾರೆ. 2022ಕ್ಕಾಗುವಾಗ ಬಳಕೆದಾರರ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. 2ಜಿಯಿಂದ ತೊಡಗಿದ ಇಂಟರ್‌ನೆಟ್ ಸೇವೆ 4ಜಿಗೆ ತಲುಪಿದೆ. ಸದ್ಯದಲ್ಲೇ 5ಜಿ ಸೇವೆ ಶುರುವಾಗಲಿದೆ. ಈ ಸಂದರ್ಭದಲ್ಲೇ ಈ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿರುವುದರ ಹಿಂದಿನ ನೈಜ ಕಾರಣ ಏನು ಎನ್ನುವುದನ್ನು ತಿಳಿಯಬೇಕಾಗಿದೆ.
ಆರಂಭದ ದಿನಗಳಲ್ಲಿ 10ಕ್ಕೂ ಅಧಿಕ ಸೇವಾದಾರ ಟೆಲಿಕಾಂ ಕಂಪೆನಿಗಳಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 4ಕ್ಕಿಳಿದಿದೆ. ಈ ಪೈಕಿ ವೋಡಾಫೋನ್ ಮತ್ತು ಏರ್‌ಟೆಲ್ ನಷ್ಟ ಅನುಭವಿಸುತ್ತಿವೆ. ಇನ್ನುಳಿದಿರುವುದು ಜಿಯೊ ಮತ್ತು ಬಿಎಸ್‌ಎನ್‌ಎಲ್. ಅರ್ಥಾತ್ ಖಾಸಗಿ ರಂಗದಲ್ಲಿ ಉಳಿಯುವುದು ಜಿಯೊ ಒಂದೇ. ಇದರ ಲಾಭ ಕೂಡಾ ಇಳಿಮುಖವಾಗಿದೆ ಎಂದು ಇತ್ತೀಚೆಗೆ ಹೇಳಲಾಗಿತ್ತು. ಖಾಸಗಿ ವಲಯದಲ್ಲಿರುವ ತೀವ್ರ ಸ್ಪರ್ಧೆಯೇ ಟೆಲಿಕಾಂ ಕಂಪೆನಿಗಳ ಅಧೋಗತಿಗೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವ ಕಾರಣ. ಸ್ಪರ್ಧೆಯೊಂದರಿಂದಲೇ ನಷ್ಟವಾಗುತ್ತಿದೆ ಎಂದಾದರೆ ಇರುವ ನಾಲ್ಕು ಕಂಪೆನಿಗಳೇಕೆ ದರದ ವಿಚಾರದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಇದೆ.
ಸರಕಾರದ ಕಠಿಣ ನೀತಿಗಳು ಮತ್ತು ಸುಪ್ರೀಂ ಕೋರ್ಟಿನ ಆದೇಶಗಳು ಟೆಲಿಕಾಂ ಕಂಪೆನಿಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬ ಆರೋಪವಿದೆ. ಹತ್ತು ಟೆಲಿಕಾಂ ಕಂಪೆನಿಗಳಿಗೆ ಸರಕಾರಕ್ಕೆ ಲೈಸೆನ್ಸ್ ಶುಲ್ಕ, ಸ್ಪೆಕ್ಟ್ರಂ ಶುಲ್ಕ, ಹಳೆ ಬಾಕಿ ಎಂದೆಲ್ಲ 92,000 ಕೋ. ರೂ. ಪಾವತಿಸಲು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಆದೇಶಿಸಿದೆ. ಇದರ ಜೊತೆಗೆ 41,000 ಕೊ.ರೂ. ಇತರ ಬಾಕಿ ಶುಲ್ಕಗಳಿವೆ. ಈ ಪೈಕಿ ವೋಡಾಫೋನ್ ಮತ್ತು ಏರ್‌ಟೆಲ್ ಪಾಲೇ 80,000 ಕೋ. ರೂ. ಈ ಕಂಪೆನಿಗಳೇನಾದನೂ ದಿವಾಳಿಯಾದರೆ ಆರ್ಥಿಕತೆಯ ಮೇಲೆ ಬೀಳುವ ಹೊಡೆತ ಎಷ್ಟು ತೀವ್ರವಾಗಿರಬಹುದು ಎನ್ನುವುದನ್ನು ಈ ಅಂಕಿಅಂಶಗಳೇ ಹೇಳುತ್ತಿವೆ. ಜೊತೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ನಷ್ಟದ ಹೊಡೆತವೂ ಇದ್ದು, ಈ ಅವಳಿ ಪ್ರಹಾರಗಳನ್ನು ತಾಳಿಕೊಳ್ಳುವಷ್ಟು ಸಾಮರ್ಥ್ಯ ಸದ್ಯ ನಮ್ಮ ಆರ್ಥಿಕತೆಗೆ ಇಲ್ಲ. ಅಲ್ಲದೆ ದೇಶವನ್ನು ಪೂರ್ಣವಾಗಿ ಡಿಜಿಟಲ್‌ವುಯಗೊಳಿಸುವ ಮಹತ್ವಾಕಾಂಕ್ಷೆಗೂ ಇದರಿಂದ ತೊಡಕುಗಳು ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಕ್ಷೇತ್ರದ ಸಮಸ್ಯೆ ಕ್ಷಿಪ್ರವಾಗಿ ಬಗೆಹರಿಯುವ ಅಗತ್ಯವಿದೆ.