ಶಿವಮೊಗ್ಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ನ್ಯಾಯಸಮ್ಮತ ಹಾಗೂ ಯಶಸ್ವಿಯಾಗಿ ಸಂಪನ್ನಗೊಳ್ಳುವಲ್ಲಿ ಜಿಲ್ಲಾಡಳಿತ ನಿರ್ವಹಿಸಿದ ಕಾರ್ಯವೈಖರಿ ಶ್ಲಾಘನೀಯ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಚ್.ವಿ. ರಾಮಪ್ಪ ಗೌಡ ತಿಳಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಚೆನ್ನುಡಿ ಬಳಗ ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾಡಳಿತವನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವತ್ರಿಕ ಚುನಾವಣೆ ನಡೆಸುವುದೆಂದರೆ ಪ್ರಜಾಪ್ರಭುತ್ವದಲ್ಲಿ ಜಿಲ್ಲಾಡಳಿತಕ್ಕೆ ಅತಿ ದೊಡ್ಡ ಜವಾಬ್ದಾರಿ. ಕಳೆದ ಸುಮಾರು ಆರು ತಿಂಗಳಿಂದ ಡಿಸಿ ಡಾ| ಎಂ. ಲೋಕೇಶ್, ಅಪರ ಜಿಲ್ಲಾಧಿಕಾರಿ ಚನ್ನಪಬಸಪ್ಪ, ಜಿಪಂ ಸಿಇಒ ಡಾ| ರಾಕೇಶ್ ಕುಮಾರ್ ತಮ್ಮ ಸಿಬ್ಬಂದಿಗಳೊಂದಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ನಿರತರಾಗಿ ತಮ್ಮಲ್ಲಿರುವ ಕಾರ್ಯಕ್ಷಮತೆ ಅಭಿವ್ಯಕ್ತಗೊಳಿಸಿದ್ದಾರೆ ಎಂದರು.
ಹೊಸ ಮತದಾರರ ನೋಂದಣಿ, ಮತಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರ ಹೆಸರು ಸೇರ್ಪಡೆ, ಮಿಂಚಿನ ನೋಂದಣಿ ಮುಂತಾದ ವಿನೂತನ ಕಾರ್ಯಕ್ರಮ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕೆಲಸ ಮಾಡಿದ್ದು, ಜಿಲ್ಲಾ ಚುನಾವಣಾ ಇತಿಹಾಸದಲ್ಲಿ ದಾಖಲೆಯ ಮತದಾನವಾಗುವಂತೆ ಮಾಡಿದ ಶ್ರೇಯಸ್ಸು ಜಿಲ್ಲಾಡಳಿತಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ವಿಶೇಷವಾಗಿ ಆಯ್ದ ಕೆಲವು ಪದವಿ ಕಾಲೇಜುಗಳಲ್ಲಿ ನೂತನವಾಗಿ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಯುವ ಮತದಾರರ ಮನವೊಲಿಸಲು ಕ್ಯಾಂಪಸ್ ಅಂಬಾಸಿಡರ್ ಪದ್ಧತಿ ಜಾರಿಗೊಳಿಸಿ ಕಾಲೇಜು ವಿದ್ಯಾರ್ಥಿಗಳನ್ನು ಮತದಾನ ಜಾಗೃತಿ ಆಂದೋಲನದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರನ್ನೂ ಸೇರಿಸಿಕೊಂಡು ಚುನಾವಣೆ ನಡೆಸಿದ್ದು ಜಿಲ್ಲಾಡಳಿತದ ಹೆಗ್ಗಳಿಕೆ. ಈಗಿನ ಜಿಲ್ಲಾಡಳಿತ ಚುನಾವಣೆಯನ್ನು ಹೇಗೆ ಸುಲಭವಾಗಿ ಮತ್ತು ವ್ಯವಸ್ಥಿತವಾಗಿ ನಿಭಾಯಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ| ಬಾಲಕೃಷ್ಣ ಹೆಗಡೆ, ಚೆನ್ನುಡಿ ಬಳಗದ ಮುಖ್ಯಸ್ಥ ತ್ಯಾಗರಾಜ ಮಿತ್ಯಾಂತ, ಕ್ಯಾಂಪಸ್ ಅಂಬಾಸಿಡರ್ ಕಾವ್ಯಾ, ಪ್ರಿಯಾಂಕಾ ಇತರರು ಇದ್ದರು.
ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದ್ದರಿಂದ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು. ವಿಶೇಷವಾಗಿ ಆಯ್ದ ಕೆಲವು ಕಾಲೇಜು ಪ್ರಾಂಶುಪಾಲರು, ಕ್ಯಾಂಪಸ್ ಅಂಬಾಸಿಡರ್ ಗಳು, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ವಿವಿಧ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ. ಅವರೆಲ್ಲರಿಗೆ ಜಿಲ್ಲಾಡಳಿತ ಚಿರಋಣಿಯಾಗಿದೆ.
ಕೆ. ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ