ಬಾಗಲಕೋಟೆ: ಬಡ ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಅತ್ಯಂತ ಮುತುವರ್ಜಿ ವಹಿಸುವಲ್ಲಿ ಮುಂಚೂಣಿಯಲ್ಲಿರುವ ಬಾಗಲಕೋಟೆ ಜಿಲ್ಲಾಸ್ಪತ್ರೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕೊರೊನಾ ವೇಳೆ ಎಲ್ಲರೂ ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸುವಂತಾಗಿತ್ತು. ಕೊರೊನಾ ಸೋಂಕು ಪಾಸಿಟಿವ್ ಬಂದಿದೆ ಎಂದರೆ ಸಾಕು ಅಂತಹ ವ್ಯಕ್ತಿಗಳನ್ನು ಮಾತನಾಡಿಸಲೂ ಹಿಂಜರಿಯುವ ಸಮಯ ಆಗಿತ್ತು. ಆದರೆ, ಜಿಲ್ಲಾಸ್ಪತ್ರೆ ವೈದ್ಯರು, ನರ್ಸ್‌ಗಳು ಸಹಿತ ಎಲ್ಲ ಸಿಬ್ಬಂದಿ, ಪ್ರಾಣದ ಹಂಗು ತೊರೆದು ಆರೈಕೆ ಮಾಡಿದ್ದರು.
ಅದಕ್ಕೂ ಮುಂಚೆ ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದರು. ಯಾವಾಗ ಕೊರೊನಾ ಸೋಂಕು ಬಂತೋ ಆಗ ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳನ್ನೂ ಸರ್ಕಾರ ಹೆಚ್ಚಿಸಿತು. 250 ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು 400 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಯಿತು. ಇದೆಲ್ಲದರ ಜತೆಗೆ ಹೆರಿಗೆ ವಿಭಾಗಕ್ಕೂ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ಸಾಮಾನ್ಯ ಹೆರಿಗೆ, ಶಸ್ತ್ರಚಿಕಿತ್ಸೆ ಹೀಗೆ ಯಾವುದೇ ರೀತಿಯ ಹೆರಿಗೆ ಆದರೂ ಅದನ್ನು ಸುಸೂತ್ರವಾಗಿ ತಾಯಿ-ಮಗುವಿನ ಆರೈಕೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿದೆ. ಹೀಗಾಗಿಯೇ ಮುಳುಗಡೆ ನಗರಿ ಬಾಗಲಕೋಟೆಯ ಸರ್ಕಾರಿ ಆಸ್ಪತ್ರೆ ಈಗ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.
ಶಿಶು ಮರಣ ಕಡಿಮೆ: ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ಭಾಗದಲ್ಲಿ ತಾಯಿ-ಶಿಶು ಮರಣ ಕಡಿಮೆಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾದ ಲಕ್ಷ್ಯ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಸ್ಪತ್ರೆ ಶ್ರಮಿಸಿದೆ. ರಾಷ್ಟ್ರಮಟ್ಟದ ದೆಹಲಿ ಹಾಗೂ ಮಧ್ಯಪ್ರದೇಶದ ನುರಿತ ತಜ್ಞರ ಸಮಿತಿ ತಂಡವು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದು ರಾಷ್ಟ್ರೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕೃತವಾಗಿ ಪ್ರಶಸ್ತಿ ಘೋಷಿಸಿದೆ.
ಮೂರು ವರ್ಷ, ತಲಾ 3 ಲಕ್ಷ ಅನುದಾನ: ಜಿಲ್ಲಾಸ್ಪತ್ರೆಗೆ ಲಕ್ಷ್ಯ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಹಿಂಭಾಗಕ್ಕೆ ಪ್ರತಿ ವರ್ಷ 3 ಲಕ್ಷ ರೂ. ಗಳಂತೆ ಮೂರು ವರ್ಷಗಳ ಕಾಲ ವಿಶೇಷ ಅನುದಾನ ದೊರೆಯಲಿದೆ. ಆ ಅನುದಾನದಲ್ಲಿ ಶೇ.25ರಷ್ಟು ಲಕ್ಷ್ಯ ಪ್ರಶಸ್ತಿಗೆ ಸಂಬಂಧಿಸಿದ ಗುಣಮಟ್ಟ ಕಾಯ್ದಿರಿಸುವಲ್ಲಿ ಶ್ರಮಿಸಿದ ವೈದ್ಯರು ಹಾಗೂ ಸಿಬ್ಬಂದಿಗೆ ಹಂಚಿಕೆ ಮಾಡಲಾಗುತ್ತಿದೆ. ಉಳಿದ ಶೇ.75 ಅನುದಾನ ಆಯಾ ವಿಭಾಗದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವ ನಿರ್ದೇಶನವಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಪ್ರತ್ಯೇಕ ಸಿಬ್ಬಂದಿ: ಹೆರಿಗೆಗಾಗಿಯೇ ಪ್ರತ್ಯೇಕವಾಗಿ 6 ಹಾಸಿಗೆಗಳ ಐಸಿಯು ವಿಭಾಗ ಸಹ ಆರಂಭಿಸಲಾಗುತ್ತಿದೆ. ಆ ವಿಭಾಗಕ್ಕೆ ಬೇಕಾಗುವ ಪ್ರತ್ಯೇಕ ವೈದ್ಯ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಜಿಲ್ಲಾಧಿಕಾರಿ ಮೆಚ್ಚುಗೆ: ಜಿಲ್ಲಾಸ್ಪತ್ರೆಯು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಮೀರಿ ಕೆಲಸ ನಿರ್ವಹಿಸುತ್ತಿದೆ. ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣ ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರತಿದಿನ 700 ದಿಂದ 800ರವರೆಗೆ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ನೇತೃತ್ವದಲ್ಲಿ 32 ವಿಭಾಗಗಲ್ಲಿ ಆಸ್ಪತ್ರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಹೆರಿಗೆ, ಸರ್ಜರಿ ಹಾಗೂ ಮೆಡಿಸಿನ್ ವಿಭಾಗ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ವಿಶೇಷ ವರದಿ