Advertisement

ಅಂಜನಾದೇವಿ ಮಹಾತ್ಮೆ

02:20 AM Jan 09, 2019 | |

ಓದಿಕೊಂಡವರು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬೀಳಲು ಹಾತೊರೆಯುತ್ತಿರುವ ಈ ದಿನಗಳಲ್ಲಿ ಮೂಲತಃ ಫ್ರಾನ್ಸ್‌ ದೇಶದವರಾದ ಅಂಜನಾ ಆನೆಗೊಂದಿಯ ಗ್ರಾಮ್ಯ ಜೀವನವನ್ನು ಅಪ್ಪಿಕೊಂಡಿರುವುದು ಸೋಜಿಗ. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಾರೆ. ಮಾತ್ರವಲ್ಲ, ಹಳ್ಳಿಯಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆ ಇರಲಿ ಅಲ್ಲಿ ಅಂಜನಾ ಹಾಜರ್‌! ಕರುನಾಡ ನೆಲದ ಸೊಗಡನ್ನು ಅವರು ದೇಶಾದ್ಯಂತ ಪ್ರಚುರಪಡಿಸುತ್ತಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಹೆಸರು ಎಲ್ಲರಿಗೂ ಚಿರಪರಿಚಿತ. ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಲು ಮೊದಲು ಅಡಿಗಲ್ಲು ಹಾಕಿದ್ದೇ ಆನೆಗೊಂದಿಯಲ್ಲಿ. ಕಲೆ-ಸಾಹಿತ್ಯ-ಸಂಗೀತಕ್ಕೆ ಮನ್ನಣೆ ನೀಡಿದ ವಿಜಯನಗರ ಸಾಮ್ರಾಜ್ಯದ ಕುರುಹು ಇಂದಿಗೂ ಈ ನೆಲದಲ್ಲಿ ಜೀವಂತವಾಗಿದೆ. ಇಲ್ಲಿನ ಶ್ರೀಮಂತ ಸಂಸ್ಕೃತಿಗೆ ಮಾರು ಹೋದವರಲ್ಲಿ ಅಂಜನಾದೇವಿ ಕೂಡ ಒಬ್ಬರು. ಅವರ ತಾಯ್ನಾಡು ಫ್ರಾನ್ಸ್‌! ಆದರೆ ಅವರು ಹುಟ್ಟಿದ್ದು ಮಾತ್ರ ಇದೇ ಆನೆಗೊಂದಿಯಲ್ಲಿ. ಆದರೆ, ಭಾರತೀಯರೇ ನಾಚುವಂತೆ ದೇಶೀಯ ಕಲೆ- ಸಂಸ್ಕೃತಿಯನ್ನು ಕಲಿತು, ಅದನ್ನು ದೇಶಾದ್ಯಂತ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ತನ್ನೂರಿನ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. 

ಆಂಜನಾದ್ರಿಯೇ ಪ್ರೇರಣೆ
ಅಂಜನಾದೇವಿ ಅವರ ತಾಯಿ ಫ್ರಾನ್ಸುವಾ, ಮೂಲತಃ ಫ್ರಾನ್ಸ್‌ನವರು. 1965ರಲ್ಲಿ ಭಾರತಕ್ಕೆ ಪ್ರವಾಸ ನಿಮಿತ್ತ ಬಂದ ಫ್ರಾನ್ಸುವಾ, ಹಂಪಿಗೂ ಭೇಟಿ ನೀಡಿದರು. ಹಂಪಿಯಲ್ಲಿ ಅವರಿಗೆ ತಮಿಳುನಾಡು ಮೂಲದ ಶಾಂತಮೂರ್ತಿ ಎನ್ನುವರ ಪರಿಚಯವಾಯ್ತು. ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾದರು. ಫ್ರಾನ್ಸುವಾ, ಹಿಂದೂ ಧರ್ಮದ ಅನುಯಾಯಿಯಾಗಿ ಶಾರದಾ ಎಂದು ಹೆಸರು ಬದಲಿಸಿಕೊಂಡರು. 1976ರಲ್ಲಿ ಈ ದಂಪತಿಗೆ ಹುಟ್ಟಿದ ಮಗಳೇ ಅಂಜನಾದೇವಿ. ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ಆನೆಗೊಂದಿ ಇರುವುದರಿಂದ ಹೆತ್ತವರು ಅಂಜನಾದೇವಿ ಎಂದು ನಾಮಕರಣ ಮಾಡಿದರು.

ಕಲಾರಾಧಕಿ, ಸಮಾಜ ಸೇವಕಿ…
ಅಂಜನಾರಿಗೆ ಬಾಲ್ಯದಿಂದಲೂ ಗ್ರಾಮೀಣ ಕಲೆ, ನೃತ್ಯ, ಸಂಗೀತದಲ್ಲಿ ಅಪಾರ ಆಸಕ್ತಿ. ಈ ಭಾಗದ ಆಚಾರ- ವಿಚಾರ, ಸಂಸ್ಕೃತಿಯನ್ನು ಸ್ಥಳೀಯರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಹಬ್ಬ- ಹರಿದಿನಗಳು ನಡೆಯುವಾಗ ಗ್ರಾಮವನ್ನು ಸ್ವತ್ಛಗೊಳಿಸುವುದು, ಹಾದಿಯುದ್ದಕ್ಕೂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಂಗೋಲಿ ಬಿಡಿಸುವುದು, ಕೋಲಾಟ ಆಡುವುದು, ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು… ಹೀಗೆ, ಊರಲ್ಲಿ ಏನೇ ನಡೆದರೂ ಅಂಜನಾ ಅವರೇ ಕೇಂದ್ರಬಿಂದು.
ಗ್ರಾಮೀಣ ಕಲೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರ ಪಡಿಸಲು ಅಂಜನಾ, ಗ್ರಾಮದ ಯುವಕ- ಯುವತಿಯರನ್ನು ಸಂಘಟಿಸಿ, “ಚಂದ್ರ ಕಲಾಭೂಮಿ ಟ್ರಸ್ಟ್‌’ ಸ್ಥಾಪಿಸಿದ್ದಾರೆ. ಅದರ ಮೂಲಕ, ನಾನಾ ರಾಜ್ಯಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇತ್ತೀಚೆಗೆ ಪಾಂಡಿಚೆರಿಯಲ್ಲಿ ಜರುಗಿದ ಫಿಲಂ ಫೇರ್‌ ಫೆಸ್ಟಿವಲ…ನಲ್ಲಿ, ಕಲಾಭೂಮಿ ಟ್ರಸ್ಟ್‌ ಸದಸ್ಯರು ಪ್ರಸ್ತುತಪಡಿಸಿದ ನೃತ್ಯರೂಪಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. 

ನನಗೂ ಶಾಲೆ
ಊರಿನ ಜನರಿಂದ “ಅಂಜಿನಮ್ಮ’ ಎಂದು ಕರೆಸಿಕೊಳ್ಳುವ ಅಂಜನಾ, ದೈಹಿಕ ಮತ್ತು ಮಾನಸಿಕ ನ್ಯೂನತೆಯುಳ್ಳ ಮಕ್ಕಳ ಪಾಲಿಗೆ ನಿಜಕ್ಕೂ ಅಮ್ಮನೇ. ಅವರ ನೋವಿಗೆ ಸದಾ ಮಿಡಿಯುವ ಈಕೆ, “ನನಗೂ ಶಾಲೆ’ ಎಂಬ ಹೆಸರಿನಲ್ಲಿ ಎರಡು ಶಾಲೆಗಳನ್ನು ತೆರೆದಿದ್ದಾರೆ. ಸರಕಾರ ಮತ್ತು ಎನ್‌.ಜಿ.ಓ. ಸಹಯೋಗದಲ್ಲಿ ಈ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷ ಮಕ್ಕಳು ಕೂಡ ಎಲ್ಲರಂತೆ ಬದುಕಬೇಕು, ಎಲ್ಲರೊಡನೆ ಬೆರೆಯಬೇಕು ಎಂಬ ಉದ್ದೇಶದಿಂದ ಗಂಗಾವತಿಯ ಸರಕಾರಿ ಶಾಲೆಗಳಲ್ಲಿಯೇ ಒಂದು ಕೊಠಡಿಯನ್ನು ಇವರಿಗಾಗಿ ಮೀಸಲಿಡಲಾಗಿದೆ. ವೀಲ್‌ಚೇರ್‌, ಶೌಚಾಲಯ ಮುಂತಾದ ವಿಶೇಷ ಸೌಲಭ್ಯಗಳು ಇಲ್ಲಿವೆ. 

Advertisement

ಈ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಅಂಜನಾದೇವಿ. ಶಾಲೆಯಿಂದ ಹೊರಗುಳಿದ ವಿಶೇಷ ಮಕ್ಕಳನ್ನು ಗುರುತಿಸಿ, ಅವರ ಮನೆಗಳಿಗೆ ತೆರಳಿ, ಆ ಮಕ್ಕಳಲ್ಲಿ ಯಾವ ಕೊರತೆಯಿದೆ, ಅವರಿಗೆ ಯಾವ ರೀತಿಯ ತರಬೇತಿ ಹಾಗೂ ಶಿಕ್ಷಣ ನೀಡಬೇಕು ಹಾಗೂ ಅವರ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬೆಲ್ಲಾ ವಿಷಯಗಳನ್ನು ಸಂಗ್ರಹಿಸಿ, ಅವರನ್ನು ಶಾಲೆಗೆ ಬರಲು ಮನವೊಲಿಸುತ್ತಾರೆ. ಮಕ್ಕಳೊಡನೆ ಮಕ್ಕಳಾಗಿ ಬೆರೆತು, ಅವರ ಬೇಕು-ಬೇಡಗಳನ್ನು ಅರಿತು, ಅವರಿಗೆ ಸ್ವಾವಲಂಬಿ ಶಿಕ್ಷಣ ನೀಡುತ್ತಿದೆ ಅಂಜನಾದೇವಿ ಅವರ ತಂಡ. ಇದರ ಜೊತೆಗೆ, ಫ್ರಾನ್ಸ್ ಮೂಲದವರು ತೆರೆದ ವರ್ಕ್‌ಶಾಪ್‌ನ ಉಸ್ತುವಾರಿ ವಹಿಸಿಕೊಂಡು, ಏಳು ಹೆಣ್ಣುಮಕ್ಕಳಿಗೆ ಕೈಗಾರಿಕೆ ಕೆಲಸವನ್ನೂ ನೀಡಿದ್ದಾರೆ. 

ಆರು ಭಾಷೆಗಳು ನಾಲಗೆ ಮೇಲಿದೆ
ಭಾರತೀಯ ಪೌರತ್ವ ಪಡೆದ ಅಂಜನಾದೇವಿ ಓದಿದ್ದೆಲ್ಲಾ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ. ಬಿ.ಎ. ಪದವೀಧರೆಯಾಗಿರುವ ಈಕೆ, ಕನ್ನಡ, ಇಂಗ್ಲಿಷ್‌, ಹಿಂದಿ, ಫ್ರೆಂಚ್‌, ತಮಿಳು, ತೆಲುಗು ಭಾಷೆಯಲ್ಲಿ ನಿರರ್ಗಳವಾಗಿ ಮಾತಾನಾಡಬಲ್ಲರು. ಹೆತ್ತವರು ತೀರಿಕೊಂಡ ಬಳಿಕ ಒಬ್ಬಂಟಿಯಾದ ಅಂಜನಾ, ಸಮಾಜಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 2015ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಚುನಾಯಿತರಾಗಿದ್ದ ಅಂಜನಾ, ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮದ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ದುಡಿಯುವ ಗುರಿ ಹೊಂದಿದ್ದಾರೆ.

“ಮೊದಲು ಹಳ್ಳಿಯ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಬಾಲ್ಯವಿವಾಹ, ಭ್ರೂಣಹತ್ಯೆ, ಬಯಲು ಬಹಿರ್ದೆಸೆಯಂಥ ಪಿಡುಗುಗಳು ಇನ್ನೂ ಇಲ್ಲಿ ಜೀವಂತವಾಗಿವೆ. ಈ ಪಿಡುಗುಗಳ ವಿರುದ್ಧ ಹೋರಾಡುವುದೇ ನನ್ನ ಕೆಲಸ’
 ಅಂಜನಾ ದೇವಿ

ಬಸವರಾಜ ಎನ್‌. ಬೋದೂರು

Advertisement

Udayavani is now on Telegram. Click here to join our channel and stay updated with the latest news.

Next