“ಅಭಿನಯ ಶುರು ಮಾಡಿ ಸುಮಾರು 12 ವರ್ಷಗಳಾಯಿತು. ಅಭಿನಯದ ಬಗ್ಗೆ ಏನೂ ಗೊತ್ತಿಲ್ಲದ ನನ್ನನ್ನು “ಅಮೃತ ವರ್ಷಿಣಿ’ ಧಾರಾವಾಹಿ ಒಬ್ಬಳು ನಟಿಯಾಗಿ ಗುರುತಿಸುವಂತೆ ಮಾಡಿತು. 12 ವರ್ಷಗಳಾದರೂ, ಇಂದಿಗೂ ಕೂಡ ಅದೇ ಧಾರಾವಾಹಿಯ ಅಮೃತ ಪಾತ್ರದಲ್ಲಿಯೇ ಜನ ನನ್ನನ್ನು ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆಳವಾಗಿ ಆ ಧಾರಾವಾಹಿ ಮತ್ತು ನನ್ನ ಪಾತ್ರವನ್ನು ಜನರ ಮನ ಮುಟ್ಟಿತ್ತು. ಪ್ರೇಕ್ಷಕರು ಕೂಡ ನಮ್ಮನ್ನು ಮೆಚ್ಚಿಕೊಂಡಿದ್ದರು’ ಇದು ನಟಿ ರಜಿನಿ ಮಾತು.
ಹೌದು, ಕಿರುತೆರೆಯ ಜನಪ್ರಿಯ “ಅಮೃತವರ್ಷಿಣಿ’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದವರೇ ನಟಿ ರಜಿನಿ. ತನ್ನ ಮೊದಲ ಧಾರಾವಾಹಿಯಲ್ಲೇ ಕಿರುತೆರೆ ಪ್ರೇಕ್ಷಕರ ಮನ-ಗಮನ ಎರಡನ್ನೂ ಸೆಳೆಯುವಲ್ಲಿ ಯಶಸ್ವಿಯಾದ ರಜಿನಿ, ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ಕೊಂಡಿದ್ದರು. ಹೀಗಿರುವಾಗಲೇ ರಜಿನಿ ಕಿರುತೆರೆಯಿಂದ ಹಿರಿತೆರೆ ಕಡೆಗೂ ಮುಖ ಮಾಡಿದ್ದರು.
ಚಿತ್ರರಂಗದಲ್ಲಿ ಕೆಲ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ರಜಿನಿ ಸದ್ಯಕ್ಕೆ “ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆಯೇ ಒಂದೆರಡು ಸಿನಿಮಾಕ್ಕೂ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಪ್ಲಾನಿಂಗ್ ಇಲ್ಲದ ಜರ್ನಿಯಲ್ಲಿ ಖುಷಿಯಿದೆ…
ತಮ್ಮ ಅಭಿನಯ ಪ್ರಯಾಣದ ಬಗ್ಗೆ ಮಾತನಾಡುವ ರಜಿನಿ, “ನಾನು ನಟಿಯಾಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಪ್ಲಾನಿಂಗ್ ಇಲ್ಲದೆಯೇ, ಅಭಿನಯಕ್ಕೆ ಬಂದೆ. ಇಡೀ ಈ ಜರ್ನಿ ನನಗೆ ತುಂಬ ಖುಷಿ ಕೊಡುತ್ತಿದೆ. ಸಾಕಷ್ಟು ವಿಷಯಗಳನ್ನು ಕಲಿಸಿದೆ. ಜನರಿಗೆ ನನ್ನನ್ನು ಪರಿಚಯಿಸಿದೆ. ಎಲ್ಲೇ ಹೋದರು ಜನ ಗುರುತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾರೆ. ಒಬ್ಬ ನಟಿಯಾಗಿ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಈಗಲೂ ಅಷ್ಟೇ ತುಂಬ ಪ್ಲಾನಿಂಗ್ ಮಾಡದೆಯೇ ಈ ಜರ್ನಿ ನಡೆಯುತ್ತಿದೆ’ ಎನ್ನುತ್ತಾರೆ.
ಸೀರಿಯಲ್-ಸಿನಿಮಾ ವ್ಯತ್ಯಾಸವೇನಿಲ್ಲ…
“ನಾನೊಬ್ಬಳು ಕಲಾವಿದೆ ಅಷ್ಟೇ. ನನಗೆ ಖುಷಿ ಕೊಡುವಂಥ ಕಥೆಗಳು, ಪಾತ್ರಗಳು ಸೀರಿಯಲ್‌ನಲ್ಲಿ ಸಿಕ್ಕರೂ ಮಾಡುತ್ತೇನೆ. ಸಿನಿಮಾದಲ್ಲಿ ಸಿಕ್ಕರೂ ಮಾಡುತ್ತೇನೆ. ನನಗೆ ಸೀರಿಯಲ್ ಅಥವಾ ಸಿನಿಮಾ ನಡುವೆ ಅಂಥದ್ದೇನೂ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಕೆಲವರು ಬಂದು ಒಂದೆರಡು ಸಿನಿಮಾ ಅಥವಾ ಸೀರಿಯಲ್ ಮಾಡಿದ ನಂತರ ಮತ್ತೆ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ಆದರೆ ನನ್ನ ವಿಷಯದಲ್ಲಿ ಹಾಗಿಲ್ಲ. ಸೀರಿಯಲ್ ಆದ ನಂತರ ಸಿನಿಮಾ. ಸಿನಿಮಾ ಆದ ನಂತರ ಸೀರಿಯಲ್, ಹೀಗೆ ಒಂದರ ಹಿಂದೊಂದು ಅವಕಾಶಗಳು ಬರುತ್ತಿವೆ. ಒಬ್ಬಳು ನಟಿಯಾಗಿ ನಾನು ತುಂಬ ಖುಷಿಯಾಗಿದ್ದೇನೆ. ಇದಕ್ಕಿಂತ ಹೆಚ್ಚೇನೂ ನಿರೀಕ್ಷಿಸುವುದಿಲ್ಲ’ ಎಂಬುದು ರಜಿನಿ ಮಾತು.