ಹುಬ್ಬಳ್ಳಿ: ಸಂಪುಟದಿಂದ ಹಿರಿಯ ಸಚಿವರನ್ನು ಕೈಬಿಡಲಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಹಿರಿಯ ಸಚಿವರ ತಲೆದಂಡ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಇದೆಲ್ಲ ಕಪೋಲ ಕಲ್ಪಿತ. ಸಚಿವ ಸ್ಥಾನಕ್ಕೆ ಅಂಟಿಕೊಂಡು ಕೂರುವ ಜಾಯಮಾನ ನನ್ನದಲ್ಲ. ಮಂತ್ರಿಗಿರಿಗೆ ಪಟ್ಟು ಹಿಡಿಯುವ ವ್ಯಕ್ತಿಯೂ ನಾನಲ್ಲ. ನಾನಿಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಬಂದಿದ್ದೇನೆಯೇ ಹೊರತು, ರಾಜಕೀಯ ಮಾತನಾಡಲು ಬಂದಿಲ್ಲ ಎಂದರು. ಹಣೆಬರಹವಿದ್ದರೆ ಮಂತ್ರಿ ಸ್ಥಾನ ಉಳಿಯುತ್ತದೆ: ಈ ನಡುವೆ, ಹಾವೇರಿಯಲ್ಲಿ ಮಾತನಾಡಿದ ಸಚಿವ ದೇಶಪಾಂಡೆ, ‘ನನ್ನ ಮಂತ್ರಿ ಸ್ಥಾನ ಉಳಿಯೋದು ಬಿಡೋದು ನನ್ನ ಹಣೆಬರಹವಿದ್ದಂತೆ ಆಗುತ್ತದೆ. ನಮ್ಮ ಬಗ್ಗೆ ನಿಮಗ್ಯಾಕೆ ಇಷ್ಟು ಕಾಳಜಿ? ನೀವೇನು ಎಂಎಲ್ಎ ಆಗೋರಲ್ಲ, ಮಂತ್ರಿ ಆಗೋರೂ ಅಲ್ಲ’ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದರು. ಬರ ಪರಿಹಾರ ಕಾಮಗಾರಿ ವೀಕ್ಷಿಸಲು ಮಂಗಳವಾರ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಎಂಟು ಮುಖ್ಯಮಂತ್ರಿಗಳ ಜತೆ 23 ವರ್ಷ ಸಂಪುಟ ದರ್ಜೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾವತ್ತೂ ನನ್ನನ್ನು ಮಂತ್ರಿ ಮಾಡಿ ಎಂದು ಯಾವ ಮುಖ್ಯಮಂತ್ರಿಯನ್ನೂ ಕೇಳಿಲ್ಲ. ಮಾಧ್ಯಮದವರು ರಾಜಕೀಯ ವಿಷಯ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದರು.
Advertisement
ಹಿರಿಯ ಸಚಿವರನ್ನು ಕೈ ಬಿಡಲ್ಲ: ದೇಶಪಾಂಡೆ
01:27 AM May 29, 2019 | Team Udayavani |