ಬೆಂಗಳೂರು: ಹತ್ತು ವರ್ಷಗಳ ಹಿಂದೆ ಪರಿಚಯದ ಯುವತಿಗೆ ಇ-ಮೇಲ್ ಮೂಲಕ ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿ ಧಿಸಿ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಶಿವಪ್ರಸಾದ್ ಸಜ್ಜನ್ ಶಿಕ್ಷೆಗೆ ಗುರಿಯಾದವರು.
ಸಿಐಡಿ ಸೈಬರ್ ಕ್ರೈಂ ಠಾಣೆ ಆರಂಭವಾದ ಬಳಿಕ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯ ಆರೋಪಿಯೊಬ್ಬನಿಗೆ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ. 2008ರಲ್ಲಿ ಸಂತ್ರಸ್ತ ಯುವತಿ ಆರೋಪಿ ಶಿವಪ್ರಸಾದ್ ಸಜ್ಜನ್ ವಿರುದ್ಧ ಕೊರಿಯರ್ ಮೂಲಕ ಕಳುಹಿಸಿದ್ದ ದೂರು ಹಾಗೂ ಸಾಕ್ಷ್ಯಾಧಾರಗಳನ್ನು ಆಧರಿಸಿ ಸೈಬರ್ ಕ್ರೈಂ ಠಾಣೆ ಪೊಲೀಸರು ಯಲ್ಲಿ ಮಾಹಿತಿ ತಂತ್ರಜ್ಞಾನ
ಕಾಯ್ದೆ ಕಲಂ 67ರ ಅಡಿ ಪ್ರಕರಣ ದಾಖಲಿಸಿಕೊಂಡು 2009ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 9 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ ಆರೋಪಿ ವಿರುದ್ಧದ ಪ್ರಾಸಿಕ್ಯೂಶನ್ ಒದಗಿಸಿದ ಸಾಕ್ಷ್ಯಾಧಾರಗಳು, ವಾದವನ್ನು ಪುರಸ್ಕರಿಸಿ ಆರೋಪಿಗೆ ಜೈಲು ಹಾಗೂ ದಂಡ ವಿಧಿಸಿದೆ.
ಪ್ರಕರಣ ಏನು?: ದೆಹಲಿ ಮೂಲದ ಸಂತ್ರಸ್ತ ಯುವತಿ ನಗರದಲ್ಲಿ ನೆಲೆಸಿರುವ ತನ್ನ ಚಿಕ್ಕಪ್ಪನ ನಿವಾಸದಲ್ಲಿದ್ದುಕೊಂಡು 2000ರಲ್ಲಿ ಖಾಸಗಿ ಕಾಲೇಜೊಂದರಲ್ಲಿ ಟೆಲಿಕಮ್ಯನಿಕೇಷನ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿಯಾಗಿದ್ದ ಶಿವಪ್ರಸಾದ್ ಸ್ನೇಹಿತನಾಗಿದ್ದ.
ಶಿಕ್ಷಣ ಮುಗಿಸಿದ ಬಳಿಕ ದೆಹಲಿಗೆ ಸಂತ್ರಸ್ತ ಯುವತಿ ದೆಹಲಿಗೆ ತೆರಳಿದ್ದಕ್ಕೆ ಆಕ್ರೋಶಗೊಂಡಿದ್ದ ಶಿವಪ್ರಸಾದ್, ಸಂತ್ರಸ್ತ ಯುವತಿ ಚಿಕ್ಕಪ್ಪನ ಮನೆಯ ಹತ್ತಿರ ಹೋಗಿ ಗಲಾಟೆ ಮಾಡಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಆತ ಸುಮ್ಮನಾಗಿರಲಿಲ್ಲ.
ಈ ಮಧ್ಯೆ ಕೆಲಸದ ನಿಮಿತ್ತ ಲಂಡನ್‌ಗೆ ಯುವತಿ ತೆರಳಿದರೂ ಬೆನ್ನು ಬಿಡದ ಆರೋಪಿ, ಆಕೆಯ ಇ ಮೇಲ್ ಐಡಿ ತಿಳಿದುಕೊಂಡು, ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದಿದ್ದ ಯುವತಿ ವಾಪಾಸ್ ಬಂದಾಗ ಸೈಬರ್ ಠಾಣೆಗೆ ಕೊರಿಯರ್ ಮೂಲಕ ದೂರು ಹಾಗೂ ಸಾಕ್ಷ್ಯಾಗಳನ್ನು ಕಳುಹಿಸಿಕೊಟ್ಟಿದ್ದರು.