ಈ ಸೆಮಿಫೈನಲ್ ಮಹಾ ಸವಾಲು. ಕೈಯಲ್ಲಿದ್ದ ಪಕ್ಷಿಗಳನ್ನು ಉಳಿಸಿಕೊಂಡೇ ಮತ್ತಷ್ಟು ಹಕ್ಕಿಗಳಿಗೆ ಪಂಜರ ಹೊಂದಿಸಬೇಕಾದ ಅನಿವಾರ್ಯತೆ. ಖರ್ಗೆಯವರಿಗಂತೂ ತಮ್ಮ ತವರಿನಲ್ಲೇ ವಿಜಯ ಧ್ವಜ ನೆಡುವಂಥ ಬೆಟ್ಟದಂಥ ಸವಾಲಿದೆ. ದಿಲ್ಲಿಯ ಕಡೆಗಿನ ಈ ಪಯಣದಲ್ಲಿ ಎಷ್ಟು ದೂರದವರೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಗೆಲುವಿನ ಬುತ್ತಿ ಬರುವುದೋ ಎಂಬುದನ್ನೂ ಕಾದು ನೋಡಬೇಕಿದೆ.
Advertisement
ಮೊನ್ನೆಯಷ್ಟೇ ಒಂದು ಆಟ ಮುಗಿದಿದೆ. ಅದು ಲೀಗೋ, ಕ್ವಾರ್ಟರ್ ಫೈನಲೋ, ಸೆಮಿ ಫೈನಲೋ ಎಂಬುದು ಆಯಾ ಪಕ್ಷಗಳ ಲೆಕ್ಕಾಚಾರಕ್ಕೆ ಬಿಟ್ಟಿದ್ದು. ಒಟ್ಟಿನಲ್ಲಿ ಪಂದ್ಯವೊಂದು ಮುಗಿದಿದೆ. ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯನ್ನು ವಿಪಕ್ಷ ಸ್ಥಾನಕ್ಕೆ ತಳ್ಳಿ ಕಾಂಗ್ರೆಸ್ ಅಧಿಕಾರಕ್ಕೇರಿದೆ.
ಕರ್ನಾಟಕ, ಮಧ್ಯಪ್ರದೇಶ, ತ್ರಿಪುರಾಗಳಲ್ಲಿ ಪ್ರಸ್ತುತ ಬಿಜೆಪಿಯದ್ದೇ ಸರಕಾರವಿದೆ.
Related Articles
Advertisement
ವಾಸ್ತವವಾಗಿ ಬಿಜೆಪಿಯ ತ್ರಿಮೂರ್ತಿಗಳಿಗಿಂತ ಕಾಂಗ್ರೆಸ್‌ನ ಹೊಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕ್ವಾರ್ಟರ್ ಫೈನಲ್. ಆದರೆ ಎರಡು ದಶಕಗಳ ಬಳಿಕ ಗಾಂಧಿ ಮನೆತನದಿಂದ ಹೊರತಾದವರಿಗೆ ಕಾಂಗ್ರೆಸ್ ಅಧ್ಯಕ್ಷ ಪದವಿ ಸಿಕ್ಕಿದೆ. ಅರ್ಹತೆಯಿಂದ ಪದವಿ ದಕ್ಕಿರಬಹುದು. ಆದರೀಗ ತಮ್ಮ ಸ್ವಂತ ಸಾಮರ್ಥಯವನ್ನು ಪಣಕ್ಕಿಡಬೇಕಾದ ಹೊತ್ತು. ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿನ ಪಕ್ಷದ ಸರಕಾರಗಳನ್ನು ಉಳಿಸಿಕೊಳ್ಳಬೇಕಾ ದುದು ಒಂದೆಡೆಯಾದರೆ, ಮತ್ತಷ್ಟು ಕಡೆ ಬಾವುಟ ಊರಲು ಪ್ರಯತ್ನಿಸದಿದ್ದರೆ ದಿಲ್ಲಿಯ ದೂರ ಕ್ರಮಿಸದು. ಇದರೊಂದಿಗೆ ಅವರದ್ದೇ ತವರು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೇರಿಸುವುದು ಮಹಾಸವಾಲು. ಎಲ್ಲ ಕುದುರೆಗಳನ್ನೂ ಒಟ್ಟಿಗೇ ತಂದು ರಥವನ್ನು ಓಡಿಸುವ ಸವಾಲಿಗಿಂಥ, ಕುದುರೆಗಳನ್ನು ಒಟ್ಟುಗೂಡಿಸುವುದೇ ಅದಕ್ಕಿಂತಲೂ ದೊಡ್ಡ ಸವಾಲು.
ಇದರ ಮಧ್ಯೆ ಹಿಮಾಚಲ ಪ್ರದೇಶದಲ್ಲಿನ ಗೆಲುವಿನ ಹುರುಪು, ಪ್ರಿಯಾಂಕಾ ವಾದ್ರಾರ ತಂತ್ರ (ಹಿಮಾಚಲ ಪ್ರದೇಶದಲ್ಲಿನ ಗೆಲುವಿಗೆ ಪ್ರಿಯಾಂಕಾರಿಗೂ ಪಾಲಿದೆ) ಹಾಗೂ ರಾಹುಲ್ ಗಾಂಧಿಯವರ ಭಾರತ ಪರ್ಯಟನದ ಲಾಭ-ನಷ್ಟ ಏನೆಂದು ನಿರ್ಧರಿಸಲೂ ಇದು ಕ್ವಾರ್ಟರ್ ಫೈನಲ್!
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಅಧ್ಯಕ್ಷ ಜೆ.ಪಿ. ನಡ್ಡಾರಿಗೆ ಇರುವ ಸವಾಲೂ ಸಹ ಕಡಿಮೆ ಇಲ್ಲ. ಕಳೆದ ಚುನಾವಣೆಯಲ್ಲಿ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಹತ್ತಿರ ಬಂದಿತಾದರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸದೇ ರಾಜೀನಾಮೆ ನೀಡುವಂತಾ ಯಿತು. ಆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಮದುವೆ ಮಾಡಿ ಕೊಂಡರೂ ಬಹಳಷ್ಟು ಕಾಲ ಬಾಳಲಿಲ್ಲ. ಮತ್ತೆ ಬದಲಾದ ಪರಿಸ್ಥಿತಿ ಯಲ್ಲಿ 2019ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು. ಚುನಾವಣೆಯ ತಂತ್ರದ ಭಾಗವಾಗಿ 2021ರಲ್ಲಿ ಯಡಿಯೂರಪ್ಪನ ವರನ್ನು ಬದಲಿಸಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಪದವಿಗೆ ಏರಿಸಲಾಯಿತು. ನಾಲ್ಕು ತಿಂಗಳಲ್ಲಿ ಇನ್ನೆಷ್ಟು ಬದಲಾವಣೆಯಾಗುತ್ತದೋ ಕಾದು ನೋಡಬೇಕು.
ಮಧ್ಯಪ್ರದೇಶದಲ್ಲೂ ಹಾಗೆಯೇ. ಕಾಂಗ್ರೆಸ್ ಅಧಿಕಾರದ ಹತ್ತಿರ ಬಂದು ಕಮಲನಾಥ್ ಮುಖ್ಯಮಂತ್ರಿಯೂ ಆದರು. ಆದರೆ ಕೆಮಿಸ್ಟ್ರಿ ಬಹಳ ಕಾಲ ಉಳಿಯಲಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾರೊಂದಿಗೆ ಕೆಲವು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪರಿಣಾಮ ಶಿವರಾಜ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಯಾದರು. ಸದ್ಯಕ್ಕೆ ಅವರದ್ದೇ ದರ್ಬಾರು ನಡೆದಿದೆ. ಬಿಜೆಪಿಗೆ ಎರಡೂ ಕಡೆ ತಮ್ಮದೇ ಸರಕಾರ ಸ್ಥಾಪಿಸುವ ಗುರುತರ ಸವಾಲಿದೆ.
ಗುಜರಾತ್‌ನಲ್ಲಿ ಅನುಸರಿಸಿದ ತಂತ್ರಗಳನ್ನು ಯಥಾವತ್ತಾಗಿ ಕರ್ನಾಟಕ, ಮಧ್ಯಪ್ರದೇಶಕ್ಕೆ ಅನ್ವಯಿಸಲಾಗುತ್ತದೋ ಅಥವಾ ಹಿಮಾಚಲಪ್ರದೇಶದಲ್ಲಿನ ವೈಫಲ್ಯದಿಂದ ಕಲಿತ ಪಾಠದೊಂದಿಗೆ ಮಾರ್ಪಾಡಾದ ಸೂತ್ರಗಳು ಅನ್ವಯವಾಗುವುದೋ ಎಂಬ ಕುತೂಹಲವಿದೆ.
ಬಿಜೆಪಿಗೆ ಇರುವ ಮತ್ತೊಂದು ಸವಾಲೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಅಭಿವೃದ್ಧಿಪರ ರಾಷ್ಟ್ರೀಯವಾದದ ಫಸಲು ಸಿಗಬೇಕಾದರೆ ಪ್ರತ್ಯೇಕತಾವಾದವನ್ನು ಬೆಂಬಲಿಸುವ ವಾತಾವರಣ ನಿರ್ಮಾಣವಾಗಬಾರದು. ಮುಂದಿನ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾರ ಪಕ್ಷವಾಗಲೀ, ಮೆಹಬೂಬಾ ಮುಫ್ತಿಯ ವರ ಪಕ್ಷವಾಗಲೀ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಸುತರಾಂ ಇಷ್ಟವಿಲ್ಲ. ಆದ ಕಾರಣ, ತಾವು ಅಧಿಕಾರ ಗಳಿಸುವುದಕ್ಕಿಂತ ಉಳಿದವರನ್ನು ದೂರವಿಡುವುದೇ ಪ್ರಥಮ ಆದ್ಯತೆ. ಈ ದಿಸೆಯಲ್ಲಿ ಬಿಜೆಪಿಯು ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಹೊರ ಹೋಗಿ ಹೊಸ ಪಕ್ಷದ ಹುರುಪಿನಲ್ಲಿರುವ ಗುಲಾಂ ನಬಿ ಆಜಾದ್‌ರ ಬೆಂಬಲಕ್ಕೆ ನಿಂತರೂ ಅಚ್ಚರಿಯಿಲ್ಲ. ಅದೂ ಸಹ ರಣತಂತ್ರದ ಭಾಗವಾಗಿರಲಿದೆ. ಯಾಕೆಂದರೆ ಗುಲಾಂ ನಬಿ ಆಜಾದ್‌ರಿಗೂ ಪ್ರತ್ಯೇಕತಾವಾದ ಬೇಕಿಲ್ಲ. ಬಿಜೆಪಿಗೂ ಸಹ ಅಷ್ಟೇ.
ಕೊನೆಯದಾಗಿ ಕರ್ನಾಟಕ- ಮೂರೂ ಪಕ್ಷಗಳಲ್ಲೂ ಸಮರೋತ್ಸಾಹ ಎದ್ದು ಕಾಣುತ್ತಿದೆ. ಬಿಜೆಪಿಗೆ ಮತ್ತೆ ಅಧಿಕಾರ ಪಡೆಯುವ ಆಸೆ. ಕಾಂಗ್ರೆಸ್‌ಗೆ ಬಿಜೆಪಿ ಸೋಲಿಸುವ ಆಸೆ. ಜೆಡಿಎಸ್ ಕಿಂಗ್ ಆಗಬೇಕು ಇಲ್ಲವೇ ಕಿಂಗ್ ಮೇಕರ್ ಸ್ಥಾನದಲ್ಲಿ ನಿಂತೂ ಕಿಂಗ್ ಆಗಬೇಕು ಎನ್ನುವ ಆಸೆ. ಅದಕ್ಕೇ ಈಗಾಗಲೇ ನಮ್ಮನ್ನು ಬಿಟ್ಟು ಹೇಗೆ ಸರಕಾರ ಮಾಡುತ್ತಾರೋ ನೋಡುವ ಎಂಬಂತೆ ಜೆಡಿಎಸ್ ನಾಯಕರು ಮಾತನಾಡತೊಡಗಿದ್ದಾರೆ.
ಬಿಜೆಪಿ ಒಂದು ಬಗೆಯ ತಂತ್ರ ಹೂಡಿದರೆ, ಕಾಂಗ್ರೆಸ್ ಸಹ ಹಿಂದೆ ಬೀಳದು. ಜೆಡಿಎಸ್‌ನಲ್ಲಿ ದೊಡ್ಡ ಗೌಡರು ಮತ್ತೆ “ಇದು ನನ್ನ ಕೊನೇ ಚುನಾವಣೆ. ಮತ್ತೂಮ್ಮೆ ನನ್ನ ಮಗ ಮುಖ್ಯಮಂತ್ರಿ ಯಾಗೋದು ನೋಡಬೇಕು ಎನ್ನುವ ಆಸೆ’ ಎಂದು ಪ್ರಚಾರಕ್ಕೆ ಇಳಿಯಬಹುದು. ಆಂತರಿಕವಾಗಿ ಹೇಳುವುದಾದರೆ ಮೂರೂ ಪಕ್ಷಗಳ ಆರೋಗ್ಯ ಹೇಳುವಷ್ಟು ಚೆನ್ನಾಗಿಲ್ಲ.
ಒಂದು ಪಕ್ಷದಲ್ಲಿ ಹೊರಗಿನಿಂದ ತಂದುಕೊಂಡ ಸಮಸ್ಯೆ ಇದ್ದರೆ, ಮತ್ತೂಂದಕ್ಕೆ ಒಳಗಿನಿಂದಲೇ ನಾನು ಮತ್ತು ನಾನೇ ಎಂಬ ಕ್ಯಾನ್ಸರ್ ಆವರಿಸಿಕೊಳ್ಳುತ್ತಿದೆ. ಮತ್ತೂಂದಕ್ಕೆ ನಾವಷ್ಟೇ ಎಂಬ ಕ್ಯಾನ್ಸರ್ ಸಹ ಕಾಡುತ್ತಿದೆ. ಇವೆಲ್ಲದ್ದಕ್ಕೂ ಮದ್ದು ಅರೆದು ವಾಸಿ ಮಾಡಿ ಚುನಾವಣೆಗೆ ಅಣಿಗೊಳಿಸಿ ಗೆದ್ದು ಬೀಗುವ ತಂತ್ರವನ್ನು ರೂಪಿಸುವ ಸವಾಲು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮೇಲಿದೆ.
ಇದರ ಮಧ್ಯೆ ಆಯಾ ಪ್ರಾದೇಶಿಕ ಪಕ್ಷಗಳ ಸವಾಲುಗಳು, ಆಪ್‌ನ ಬಿಸಿ ಗಾಳಿಯ ಕಿರಿಕಿರಿಯೂ ಇದ್ದದ್ದೇ. ಇವಷ್ಟೇ ಮುಗಿದಿಲ್ಲ. ನಾಲ್ಕನೇ ರಂಗವನ್ನು ಕಟ್ಟಲು ಹೊರಟಿರುವ ತೆಲಂಗಾಣದ ಬಿಆರ್‌ಎಸ್ ಪಕ್ಷದ ಕೆ. ಚಂದ್ರಶೇಖರ್ ರಾವ್ ಅವರನ್ನೂ ಅವರ ನೆಲದಲ್ಲೇ ಸೋಲಿಸುವ ಮೂಲಕ 2024ರಲ್ಲಿ ತನಗೇ ಎದುರಾಗಬಹುದಾದ ಮತ್ತೂಂದು ಸವಾಲನ್ನು ಚಿಗುರಲ್ಲೇ ಚಿವುಟಿ ಹಾಕುವುದೂ ಬಿಜೆಪಿ ಮೋದಿ, ಶಾ, ನಡ್ಡಾರ ಮೇಲಿದೆ ಎನ್ನುವುದು ಸುಳ್ಳಲ್ಲ.
– ಅರವಿಂದ ನಾವಡ