Advertisement

ಭದ್ರತೆಯ ನೆರಳಲ್ಲಿ ಗಣರಾಜ್ಯೋತ್ಸವ

11:34 AM Jan 25, 2017 | |

ಬೆಂಗಳೂರು: ದೇಶದ 68ನೇ ಗಣರಾಜ್ಯೋತ್ಸವ ಪ್ರಯುಕ್ತ ಜ. 26ರಂದು ನಗರದ ಮಾಣೆಕ್‌ಷಾ ಪರೇಡ್‌ ಮೈದಾನದಲ್ಲಿ ನಡೆಯವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಗಣರಾಜ್ಯೋತ್ಸವದ ಧ್ವಜಾರೋಹಣ, ಪಥಸಂಚಲನ, ಆಸನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಳಿಗೆ ಸಂಬಂಧಿಸಿದ ಸಿದ್ಧತೆಗಳನ್ನು ನಗರ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಮಾಡಿಕೊಂಡಿದ್ದರೆ, ನಗರ ಪೊಲೀಸ್‌ ಇಲಾಖೆ ಭದ್ರತಾ ಕ್ರಮ ಕೈಗೊಳ್ಳುತ್ತಿದೆ.

Advertisement

ಪೂರ್ವಸಿದ್ಧತೆಗಳ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಜ.26ರಂದು ಬೆಳಿಗ್ಗೆ 8.45ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಾಣೆಕ್‌ಷಾ ಪರೇಡ್‌ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸುವರು. ಧ್ವಜಾರೋಹಣದ ವೇಳೆ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಲಾಗುವುದು ಎಂದರು.

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪೊಲೀಸ್‌, ಸ್ಕೌಟ್ಸ್‌, ಗೈಡ್ಸ್‌, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ಸ್‌ನ ಒಟ್ಟು 68 ತುಕಡಿಗಳಲ್ಲಿ 2,100 ಮಂದಿ ಭಾಗವಹಿಸಲಿದ್ದಾರೆ. 2,500 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಯವರು ಸಾಂಕೇತಿಕವಾಗಿ “ಜೀವರಕ್ಷಕ ಪ್ರಶಸ್ತಿ’ ವಿತರಿಸಲಿದ್ದಾರೆ ಎಂದರು. 

12 ಸಾವಿರ ಆಸನ ವ್ಯವಸ್ಥೆ: ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಅತಿಗಣ್ಯ, ಗಣ್ಯ, ಇತರೆ ಆಹ್ವಾನಿತರು, ಸಾರ್ವನಿಕರಿಗೆ ಪ್ರತ್ಯೇಕವಾಗಿ ಒಟ್ಟು 12 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಜಿ2 ಪ್ರವೇಶ ದ್ವಾರದಲ್ಲಿ ಅತಿ ಗಣ್ಯ ವ್ಯಕ್ತಿಗಳಿಗಾಗಿ 2,500, ಜಿ1 ಪ್ರವೇಶದ್ವಾರದಲ್ಲಿ ಗಣ್ಯವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳು,

ಪತ್ರಿಕಾ ಪ್ರತಿನಿಧಿಗಳಿಗಾಗಿ 2,500, ಜಿ3 ಪ್ರವೇಶ ದ್ವಾರದಲ್ಲಿ ಇತರೆ ಇಲಾಖೆಯ ಎಲ್ಲ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗಾಗಿ 3 ಸಾವಿರ ಹಾಗೂ ಸಾರ್ವಜನಿಕರಿಗಾಗಿ 4 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗಾಗಿ ಇರುವ  ವೀಕ್ಷಣಾ ಗ್ಯಾಲರಿಯನ್ನು ವಿಸ್ತರಿಸಿ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

Advertisement

ಇವನ್ನು ಒಯ್ಯುವಂತಿಲ್ಲ 
ಮೊಬೈಲ್‌ ಫೋನ್‌, ಕ್ಯಾಮರಾ, ಹೆಲ್ಮೆಟ್‌, ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳು, ರೆಡಿಯೋ, ಕೊಡೆ ಇತ್ಯಾದಿ ವಸ್ತುಗಳು ಮತ್ತು ಕರಪತ್ರ, ಭಿತ್ತಿಪತ್ರ, ಬೆಂಕಿಪೊಟ್ಟಣ, ತಂಬಾಕು ಪೊಟ್ಟಣ, ಬೀಡಿ, ಸಿಗರೇಟ್‌, ಬಣ್ಣ ಅಥವಾ ಬಣ್ಣದ ದ್ರಾವಣ ತರುವುದನ್ನು ನಿಷೇಧಿಸಲಾಗಿದೆ ಎಂದರು.

ಪುದುಚೇರಿ ತಂಡ ಭಾಗಿ
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯದ ಪೊಲೀಸ್‌ ತಂಡ ಪುದುಚೇರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದೆ. ಪುದುಚೇರಿಯ ಪೊಲೀಸ್‌ ತಂಡ ರಾಜ್ಯದ ಪಥಸಂಚಲನದಲ್ಲಿ ಭಾಗವಹಿಸುತ್ತಿದೆ. ಕಳೆದ ವರ್ಷ ಗೋವಾ ತಂಡ ಕರ್ನಾಟಕಕ್ಕೆ ಬಂದಿತ್ತು. ಅದೇ ರೀತಿ ಕರ್ನಾಟಕದ ತಂಡ ಗೋವಾದ ಪಥಸಂಚಲನದಲ್ಲಿ ಪಾಲ್ಗೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next