Advertisement

ಬಂಡವಾಳ ಪರ್ಯಾಪ್ತತಾ ಅನುಪಾತವೇ ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡ

11:15 PM Mar 10, 2020 | Team Udayavani |

ಮಂಗಳೂರು: ದೇಶ, ವಿದೇಶಗಳಲ್ಲಿ ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ಬಂಡವಾಳ ಪರ್ಯಾಪ್ತತಾ ಅನುಪಾತವೇ ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡವಾಗಿದೆಯೇ ಹೊರತು ಇತ್ತೀಚಿನ ದಿನಗಳಲ್ಲಿ ಟೀವಿ ಹಾಗು ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಅರ್ಥವಿಲ್ಲದ ಎಮ್‌ ಕ್ಯಾಪ್‌ ಅನುಪಾತವಲ್ಲ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಸ್ಪಷ್ಟಪಡಿಸಿದ್ದಾರೆ.

Advertisement

ವಿದೇಶಗಳಲ್ಲಿ ಬಂಡವಾಳ ಪರ್ಯಾಪ್ತತಾ ಅನುಪಾತಕ್ಕೆ ಬ್ಯಾಂಕಿನ ಮುಂಗಡ, ಹೂಡಿಕೆ ಇತ್ಯಾದಿಗಳ ಸುರಕ್ಷತೆಯ ಆಧಾರದ ಮೇಲೆ ಕನಿಷ್ಠ ಶೇ.8ರ ಮಾನದಂಡವನ್ನು ಪಾಲಿಸುತ್ತಿದ್ದರೆ, ಭಾರತದಲ್ಲಿ ಕನಿಷ್ಠ ಶೇ. 9ರ ಅನುಪಾತವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದೆ.

ಆದರೆ, ನಮ್ಮ ಕರ್ಣಾಟಕ ಬ್ಯಾಂಕ್‌ನಲ್ಲಿ ನಾವು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ ಕನಿಷ್ಠ ಶೇ.9ರ ಅನುಪಾತಕ್ಕೆ ಇನ್ನೂ ಶೇಕಡಾ 1ನ್ನು ಹೆಚ್ಚಾಗಿಯೇ ಸದಾಕಾಲ ಕಾಪಾಡಿಕೊಂಡು ಬಂದಿದ್ದು, 2019ರ ಮಾ.31ರ ವರ್ಷಾಂತ್ಯಕ್ಕೆ ಇದು ಅತ್ಯುತ್ತಮ ಅಂದರೆ, ಶೇಕಡಾ 13.17ರ ಅನುಪಾತದಲ್ಲಿದೆ. ಈ ರೀತಿಯ ಉತ್ತಮ ಅನುಪಾತವಿರುವ ಕೆಲವೇ ಕೆಲವು ಬ್ಯಾಂಕ್‌ಗಳಲ್ಲಿ ಕರ್ಣಾಟಕ ಬ್ಯಾಂಕ್‌ ಕೂಡ ಒಂದು ಎಂದು ಅವರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ, ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌, ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಭಾರತ ಸರಕಾರದ ಚೀಫ್‌ ಇಕನಾಮಿಕ್‌ ಎಡ್ವೆಸರ್‌ ಅವರುಗಳ ಇತ್ತೀಚಿನ ಮಾಧ್ಯಮ ಹೇಳಿಕೆಗಳತ್ತ ಗಮನ ಸೆಳೆದ ಅವರು, ಈ ಮಹನೀಯರ ಹೇಳಿಕೆಗಳು ಎಲ್ಲಾ ಬ್ಯಾಂಕ್‌ ಗ್ರಾಹಕರಿಗೆ ಸಮಯೋಚಿತ ಮಾರ್ಗಸೂಚಿ ಅಂಶಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ 96 ವರ್ಷಗಳಿಂದ ಗ್ರಾಹಕರ ಅನುಪಮ ವಿಶ್ವಾಸ ಹಾಗು ಸಹಕಾರದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಕರ್ಣಾಟಕ ಬ್ಯಾಂಕ್‌, ಮುಂದಿನ ವರ್ಷಗಳಲ್ಲಿ ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿ ಮುಂಚೂಣಿಗೆ ಬರಲಿದೆ ಎಂಬ ವಿಶ್ವಾಸವನ್ನು ಆಡಳಿತ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next