Advertisement
ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಉಳ್ಳಾಕುಲು ಉಳ್ಳಾಲ್ತಿ ಬಚ್ಚನಾಯಕನ ದೈವಸ್ಥಾನದಲ್ಲಿ ಪ್ರತಿ ವರ್ಷ ನೇಮ ನಡೆಯುತ್ತದೆ. ಮಾ. 27ರಿಂದ ಜಾತ್ರೆ ಆರಂಭಗೊಂಡಿದ್ದು, ಎ. 1ರಂದು ಬಚ್ಚನಾಯಕನ ನೇಮ ನಡೆಯುತ್ತದೆ. ಶಾಪದ ಒಡೆಯರ ಭಂಡಾರವನ್ನು ಅಂದ ಮತ್ತು ಚೆಂದದಿಂದ ತುಂಬಿಸಿ ಕೊಡುತ್ತೇನೆ ಎಂದು ನೇಮದ ವೇಳೆ ದೈವಜ್ಞ ಕನ್ನಡದಲ್ಲಿ ನುಡಿಯುತ್ತಾನೆ. ನನ್ನ ನಂಬಿದವರಿಗೆ ಈ ಹಿಂದೆ ತೊಂದರೆ ನೀಡಿಲ್ಲ ಮುಂದೆ ನೀಡುವುದಿಲ್ಲ ಎಂಬುದು ಇದರ ಸಾರಾಂಶ. ತುಳುನಾಡಿನಲ್ಲಿ ನಡೆಯುವ ಕೋಲ, ನೇಮದ ವೇಳೆ ದೈವಜ್ಞರು ತುಳು ನುಡಿ ಗಟ್ಟುಗಳನ್ನೇ ಹೇಳುವುದು ಕಂಡು ಬರುತ್ತದೆ.
ಇಕ್ಕೇರಿ ಸಂಸ್ಥಾನಕ್ಕೆ ಒಳಪಟ್ಟ ಬಿಸಲೆ- ಐಗೂರು ಸೀಮೆಯ ಕಾಗೆನೂರು ಕೋಟಿ ದಳವಾಯಿ ಮಲ್ಲಾನ ಗೌಡನ ಮೂರು ಮಕ್ಕಳ ಪೈಕಿ ಕೋಟಿ ನಾಯಕ-ಬಚ್ಚ ನಾಯಕ ಇಬ್ಬರು ಗಂಡು ಮಕ್ಕಳು. ಅವರಲ್ಲಿ ಬಚ್ಚನಾಯಕ ಧೀರನೂ ಶೂರನೂ ಆಗಿದ್ದ. ಪಂಜ ಕಡಬದರಸರು ಬಚ್ಚನಾಯಕನ ಸಹಾಯ ಪಡೆದು ಯೇನೆಕಲ್ಲು ಗ್ರಾಮವನ್ನು ಸೂರೆಗೈಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಬಚ್ಚನಾಯಕ ತುಳುನಾಡಿಗಾಗಿ ಹೊರಟು ನಿಂತಿದ್ದ. ಆಗ ಜನಕ ದಳವಾಯಿ ಮಲ್ಲಾನ ಗೌಡನು ತುಳುನಾಡು ಬಂಟರ ರಾಜ್ಯ. ಅಲ್ಲಿಗೆ ಹೋಗಕೂಡದು ಎಂದು ಅಂಗಲಾಚಿದ.
Related Articles
Advertisement
ಶಸ್ತ್ರಾಸ್ತ್ರಗಳೊಂದಿಗೆ ಕುದುರೆ ಏರಿ ಐಗೂರು ಸೀಮೆ ಬಿಟ್ಟು ಶಿರಾಡಿ ದಾರಿ ಮೂಲಕ ಗಡಿ ಚೌಡಮ್ಮನ ಪ್ರಾರ್ಥಿಸಿ ತುಳುನಾಡಿನಲ್ಲಿ ತನಗೆ ಜಯ ಸಿಗಬಹುದೇ ಎಂಬ ನೆಲೆಯಲ್ಲಿ ಕೆಲವೊಂದು ಸತ್ಯಶೋಧನೆ ನಡೆಸಿ ಸತ್ತರೂ ತುಳುನಾಡಿನಲ್ಲೆ ಎಂಬ ದೃಢ ನಿರ್ಧಾರಕ್ಕೆ ಬಚ್ಚನಾಯಕ ಬಂದಿದ್ದ.
ಪಂಜದ ಬಲ್ಲಾಳರ ಸೇನೆ ಹಾಗೂ ಮುಖ್ಯಸ್ಥನನ್ನು ಸೇರಿಕೊಂಡು ಯುದ್ಧ ಸಾರಿದ. ಯುದ್ಧದಲ್ಲಿ ಯೇನೆಕಲ್ಲಿನ ಸಬ್ಬಗೌಡನ ಪಾಳಯದ ಪಗರಿಗೆ ಬಲಿಯಾದ. ಸೈನಿಕನಿಲ್ಲದ ಕುದುರೆ ಕಂಡು ಬಚ್ಚನಾಯಕನ ಸೈನಿಕರೆಲ್ಲ ಓಡಿಹೋದರು. ಸಂಜೆ ವೇಳೆ ಗೌಡರ ಹೆಂಡತಿಯರಿಬ್ಬರು ಹುಲ್ಲು ತರಲೆಂದು ಮದುವಗದ್ದೆ ಸಮೀಪ ಬದುವಿನಲ್ಲಿ ಹೋಗುವಾಗ ನರಳುವ ಶಬ್ದ ಕೇಳಿಸಿತು. ಈತ ವಿರೋಧಿ ಎಂದು ಮನಗಂಡು ಅಕ್ಕ ವೈರಿಯ ಕುತ್ತಿಗೆಯನ್ನು, ತಂಗಿ ನಾಲಗೆಯನ್ನು ಕೊಯ್ದರು. ತಮ್ಮನ ಸಾವಿನ ಸುದ್ದಿ ಕೇಳಿ ನಾಯಕರು ಯುದ್ಧ ಸಾರಿದರು. ಅವರೂ ಯುದ್ಧದಲ್ಲಿ ತೀರಿಕೊಂಡರು. ಬಳಿಕ ಬಾನಡ್ಕ ಮೇಲಿನ ಮನೆಯವರು ಇವರಿಬ್ಬರನ್ನು ಪ್ರತಿಮಾ ಶಕ್ತಿಗಳಾಗಿ ದೈವತ್ವಕ್ಕೇರಿಸಿ ನಂಬಿದರು. ಉಳ್ಳಾಕುಲು ದೈವದ ಪಟ್ಟದ ಪ್ರಧಾನಿಯಾಗಿ ಬಚ್ಚನಾಯಕ ಸ್ಥಾಪಿತಗೊಂಡನು. ಮೀಸೆದ ಪರಕೆ
ಕಚೇರಿ, ಜಾಗದ ತಕರಾರು, ವ್ಯಾಜ್ಯ – ಹೀಗೆ ನ್ಯಾಯಕ್ಕೆ ಸಂಬಂಧಿಸಿ ಇಲ್ಲಿ ಹೆಚ್ಚು ಹರಕೆ ಸಂದಾಯವಾಗುತ್ತದೆ.ಯಾವುದೇ ಕಷ್ಟ ಎದುರಾದರೂ ಇಲ್ಲಿ ಹರಕೆ ಹೇಳಿಕೊಳ್ಳುತ್ತಾರೆ. ಸಂಕಷ್ಟ ನಿವಾರಣೆಯಾದ ಮೇಲೆ ನೇಮದ ವೇಳೆ ಬೆಳ್ಳಿಯ ಮೀಸೆಯನ್ನು ಹರಕೆಯಾಗಿ ಒಪ್ಪಿಸಲಾಗುತ್ತದೆ. ಕನ್ನಡದಲ್ಲಿ ನುಡಿ
ತುಳುನಾಡಿನಲ್ಲಿ ಪುರುಷ ದೈವ ಸಹಿತ ಬೆರಳೆಣಿಕೆಯ ದೈವಗಳು ಕನ್ನಡದಲ್ಲಿ ನುಡಿ ಹೇಳುವುದು ಬಿಟ್ಟರೆ ಬಹುತೇಕ ದೈವಗಳು ತುಳು ಭಾಷೆಯಲ್ಲಿ ಮಾತನಾಡುತ್ತವೆ. ಘಟ್ಟದ ಮೇಲಿನಿಂದ ತುಳುನಾಡಿಗೆ ಯುದ್ಧ ಸಾರಲು ಬಂದ ಬಚ್ಚನಾಯಕನನ್ನು ಇಲ್ಲಿ ಪ್ರತಿಮಾ ರೂಪವಾಗಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಘಟ್ಟದ ಮೇಲಿನ ದೈವವಾದ್ದರಿಂದ ಕನ್ನಡದಲ್ಲಿ ನುಡಿ ಹೇಳುತ್ತದೆ.
– ಆನಂದ ಗೌಡ ಪೆರ್ಲ,
ಇತಿಹಾಸ ಮತ್ತು ಜಾನಪದ ತಜ್ಞ ಬಾಲಕೃಷ್ಣ ಭೀಮಗುಳಿ