Advertisement

ಕೋಡ್ಲು ಹೇಳಿದ ಉದ್ಭವ ರಹಸ್ಯ

10:12 AM Feb 08, 2020 | Lakshmi GovindaRaj |

“ಇಲ್ಲಿಯವರೆಗೆ 29 ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಇದು ನನ್ನ ನಿರ್ದೇಶನದ 30ನೇ ಸಿನಿಮಾ. ಕಾದಂಬರಿ ಆಧಾರಿತ, ಮಹಿಳಾ ಪ್ರಧಾನ, ಮಕ್ಕಳ ಚಿತ್ರ, ತುಳು ಚಿತ್ರ ಹೀಗೆ ಬೇರೆ ಬೇರೆ ಥರದ ಸಿನಿಮಾಗಳನ್ನು ಮಾಡಿದ್ದೇನೆ. ಆದ್ರೆ ಅದರಲ್ಲಿ ಕೆಲವೊಂದು ಸಿನಿಮಾಗಳು ಜನ ಇಂದಿಗೂ ನನ್ನನ್ನು ಗುರುತಿಸುವಂತೆ ಮಾಡಿವೆ. ಅದರಲ್ಲಿ “ಉದ್ಭವ’ ಸಿನಿಮಾ ಕೂಡ ಒಂದು. ಆ ಸಿನಿಮಾ ರಿಲೀಸ್‌ ಆದ ಮೇಲೆ ಜನ ಎಲ್ಲೇ ಹೋದ್ರೂ ನನ್ನ ಹತ್ತಿರ ಅದೇ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರು.

Advertisement

ಮತ್ತೆ ಯಾವಾಗ “ಉದ್ಭವ’ ಥರದ ಸಿನಿಮಾ ಮಾಡ್ತೀರ? ಅಂಥ ಕೇಳುತ್ತಿದ್ದರು. ನನಗೂ ಮತ್ತೆ ಅಂಥದ್ದೇ ಒಂದು ಸಿನಿಮಾ ಮಾಡ್ಬೇಕು ಅಂಥ ಆಸೆಯಿತ್ತು. ಈಗ ಅದರಂತೆ “ಮತ್ತೆ ಉದ್ಭವ’ ಸಿನಿಮಾ ಮಾಡಿ ರಿಲೀಸ್‌ ಹಂತಕ್ಕೆ ತಂದಿದ್ದೇವೆ. ಈ ವಾರ ಸಿನಿಮಾ ತೆರೆಗೆ ಬರುತ್ತದೆ…’ – ಹೀಗೆ ಹೇಳುತ್ತ ಮಾತಿಗಿಳಿದವರು ಕನ್ನಡದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ. “ಮಾರ್ಚ್‌ 22′ ಸಿನಿಮಾದ ನಂತರ ಕೋಡ್ಲು ರಾಮಕೃಷ್ಣ ನಿರ್ದೇಶನದ “ಮತ್ತೆ ಉದ್ಭವ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ.

ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಕೋಡ್ಲು, “ಮತ್ತೆ ಉದ್ಭವ’ದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. “ಸುಮಾರು 30 ವರ್ಷಗಳಾದ್ರೂ, ಜನ ಇವತ್ತಿಗೂ ಎಲ್ಲೇ ಹೋದರೂ, “ಉದ್ಭವ’ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನನಗೂ ಅದರ ಮುಂದುವರೆದ ಭಾಗ ಮಾಡಿದ್ರೆ ಚೆನ್ನಾಗಿರುತ್ತದೆ ಎಂಬ ಆಲೋಚನೆ ಬಂತು. ಅದರ ಮುಂದುವರೆದ ಎಳೆಯನ್ನು ಇಟ್ಟುಕೊಂಡು 7-8 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಸ್ಕ್ರಿಪ್ಟ್ ಮಾಡಿದೆ.

ಅದೇ ವೇಳೆ ಸಿಕ್ಕ ನಿರ್ಮಾಪಕರು ಕೂಡ ನನ್ನಿಂದ “ಉದ್ಭವ’ ಥರದ್ದೇ ಸಿನಿಮಾ ಮಾಡಿಸುವ ಯೋಚನೆಯಲ್ಲಿದ್ದರು. ಆಗ ನನ್ನ ಬಳಿಯಿದ್ದ ಈ ಕಥೆ ಹೇಳಿದೆ. ಅದನ್ನು ಕೇಳಿದ ನಿರ್ಮಾಪಕರಿಗೂ ಇಷ್ಟವಾಯ್ತು. ನಂತರ ಸಿನಿಮಾನೂ ಶುರುವಾಯ್ತು. ಕೇವಲ ಐದಾರು ತಿಂಗಳಲ್ಲಿ ಇಡೀ ಸಿನಿಮಾನೇ ಕಂಪ್ಲೀಟ್‌ ಆಯ್ತು’ ಎಂದು “ಮತ್ತೆ ಉದ್ಭವ’ ಚಿತ್ರ ಶುರುವಾದ ರೀತಿಯ ಬಗ್ಗೆ ವಿವರಿಸುತ್ತಾರೆ ಕೋಡ್ಲು ರಾಮಕೃಷ್ಣ.

ಇನ್ನು ಚಿತ್ರದ ಕಥಾಹಂದರ ಬಗ್ಗೆ ಮಾತನಾಡುವ ಕೋಡ್ಲು ರಾಮಕೃಷ್ಣ, “ನಾನು ಕಣ್ಣಾರೆ ಕಂಡ ಘಟನೆಗಳು, ನಮ್ಮ ಸುತ್ತಮುತ್ತ ನಡೆಯುವಂಥ ಘಟನೆಗಳೇ ಈ ಸಿನಿಮಾ ಮಾಡಲು ಸ್ಫೂರ್ತಿ. ಇದರಲ್ಲಿ ಬರುವ ಪ್ರತಿ ಸನ್ನಿವೇಶಗಳೂ, ಪ್ರತಿ ವಿಷಯಗಳೂ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥವು. ಧರ್ಮ, ರಾಜಕಾರಣ, ಮಠ, ಆಶ್ರಮ, ಜನರ ನಿರೀಕ್ಷೆ, ಪ್ರಚಲಿತ ಘಟನೆಗಳು, ಲವ್‌-ಆ್ಯಕ್ಷನ್‌ ಹೀಗೆ ಸಿನಿಮಾದಲ್ಲಿ ಅನೇಕ ವಿಷಯಗಳಿವೆ. ಮನರಂಜನೆಯ ಜೊತೆಗೆ ಹೇಳಬೇಕಾಗಿರುವ ವಿಷಯವನ್ನು ನೋಡುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ.

Advertisement

ಬಹುಶಃ ಯಾರೂ ನಿರೀಕ್ಷಿಸದ ಕ್ಲೈಮ್ಯಾಕ್ಸ್‌ ಚಿತ್ರದಲ್ಲಿದೆ’ ಎನ್ನುತ್ತಾರೆ. “ಈಗಾಗಲೇ “ಮತ್ತೆ ಉದ್ಭವ’ದ ಪ್ರಚಾರ ಕಾರ್ಯಗಳು ಜೋರಾಗಿ ನಡೆಯುತ್ತಿದ್ದು, ಜನರನ್ನು ಥಿಯೇಟರ್‌ಗೆ ಕರೆಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ರಿಲೀಸ್‌ ಆಗಿರುವ ಹಾಡುಗಳು, ಟ್ರೇಲರ್‌ಗೆ ಎಲ್ಲ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್‌ ಸಿಗ್ತಿದೆ. ಈ ಸಿನಿಮಾದ ಮೂಲಕ ಪ್ರತಿ ಕಲಾವಿದರು, ತಂತ್ರಜ್ಞರು ಗುರುತಿಸಿಕೊಳ್ಳುತ್ತಾರೆ. “ಮತ್ತೆ ಉದ್ಭವ’ ಎಲ್ಲರಿಗೂ ಹೆಸರು ತಂದುಕೊಡುತ್ತದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ಕೋಡ್ಲು ರಾಮಕೃಷ್ಣ.

ಇನ್ನು ಮೂವತ್ತು ವರ್ಷದ ಹಿಂದಿನ “ಉದ್ಭವ’ದಲ್ಲಿ ಅನಂತನಾಗ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಬರುತ್ತಿರುವ “ಮತ್ತೆ ಉದ್ಭವ’ ಚಿತ್ರದಲ್ಲಿ ಅವರ ಜಾಗದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಮೋದ್‌, ಮಿಲನಾ ನಾಗರಾಜ್‌ ನಾಯಕ-ನಾಯಕಿಯಾಗಿ ತೆರೆಮೇಲೆ ಜೋಡಿಯಾಗಿದ್ದಾರೆ. ಅವಿನಾಶ್‌, ಸುಧಾ ಬೆಳವಾಡಿ, ವಿನಯಾ ಪ್ರಸಾದ್‌, ಮೋಹನ್‌, ಶುಭ ರಕ್ಷಾ ಮೊದಲಾದೆವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ವಿ. ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ಮೋಹನ್‌ ಛಾಯಾಗ್ರಹಣ, ಬಿ.ಎಸ್‌ ಕೆಂಪರಾಜ್‌ ಸಂಕಲನವಿದೆ. ಮೋಹನ್‌ ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ, 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಮತ್ತೆ ಉದ್ಭವ’ ಚಿತ್ರ ಇಂದು ತೆರೆಕಾಣುತ್ತಿದೆ. ಸದ್ಯ ತನ್ನ ಕಲಾವಿದರು, ಸಬ್ಜೆಕ್ಟ್, ಟ್ರೇಲರ್‌ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ “ಮತ್ತೆ ಉದ್ಭ’ ಪ್ರೇಕ್ಷಕ ಪ್ರಭುಗಳು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.

* ಜಿ.ಎಸ್‌. ಕಾರ್ತಿಕ್‌ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next