Advertisement

ಸಿಂಗಾಪುರಕ್ಕಿಂದು ಪೌರ ಕಾರ್ಮಿಕರ ಎರಡನೇ ತಂಡ

02:00 AM Jul 25, 2017 | Team Udayavani |

ಬೆಂಗಳೂರು: ಸ್ವತ್ಛತೆ ಹಾಗೂ ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಕುರಿತು ಪೌರ ಕಾರ್ಮಿಕರಲ್ಲಿ ತಿಳಿವಳಿಕೆ ಮೂಡಿಸಲು ಹಾಗೂ ಅಧಿಕಾರಿಗಳು ಅಧ್ಯಯನ ಮಾಡಿಕೊಂಡು ಬರಲು ರಾಜ್ಯ ಸರ್ಕಾರ ರೂಪಿಸಿರುವ “ಸಿಂಗಾಪುರ ಪ್ರವಾಸ’ ಭಾಗ್ಯಕ್ಕೆ ಎರಡನೇ ತಂಡ ಸಜ್ಜಾಗಿದೆ.

Advertisement

ಬಿಬಿಎಂಪಿ ಸೇರಿ ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ 39 ಪೌರ ಕಾರ್ಮಿಕರು ಹಾಗೂ ಮೂವರು ಅಧಿಕಾರಿಗಳನ್ನೊಳಗೊಂಡ ತಂಡಮಂಗಳವಾರ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದೆ.

ನಾಲ್ಕು ದಿನಗಳ ಸಿಂಗಾಪುರ ಪ್ರವಾಸ ಕೈಗೊಳ್ಳುತ್ತಿರುವ ಪೌರ ಕಾರ್ಮಿಕರಿಗೆ ತಲಾ 70 ಸಾವಿರ ರೂ. 
ವೆಚ್ಚವಾಗುತ್ತಿದ್ದು ಐದು ಸಾವಿರ ರೂ. (100 ಸಿಂಗಪುರ ಡಾಲರ್‌) ಪಾಕೆಟ್‌ ಮನಿಯಾಗಿ ಸಹ ನೀಡಲಾಗುತ್ತಿದೆ. ವಿಕಾಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಂಗಾಪುರ ಪ್ರವಾಸ ಕೈಗೊಂಡಿರುವವರಿಗೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ವಿಮಾನ ಟಿಕೆಟ್‌ ವಿತರಿಸಿ ಶುಭ ಹಾರೈಸಿದರು. 

ಮೊದಲ ತಂಡದಲ್ಲಿ ಕೇವಲ ಮೂವರು ಹಾಗೂ ಎರಡನೇ ತಂಡದಲ್ಲಿ ಐವರು ಮಹಿಳೆಯರು ಮಾತ್ರ ಇರುವುದನ್ನು ಗಮನಿಸಿದ ಸಚಿವರು ಮುಂದೆ ಪೂರ್ಣ ಪ್ರಮಾಣದಲ್ಲಿ ಮಹಿಳೆಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಕಳುಹಿಸಲಾಗುವುದು ಎಂದು ತಿಳಿಸಿದರು.

ಒಟ್ಟು 1 ಸಾವಿರ ಪೌರ ಕಾರ್ಮಿಕರನ್ನು ಸಿಂಗಾಪುರ ಪ್ರವಾಸ ಮಾಡಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು. ಕಾರ್ಯಕ್ರಮದಲ್ಲಿ ಮೊದಲ ತಂಡದಲ್ಲಿ ಸಿಂಗಾಪುರ ಪ್ರವಾಸ ಕೈಗೊಂಡಿದ್ದ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ತಮ್ಮ ಅನುಭವ ಹಂಚಿಕೊಂಡರು. ರಸ್ತೆ, ಸಾರ್ವಜನಿಕ ಪ್ರದೇಶ, ಅಪಾರ್ಟ್‌ಮೆಂಟ್‌, ವಾಣಿಜ್ಯ ಸ್ಥಳಗಳಲ್ಲಿನ ಸ್ವತ್ಛತೆ ನಿರ್ವಹಣೆ ಮತ್ತು ಕಸ ಸಂಗ್ರಹಣೆ ಮಾಹಿತಿ ನೀಡಿದರು.

Advertisement

ಸಿಂಗಾಪುರ ಪ್ರವಾಸಕ್ಕೆ ಸರ್ಕಾರ ನನ್ನನ್ನು ಕಳುಹಿಸುತ್ತಿರುವುದು ಸಂತಸ ತಂದಿದೆ. ಸಿಂಗಾಪುರದಲ್ಲಿ ಕಸ ವಿಲೇವಾರಿ ಹಾಗೂ ಸಂಸ್ಕರಣೆ ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಅದನ್ನು ನೋಡಿ ಅದೇ ರೀತಿ ನಮ್ಮಲ್ಲೂ ಮಾಡಲು ಪ್ರಯತ್ನಿಸಲಾಗುವುದು.
– ಕೃಷ್ಣಪ್ಪ, ಪೌರ ಕಾರ್ಮಿಕ, ಜಿಗಣಿ ಪುರಸಭೆ, ಆನೇಕಲ್‌

ಸಿಂಗಾಪುರಕ್ಕೆ ಹೋಗುತ್ತಿರುವುದಕ್ಕೆ ಸಂತೋಷವಾಗಿದೆ. ನಮಗೂ ಬೇರೆ ದೇಶ ನೋಡೋ ಭಾಗ್ಯ ಬಂದಿದೆ.
– ಯಲ್ಲವ್ವ, ಪೌರ ಕಾರ್ಮಿಕ ಮಹಿಳೆ, ಸಿಂದಗಿ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next