Advertisement

ನಾಳೆ ಎರಡನೇ ಹಂತದ ಭೀಮಾ ನದಿ ಶುದ್ಧೀಕರಣ

04:56 PM Jul 21, 2018 | Team Udayavani |

ಕಲಬುರಗಿ: ನದಿಗೆ ಕಾರ್ಖಾನೆಗಳ ತ್ಯಾಜ್ಯ ಸೇರ್ಪಡೆ ಹಾಗೂ ಇತರ ಅಕ್ರಮಗಳಿಂದ ಮಲೀನಗೊಳ್ಳುತ್ತಿರುವ ನದಿಗಳ ಸ್ವತ್ಛತಾ ಕಾರ್ಯದ ಅಂಗವಾಗಿ ಜುಲೈ 22ರಂದು ಜಿಲ್ಲೆಯ ಜೀವನಾಡಿ ಭೀಮಾನದಿ ಶುದ್ಧೀಕರಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ ಏಳು ಜೀವ ನದಿಗಳ ಸ್ವತ್ಛತೆ ಕೈಗೊಂಡಿದ್ದು, ಎರಡನೇ ಹಂತವಾಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿಯಲ್ಲಿ ಜು. 22ರಂದು ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ್‌ನ‌ ಸುನೀಲಕುಮಾರ್‌ ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕಳೆದ ಜುಲೈ 8ರಂದು ಸುಮಾರು 120ಕ್ಕೂ ಅಧಿಕ ಕಾರ್ಯಕರ್ತರು ಘತ್ತರಗಿ ನದಿಯಲ್ಲಿ ಸುಮಾರು 60 ಟನ್‌ಗೂ ಅಧಿ ಕ ತ್ಯಾಜ್ಯವನ್ನು ಹೊರತೆಗೆಯಲಾಗಿದೆ. ಈಗ ಎರಡನೇ ಹಂತದಲ್ಲಿ ಮತ್ತೂಮ್ಮೆ ಕೈಗೊಳ್ಳಲಾಗಿದೆ. ಭೀಮಾ ನದಿಯು ಉತ್ತರ ಕರ್ನಾಟಕದ ಜೀವನಾಡಿ ಹಾಗೂ ಜೀವ ನದಿಯೂ ಹೌದು. ಕರ್ನಾಟಕದಲ್ಲಿ 286 ಕಿ.ಮೀ. ಹರಿದು 18315 ಚ.ಕಿ.ಮೀ.ಗಳಷ್ಟು ಜಲಾನಯನ ಪ್ರದೇಶ ಹೊಂದಿದೆ. ಕುಡಿಯುವ ನೀರು, ಕೃಷಿ, ಕೈಗಾರಿಕೆಗಳಿಗೆ ಮೂಲ ಆಕರ ಭೀಮಾ ನದಿ. ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ, ಮಹಾರಾಷ್ಟ್ರ, ತೆಲಂಗಾಣಗಳಿಗೂ ಅನ್ವಯಿಸಿದೆ. 

ನದಿಯ ತಟದಲ್ಲಿ ಪುಣ್ಯಕ್ಷೇತ್ರಗಳಿಗೇನೂ ಕಡಿಮೆ ಇಲ್ಲ. ಅದರಲ್ಲಿಯೂ ಗಾಣಗಾಪುರ, ಘತ್ತರಗಿ ಕ್ಷೇತ್ರಗಳು ಪ್ರಮುಖವಾಗಿವೆ. ಭಕ್ತಾದಿಗಳು ಕೊಳೆಯನ್ನು ತೊಳೆಯುವ ಭರದಲ್ಲಿ ಇಡೀ ಭೀಮೆಯನ್ನು ಕಸದ ತೊಟ್ಟಿಯನ್ನಾಗಿ ಮಾರ್ಪಡಿಸಿದ್ದಾರೆ. ಬದಲಾಯಿಸುವ ಹೊಣೆ ಈಗ ನಮ್ಮದಾಗಿದೆ ಎಂದು ವಿವರಣೆ ನೀಡಿದರು.

ಮನೆಯ ಕಸ,ತ್ಯಾಜ್ಯ, ಕಾರ್ಖಾನೆ ಕೊಳಕನ್ನು ಮತ್ತು ರಾಸಾಯನಿಕಯುಕ್ತ ವಿಷವನ್ನು ನದಿಗೆ ಉಣಿಸುತ್ತಿದ್ದೇವೆ. ಬೆಂಗಳೂರಿನ ಪ್ರಭಾವತಿ ನದಿಯಿಂದು ಚರಂಡಿಯಾಗಿ ಮಾರ್ಪಟ್ಟಿದೆ. ಆ ರೀತಿ ಭೀಮಾ ನದಿ ಆಗಬಾರದು. ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ. ಭೀಮಾ ನದಿಗೆ ತ್ಯಾಜ್ಯ ಸೇರಿಸುವುದನ್ನು ನಿಲ್ಲಿಸೋಣ. ಒಂದು ರವಿವಾರ ಭೀಮೆಗೆ ಮೀಸಲಿಡೋಣ ಎನ್ನುವ ನಿಟ್ಟಿನಲ್ಲಿ ಜು. 22ರಂದು ಬೆಳಗ್ಗೆ 6 ಗಂಟೆಗೆ ಭಾಗವಹಿಸಬೇಕೆಂದು ಕೋರಿದರು.

ಮುಂದಿನ ದಿನಗಳಲ್ಲಿ ಗಾಣಗಾಪುರ ಸೇರಿದಂತೆ ಇನ್ನಿತರ ಪವಿತ್ರ ಕ್ಷೇತ್ರಗಳನ್ನು ಸ್ವತ್ಛಗೊಳಿಸಲಾಗುತ್ತದೆ ಎಂದರು. ಸುನೀಲ ಶೆಟ್ಟಿ, ಸಂಜುಕುಮಾರ ಭಾವಿಕಟ್ಟಿ, ಸಂತೋಷ ಸಾಮ್ರಾಟ, ಅನೀಲ ದೇಸಾಯಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next