ಉಳ್ಳಾಲ: ಉಪ್ಪು ನೀರಿನ ಸ್ನಾನಕ್ಕೆಂದು ಸಮುದ್ರಕ್ಕಿಳಿದ ಯುವಕ ಸಮುದ್ರಪಾಲಾದ ಘಟನೆ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಸೀಗ್ರೌಂಡ್ ಬಳಿ ರವಿವಾರ ಬೆಳಗ್ಗೆ ನಡೆದಿದ್ದು, ಮೃತ ಶರೀರವನ್ನು ತಣ್ಣೀರುಬಾವಿ ಮುಳುಗು ತಜ್ಞರ ತಂಡ ಸಂಜೆಯ ವೇಳೆಗೆ ಸಮುದ್ರದಿಂದ ಮೇಲೆತ್ತಿದೆ.
ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ಹನೀಫ್ (31) ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಯುವಕ. ಬೇಸಗೆ ಧಗೆಯಿಂದ ಮೈಯಲ್ಲಿ ಹುಣ್ಣಾಗಿದ್ದು, ಸಮುದ್ರ ಸ್ನಾನದಿಂದ ಹುಣ್ಣು ಗುಣವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸ್ನೇಹಿತರೊಂದಿಗೆ ಮುಕ್ಕಚ್ಚೇರಿಯ ಸೀಗ್ರೌಂಡ್ ಬಳಿ ಸಮುದ್ರ ಸ್ನಾನಕ್ಕೆಂದು ಬಂದಿದ್ದರು.
ಹನೀಫ್ ಸ್ನೇಹಿತರು ಸಮುದ್ರದಿಂದ ದೂರದಲ್ಲಿ ನಿಂತಿದ್ದರೆ ಹನೀಫ್ ಸಮುದ್ರ ಬಳಿಯ ಕಲ್ಲಿನ ದಂಡೆಯಲ್ಲಿ ನಿಂತಿದ್ದಾಗ ದೊಡ್ಡ ಅಲೆಯೊಂದಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು. ಹನೀಫ್ ಪತ್ತೆಯಾಗದೆ ಇದ್ದಾಗ ತಣ್ಣೀರುಬಾವಿಯ ಮುಳುಗು ತಜ್ಞರ ತಂಡವನ್ನು ಉಳ್ಳಾಲ ಪೊಲೀಸರು ಕರೆಸಿದ್ದು, ತಂಡದ ಜಾವೇದ್, ಝಾಕಿರ್ ಹುಸೇನ್, ಮಹಮ್ಮದ್ ವಾಸಿಂ, ಹಸನ್ ಪಿ.ಬಿ. ಸಾದಿಕ್ ಎರಡು ಗಂಟೆ ಸತತವಾಗಿ ಈಜಾಡಿ ಹನೀಫ್ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಬೆಳಗ್ಗಿನಿಂದಲೇ ಕೋಟೆಪುರ, ಮೊಗವೀರಪಟ್ಣ, ಮುಕ್ಕಚ್ಚೇರಿಯಿಂದ ಮೀನುಗಾರರು, ಈಜುಗಾರರು ಆಗಮಿಸಿ ಶೋಧಕಾರ್ಯಕ್ಕೆ ಸಹಕರಿಸಿದ್ದರು.
ಸಚಿವ ಖಾದರ್ ಭೇಟಿ: ಸಚಿವ ಯು.ಟಿ. ಖಾದರ್ ಶೋಧಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದರು. ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಎಸ್‌ಐಗಳಾದ ರಾಜೇಂದ್ರ, ಪ್ರಕಾಶ್ ಆಗಮಿಸಿದ್ದರು. ಅಗ್ನಿಶಾಮಕದಳ ಶೋಧಕಾರ್ಯದಲ್ಲಿ ತೊಡಗಿಸಿಕೊಂಡಿñತ್ತು.
ಮನೆಯ ಆದಾರಸ್ತಂಭ: ವೃತ್ತಿಯಲ್ಲಿ ಪೈಂಟರಾಗಿದ್ದ ಹನೀಫ್ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರು ಬಡಕುಟುಂಬದವರಾಗಿದ್ದು ಮನೆಯ ಆಧಾರಸ್ತಂಭವಾಗಿದ್ದರು.