Advertisement

ಹಳೆ ವಿದ್ಯಾರ್ಥಿಗಳೇ ನಿರ್ವಹಿಸುವ ಶಾಲೆಯ ಅಡಿಕೆ ತೋಟ ಸಿದ್ಧ

03:11 PM Jul 02, 2023 | Team Udayavani |

ಬಂಟ್ವಾಳ: ಸರಕಾರಿ ಶಾಲಾ ಜಮೀನಿನಲ್ಲಿ ಅಡಿಕೆ ತೋಟ ಮಾಡಿ ನಾಲ್ಕೈದು ವರ್ಷಗಳ ಕಾಲ ಅದರ ನಿರ್ವಹಣೆಯನ್ನೂ ತಾವೇ ಮಾಡಿ ಫಸಲು ಬಂದ ಬಳಿಕ ಅದನ್ನು ಶಾಲೆಗೆ ಹಸ್ತಾಂತರಿಸುವ ಯೋಜನೆ ಹಾಕಿಕೊಂಡಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಇದೀಗ ತಮ್ಮ ಯೋಜನೆಯ ಮೊದಲ ಹಂತದ ಭಾಗವಾಗಿ ಗಿಡ ನೆಡುವ ಪ್ರಕ್ರಿಯೆ ಪೂರ್ತಿಗೊಳಿಸಿದೆ. ಅದರ ಪ್ರಯತ್ನದ ಭಾಗವಾಗಿ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸುಮಾರು 210 ಅಡಿಕೆ ಗಿಡಗಳ ತೋಟ ಸಿದ್ಧಗೊಂಡಿದೆ.

Advertisement

ಹಲವು ಸಂಘಟನೆಗಳು ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದನ್ನು ಕಂಡಿದ್ದೇವೆ. ಶಾಲೆಯ ಎಸ್‌ಡಿಎಂಸಿ-ವಿದ್ಯಾರ್ಥಿಗಳು ಸೇರಿ ತೋಟ ಮಾಡಿರುವ ಉದಾಹರಣೆ ಗಳೂ ಸಾಕಷ್ಟಿವೆ. ಆದರೆ ಮಂಚಿ ಕೊಳ್ನಾಡು ಶಾಲೆಯ ಹಿರಿಯ ವಿದ್ಯಾರ್ಥಿಗಳು ಅಡಿಕೆ ಗಿಡ ನೆಡುವ ಕಾರ್ಯದ ಜತೆಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಶಾಲೆಗಳಲ್ಲಿ ತೋಟ ಮಾಡಿದರೆ ಅದನ್ನು ಶಿಕ್ಷಕರು, ವಿದ್ಯಾರ್ಥಿಗಳು ನಿರ್ವಹಣೆ ಮಾಡಬೇಕಾಗುತ್ತದೆ. ಎಸ್‌ಡಿಎಂಸಿ ನಿರ್ವಹಣೆಯ ಜವಾ ಬ್ದಾರಿ ತೆಗೆದುಕೊಂಡರೂ, ಅವರು ನಿತ್ಯ ಶಾಲೆಗೆ ಬಾರದೆ ತೋಟ ನಿರೀಕ್ಷಿತ ಫಸಲನ್ನು ಪಡೆಯುವಲ್ಲಿ ವಿಫಲವಾಗುತ್ತದೆ. ಅಪವಾದಕ್ಕೆ ಕೆಲವು ಯಶಸ್ವಿ ಆದದ್ದೂ ಇದೆ. ಆದರೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಂಘದಲ್ಲಿ ಅಧ್ಯಕ್ಷರು ಸೇರಿದಂತೆ ಸಾಕಷ್ಟು ಮಂದಿ ಅನುಭವಿ ಅಡಿಕೆ ಕೃಷಿಕರಿದ್ದು, ಹೀಗಾಗಿ ಅವರೇ ಅದರ ಜವಾಬ್ದಾರಿ ಹೊತ್ತು ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಶಾಲೆಯ ಅಭಿವೃದ್ಧಿಯ ದೃಷ್ಟಿ ಯಿಂದ ಮೂಲಸೌಕರ್ಯದ ಆರ್ಥಿಕ ಕ್ರೋಢೀಕರಣಕ್ಕಾಗಿ ಹಿರಿಯ ವಿದ್ಯಾರ್ಥಿಗಳ ಸಂಘ ಸುಮಾರು 45 ವರ್ಷಗಳ ಇತಿಹಾಸವಿ ರುವ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆ ಯಲ್ಲಿ ತೋಟ ನಿರ್ಮಾಣದ ಕಾರ್ಯ ಮಾಡುತ್ತಿದೆ.ಶಾಲೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಸೇರಿ 300ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ತೋಟ ನಿರ್ಮಾಣದ ದೃಷ್ಟಿ ಯಿಂದಲೇ ಕೆಲವು ತಿಂಗಳ ಹಿಂದೆ ಹಿರಿಯ ವಿದ್ಯಾರ್ಥಿಗಳ ಕ್ರೀಡಾ ಕೂಟ ಆಯೋಜನೆ ಮಾಡಿ 4 ಲಕ್ಷ ರೂ.ಗಳನ್ನು ಸಂಗ್ರಹ ಮಾಡಲಾ ಗಿತ್ತು. ಮುಂದಿನ ಆಗಸ್ಟ್‌ ನಲ್ಲಿ ತೋಟದ ನೀರಿಗಾಗಿ ಕೊಳವೆ ಬಾವಿ ಕೊರೆಯಲು ಯೋಜನೆ ಹಾಕಿಕೊಂಡಿದ್ದಾರೆ.

Advertisement

ಸಾವಯವ ತೋಟದ ಚಿಂತನೆ
ಅಡಿಕೆ ತೋಟದ ರಚನೆಯ ಜತೆಗೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಹಳೆ ವಿದ್ಯಾರ್ಥಿ ಸಂಘ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತೋಟಕ್ಕೆ ಸಾವಯವ ಗೊಬ್ಬರವನ್ನೇ ಬಳಸುವುದಕ್ಕೆ ಚಿಂತನೆ ನಡೆಸಿದೆ. ಈ ತೋಟಕ್ಕೆ ಅಡಿಕೆ ಸಸಿಗಳನ್ನು ಕೊಡುಗೆಯಾಗಿ ಕೊಟ್ಟಿರುವ ಸಾವ ಯವ ಕೃಷಿಕ, ಹಳೆ ವಿದ್ಯಾರ್ಥಿ ನಿಶ್ಚಲ್‌ ಶೆಟ್ಟಿ ಅವರು ಸಾವಯವದ ಚಿಂತನೆ ಹಾಕಿಕೊಂಡಿದ್ದಾರೆ.

ಪ್ರಸ್ತುತ ತೋಟ ರಚನೆಗೆ ಹಳೆ ವಿದ್ಯಾರ್ಥಿಗಳು ಬೇರೆ ಬೇರೆ ವಸ್ತು ಗಳನ್ನು ಕೊಡುಗೆಯಾಗಿ ನೀಡಿದ್ದು, ಹಳೆ ವಿದ್ಯಾರ್ಥಿ ಸುಲೈಮಾನ್‌ ಹಾಜಿ ಅವರು ಬೇಲಿ ನಿರ್ಮಾಣದ ಪರಿಕರಗಳನ್ನು ಒದಗಿಸಿದ್ದಾರೆ. ಉಳಿದಂತೆ ಗಿಡಗಳಿಗೆ ಗೊಬ್ಬರ, ಬುಡಕ್ಕೆ ಸೊಪ್ಪು, ತೆಂಗಿನ ಸಿಪ್ಪೆ ಹಳೆ ವಿದ್ಯಾರ್ಥಿಗಳ ಕೊಡುಗೆಯಿಂದಲೇ ಬಂದಿರುತ್ತದೆ.

ಕೊಳವೆಬಾವಿಯ ಯೋಚನೆ
ಪ್ರಸ್ತುತ 210 ಅಡಿಕೆ ಗಿಡಗಳ ನಾಟಿಯಾಗಿದ್ದು, ಹಳೆ ಶೌಚಾಲಯ ತೆರವು ಮಾಡಿ ಇನ್ನೂ ಒಂದಷ್ಟು ಗಿಡಗಳನ್ನು ನೆಡಲಾಗುವುದು. ಈಗಾಗಲೇ 3 ಲಕ್ಷ ರೂ.ಗಳನ್ನು ವ್ಯಯಿಸಲಾಗಿದ್ದು, ಮುಂದೆ ಕೊಳವೆಬಾವಿ ಕೊರೆಯುವ ಯೋಚನೆ ಇದೆ. ಅಡಿಕೆ ಸಸಿ ಸೇರಿದಂತೆ ಸಾಕಷ್ಟು ಮಂದಿ ವಸ್ತು ರೂಪದ ಸಹಕಾರ ನೀಡಿದ ಪರಿಣಾಮ ಈ ಕಾರ್ಯ ಯಶಸ್ವಿಯಾಗಿ ನಡೆದಿದೆ.
-ರಾಮ್‌ಪ್ರಸಾದ್‌ ರೈ ತಿರುವಾಜೆ,
ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ

210 ಅಡಿಕೆ ಸಸಿ-60 ಬಾಳೆ ಗಿಡ
ಶಾಲೆಯ ಒಟ್ಟು 1 ಎಕ್ರೆ ಜಮೀನಿನಲ್ಲಿ 60 ಸೆಂಟ್ಸ್‌ನಷ್ಟು ಜಾಗವನ್ನು ಸಮತಟ್ಟು ಮಾಡಿ ಅಡಿಕೆ ಸಸಿ ನೆಡಲಾಗಿದೆ. ಈಗಾಗಲೇ 210 ಅಡಿಕೆ, 60 ಬಾಳೆ ಗಿಡಗಳನ್ನು ನೆಡಲಾಗಿದೆ. ಪ್ರಸ್ತುತ ಶಾಲೆಗೆ ಹೊಸ ಶೌಚಾಲಯ ನಿರ್ಮಾಣಗೊಳ್ಳುತ್ತಿದ್ದು, ಹೀಗಾಗಿ ಹಳೆ ಶೌಚಾಲಯ ತೆರವು ಮಾಡಿದರೆ ಅಲ್ಲೂ ಒಂದಷ್ಟು ಗಿಡಗಳನ್ನು ನೆಡಬಹುದಾಗಿದೆ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next