ಕೋಲಾರ: ತಾಲೂಕಿನಲ್ಲಿ ಧಾರಾಕರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಳಹಸ್ತಿಪುರ ಮತ್ತು ವಡಗೂರು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರಿಂದ ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೊರೆನ್ ಶಾಲೆಗೆ ನೀರು
ನುಗ್ಗಿದೆ. ಹಾಗಾಗಿ, ಶಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೋಟ್‌ಗಳ ಸಹಾಯದಿಂದ ಹೊರ ಕರೆತರಲಾಯಿತು.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಗೆ ತುಂಬಿ ಹರಿಯುತ್ತಿದ್ದ ಕಾಳಹಸ್ತಿಪುರ ಮತ್ತು ವಡಗೂರು ಕೆರೆಗಳ ನೀರು ಸೋಮವಾರದಿಂದಲೇ ಸಣ್ಣದಾಗಿ ಹರಿದು ಶಾಲಾ ಕಾಂಪೌಂಡ್ ಪ್ರವೇಶಿಸಿತ್ತು. ಆದರೆ, ಬುಧವಾರ ಮುಂಜಾನೆ ಬಿದ್ದ ಮಳೆಯಿಂದ ನೀರಿನ ಹರಿವು ಹೆಚ್ಚಾಗಿತ್ತು. ಇದರಿಂದ, ಕೊರೆನ್ ಶಾಲಾ ಕಾಂಪೌಂಡ್ ತುಂಬ ಭಾರೀ ಪ್ರಮಾಣದ ನೀರು ನುಗ್ಗಿ ಮಿನಿ ಕೆರೆ ನಿರ್ಮಾಣವಾಗಿತ್ತು. ಶಾಲೆಯ ಹಾಸ್ಟೆಲ್‌ನಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ 100ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದರು. ಮಳೆ ನೀರಿನಿಂದ ರಕ್ಷಣೆ ಪಡೆಯಲು ಎಲ್ಲರೂ ಮೊದಲ ಅಂತಸ್ತಿನ ಕಟ್ಟಡಗಳಲ್ಲಿ ಸೇರಿಕೊಂಡಿದ್ದರು.
ಬೋಟ್ ಮೂಲಕ ರಕ್ಷಣೆ: ಈ ನಡುವೆ ಕೆಲವು ವಿದ್ಯಾರ್ಥಿಗಳು ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದರು. ಆಗ ವಿದ್ಯಾರ್ಥಿಗಳನ್ನು ಹೊರ ಕರೆತರಲು ಬೆಂಗಳೂರಿನ ವಿಪತ್ತು ಸ್ಪಂದನಾ ದಳದ ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ವಿಷಯ ತಿಳಿದ ವಿಪತ್ತು ಸ್ಪಂದನಾ ದಳದ ಸಿಬ್ಬಂದಿ ಬೋಟ್‌ನೊಂದಿಗೆ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೋಟ್‌ನಲ್ಲಿ ಕರೆತಂದರು.
ಪ್ರಕರಣ ಸುಖಾಂತ್ಯ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ವಿಜಯಣ್ಣ, ಕಾರ್ಯಾಚರಣೆ ವೇಳೆ ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗಿಲ್ಲ. ಎಲ್ಲರನ್ನೂ ಸುರಕ್ಷಿತವಾಗಿ ಹೊರ ಕರೆದುಕೊಂಡು ಬಂದಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಅವರೊಂದಿಗೆ ವಿಭಾಗಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸದಸ್ಯ ಬಿ.ವಿ.ಮಹೇಶ್, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಮತ್ತಿತರರು ಆಗಮಿಸಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.