Advertisement

ಫ‌ಲಿತಾಂಶದ ಆಧಾರದಲ್ಲಿ ಶಾಲೆಗೂ ಸಿಗಲಿದೆ ಶ್ರೇಣಿ

01:06 AM Dec 02, 2020 | mahesh |

ಬೆಂಗಳೂರು: ಎಸೆಸೆಲ್ಸಿ ಫ‌ಲಿತಾಂಶದ ಆಧಾರದಲ್ಲಿ ಜಿಲ್ಲೆಗಳಿಗೆ ಶ್ರೇಣಿ ನೀಡಿರುವ ಮಾದರಿಯಲ್ಲೇ ಶಾಲೆಗಳಿಗೂ ಶ್ರೇಣಿ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದ್ದು, ಅದರಂತೆ ಶ್ರೇಣಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

Advertisement

ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣವನ್ನೇ ಗುರಿಯಾಗಿಟ್ಟು ಕೊಳ್ಳದೇ, ಗುಣಾತ್ಮಕವಾಗಿ ಫ‌ಲಿತಾಂಶವನ್ನು ಅಳೆಯುವ ನೂತನ ಪದ್ಧತಿ ಅಳವಡಿಸಿಕೊಳ್ಳ ಲಾಗಿದೆ. ಇದು ಎಸೆಸೆಲ್ಸಿಯ ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಶಿಕ್ಷಣ ನೀತಿಯ ಅನುಷ್ಠಾನಕ್ಕೂ ಪೂರಕವಾಗಲಿದೆ. ಪ್ರತಿ
ವರ್ಷ ಎಸೆಸೆಲ್ಸಿ ಪರೀಕ್ಷೆ ಎದುರಿಸುವ ರೆಗ್ಯೂಲರ್‌ ವಿದ್ಯಾರ್ಥಿಗಳ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ಶಾಲೆಗಳಿಗೆ ಗುಣಾತ್ಮಕ ಫ‌ಲಿತಾಂಶದ ಶ್ರೇಣಿಯನ್ನು ನೀಡಲಾಗುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದರು.

ಶ್ರೇಣಿ ಲೆಕ್ಕಾಚಾರ ಮಾನದಂಡ
ಶಾಲೆಗೆ ಶ್ರೇಣಿ ನೀಡುವಾಗ ಎಸೆಸೆಲ್ಸಿ ಪರೀಕ್ಷೆಗೆ ಆ ಶಾಲೆಯಿಂದ ಕುಳಿತಿರುವ ರೆಗ್ಯೂಲರ್‌ ವಿದ್ಯಾರ್ಥಿಗಳಲ್ಲಿ ಉತ್ತೀರ್ಣತಾ ಪ್ರಮಾಣ, ಶಾಲೆಯ ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕ, ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಮತ್ತು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರಮಾಣವನ್ನು ಕ್ರೋಡೀಕರಿಸಿ ಶ್ರೇಣಿ ನೀಡಲಾಗುತ್ತದೆ. ಈ ಮಾನದಂಡದಡಿ 75 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ಶಾಲೆಗೆ “ಎ’, 60ರಿಂದ 75 ಅಂಕ ಪಡೆದ ಶಾಲೆಗೆ “ಬಿ’ ಹಾಗೂ 60ಕ್ಕಿಂತ ಕಡಿಮೆ ಅಂಕ ಪಡೆದ ಶಾಲೆಗೆ “ಸಿ’ ಶ್ರೇಣಿ ನೀಡಲಾಗುತ್ತದೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ಮಾಹಿತಿ ನೀಡಿದರು.

ಶ್ರೇಣಿಯ ಅನುಕೂಲತೆ?
ಶೇ.100ರಷ್ಟು ಅಥವಾ ಶೂನ್ಯ ಫ‌ಲಿತಾಂಶದ ಶಾಲೆಗಳು ಎಂಬ ಪರಿಕಲ್ಪನೆ ಇನ್ಮುಂದೆ ಇರುವುದಿಲ್ಲ. ಫ‌ಲಿತಾಂಶದ ಆಧಾರದಲ್ಲಿ ಶ್ರೇಣಿ ನೀಡುವುದರಿಂದ ಎ, ಬಿ ಅಥವಾ ಸಿ ಶ್ರೇಣಿಯ ಶಾಲೆಗಳು ಮಾತ್ರ ಉಳಿಯುತ್ತದೆ. ಬಿ ಮತ್ತು ಸಿ ಶ್ರೇಣಿಯ ಶಾಲೆಗಳಲ್ಲಿ ಶೈಕ್ಷಣಿಕವಾಗಿ ಆಗಬೇಕಿರುವ ಬದಲಾವಣೆಗಳೇನು ಎಂಬುದನ್ನು ಸುಲಭವಾಗಿ ಪತ್ತೆ ಹೆಚ್ಚಿ, ಗುಣಾತ್ಮಕ ಮೌಲ್ಯಮಾಪನದ ಮೂಲಕ ಉನ್ನತ್ತೀಕರಿಸಲು ಅನುಕೂಲವಾಗಲಿದೆ. ಶೂನ್ಯ ಫ‌ಲಿತಾಂಶದ ಶಾಲೆಯ ಪರಿಕಲ್ಪನೆ ಇರುವುದಿಲ್ಲ ಎಂದು ಅಧಿಕಾರಿ ತಿಳಿಸಿದರು.

ಶಾಲೆಗಳಿಗೆ ಶ್ರೇಣಿ ನೀಡುವುದರಿಂದ ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆಗೆ ಹೆಚ್ಚು ಸಹಕಾರಿ ಯಾಗಲಿದೆ. ಅಲ್ಲದೆ, ಶೈಕ್ಷಣಿಕ ಸುಧಾರಣೆಗೂ ಅನುಕೂಲವಾಗುತ್ತದೆ. ಎಸೆಸೆಲ್ಸಿ ಫ‌ಲಿತಾಂಶದ ಆಧಾರದಲ್ಲಿ ಪ್ರಸಕ್ತ ಸಾಲಿನಿಂದ ಶಾಲೆಗಳಿಗೆ ಶ್ರೇಣಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ.
– ವಿ. ಸುಮಂಗಳಾ, ನಿರ್ದೇಶಕಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

Advertisement

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next