ಹನೂರು: ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಕರಡಿಯೊಂದು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನ ಮತ್ತು ಮಹದೇಶ್ವರ ಪ್ರೌಢಶಾಲಾ ಆವರಣದ ಮುಂಭಾಗದಲ್ಲಿ ಡಿ.17ರ ಭಾನುವಾರ ಮುಂಜಾನೆ ಸುಮಾರು 3.11 ಗಂಟೆಗೆ ಕರಡಿಯೊಂದು ಸಂಚರಿಸುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಶಾಲೆಯ ಆವರಣದಲ್ಲಿ ಕರಡಿ ಓಡಾಡಿರುವುದನ್ನು ಗಮನಿಸಿದ ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಾರದಲ್ಲಿ 3ನೇ ಪ್ರಕರಣ: ಬಹುಪಾಲು ಗುಡ್ಡಗಾಡು ಪ್ರದೇಶ ಮತ್ತು ಕಾಡಂಚಿನ ಗ್ರಾಮಗಳಿಂದ ಆವೃತ್ತವಾಗಿರುವ ಹನೂರು ತಾಲೂಕಿನಲ್ಲಿ ಈ ಹಿಂದೆ ಆನೆ ಮತ್ತು ಚಿರತೆಯ ಹಾವಳಿ ಹೆಚ್ಚಾಗಿತ್ತು.
ಆದರೆ ಇದೀಗ ಕಳೆದ ಒಂದು ವಾರದಿಂದ ಜಾಂಬವಂತನ ಹಾವಳಿಯಿಂದಾಗಿ ಸಾರ್ವಜನಿಕರು ಭಯಭೀತರಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಅಜ್ಜೀಪುರ ಗ್ರಾಮದ ಪೆಟ್ಟಿಗೆ ಅಂಗಡಿಗಳಿಗೆ ಕರಡಿ ನುಗ್ಗಿ ಆಹಾರ ಪದಾರ್ಥಗಳನ್ನು ಹಾನಿ ಮಾಡಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸೆರೆಹಿಡಿದಿದ್ದರು. ಕಳೆದ ಶುಕ್ರವಾರ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸಂದನಪಾಳ್ಯ ಗ್ರಾಮದ ಖಾಸಗಿ ಶಾಲೆಯಲ್ಲಿ ಕರಡಿ ಪ್ರತ್ಯಕ್ಷವಾಗಿತ್ತು. ಇದೀಗ ಕೌದಳ್ಳಿ ಗ್ರಾಮದಲ್ಲಿಯೂ ಕರಡಿ ಪ್ರತ್ಯಕ್ಷವಾಗಿರುವುದರಿಂದ ತಾಲೂಕಿನ ಜನತೆ ಆತಂಕಕ್ಕೊಳಗಾಗಿದ್ದಾರೆ.