Advertisement
ಓ ನನ್ನ ಪ್ರೀತಿಯ ಗೆಳೆಯಇದನ್ನು ಪ್ರೇಮಪತ್ರ ಅನ್ನೋಕೆ ಕಾಲ ಮೀರಿ ಹೋಗಿದೆ. ಸ್ನೇಹ ಪತ್ರ ಎಂದು ಕರೆಯಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಇದೆಲ್ಲಾ ಶುರುವಾಗಿದ್ದು ಯಾವಾಗಿಂದ ಹೇಳು? ಮೊದಲ ಬಾರಿಗೆ ನೀನು ಎದುರು ಮನೆಗೆ ಬಾಡಿಗೆಗೆ ಬಂದ ದಿನದಿಂದ ಅಲ್ಲವಾ? ಅವತ್ತೇ ನಾನು ನಿನ್ನ ಮೊದಲು ನೋಡಿದ್ದು.
Related Articles
Advertisement
ಹೇಳು ಗೆಳೆಯ, ನಿನಗೆ ನಾನಂದ್ರೆ ಇಷ್ಟವಿರಲಿಲ್ವಾ? ನಮ್ಮನೆಯ ರಂಗವಲ್ಲಿ ಡಬ್ಬಿ, ನೀನೆಂದು ಅಪ್ಪಿ ಹಿಡಿದು ಮಲಗಿದ ದಿಂಬು, ಕೈ ಕೈ ಹಿಡಿದು ಓಡಾಡಿದ ಆ ರಸ್ತೆ, ನೀನು ನನಗೇ ಸ್ವಂತವಾಗಲಿ ಅಂತ ಬೇಡಿಕೊಳ್ಳುವಾಗ ಬಿದ್ದ ದೇವಸ್ಥಾನದ ಗುಲಾಬಿ ಹೂವನ್ನು ಕೇಳಿ ನೋಡು, ನಮ್ಮಿಬ್ಬರ ಮಧ್ಯೆ ಇದ್ದದ್ದು ಸ್ನೇಹವೋ, ಪ್ರೀತಿಯೊ ಅಂತ. ನನ್ನ ಕಾಲಿಗೆ ಗೆಜ್ಜೆ ನೀನಾದರೆ, ನಿನ್ನ ಬಾಳಿನ ನಾದ ನಾನಾಗುವ ಆಸೆ. ನನ್ನ ಮುಡಿಯ ಹೂ ನೀನಾದರೆ, ನಿನ್ನ ಜೀವನದ ಪರಿಮಳ ನಾನಾಗುವ ಆಸೆ ಕಣೋ…
ಮತ್ತೂಮ್ಮೆ ನಿನ್ನನ್ನೇ ನೀನು ಕೇಳಿಕೋ. ಇದು ಸ್ನೇಹವಾ, ಪ್ರೀತಿಯಾ ಅಥವಾ ಜಸ್ಟ್ ಆಕರ್ಷಣೆಯಾ ಅಂತ. ನಿನಗೆ ನೀನೇ ಉತ್ತರ ಕಂಡು ಹಿಡಿದುಕೋ. ನಿನಗಾಗಿ ಎಷ್ಟೋ ಪ್ರೇಮ ಪತ್ರಗಳನ್ನು ಬರೆದಿದ್ದೆ. ಅದರೆ, ಯಾವುದನ್ನೂ ನಿನಗೆ ಕೊಡಲಾಗಲಿಲ್ಲ. ಅವುಗಳೆಲ್ಲ ನಿನ್ನ ಕೈ ಸೇರಿದ್ದರೆ ಇವತ್ತು ಈ ಪತ್ರವನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.
ಇತ್ತೀಚೆಗೆ ನಾನಿಡುವ ರಂಗೋಲಿಯಲ್ಲಿ ಚುಕ್ಕಿಗಳು ಇವೇ ಹೊರತು, ಬಣ್ಣವಿಲ್ಲ. ಬದುಕಿನ ರಂಗೂ ಮಾಸಿ ಹೋಗಿದೆ. ನಿನ್ನನ್ನು ಮರೆಯಲು ಸಾಧ್ಯವೇ ಇಲ್ಲ ಅಂತ ಹೃದಯ ಕೂಗಿ ಕೂಗಿ ಹೇಳುತ್ತಿದೆ. ನಿನ್ನ ಪ್ರೀತಿಯಂತೂ ನನ್ನ ಹಣೆಯಲ್ಲಿ ಬರೆದಿಲ್ಲ. ಮತ್ತೇನು ಮಾಡಲಿ ಹೇಳು, ನಿನ್ನ ಸ್ನೇಹಿತಳಾಗೇ ಉಳಿದುಬಿಡುತ್ತೇನೆ.
ಅನ್ನಪೂರ್ಣ ವೈ.ಬಿ.ಕೆ.