ನ್ಯೂಯಾರ್ಕ್: ಭಾರತ ಮೂಲದ ಅಮೆರಿಕ ನಿವಾಸಿ, ಲೇಖಕ ಸಲ್ಮಾನ್ ರಶ್ದಿಯನ್ನು ವೇದಿಕೆ ಮೇಲೆಯೇ ಚೂರಿಯಿಂದ ಇರಿದು ಹತ್ಯೆಗೈಯುವ ಪ್ರಯತ್ನ ನ್ಯೂಯಾರ್ಕ್ ನಲ್ಲಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿರುವ ರಶ್ದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏತನ್ಮಧ್ಯೆ ರಶ್ದಿ ಮೇಲಿನ ದಾಳಿಗೆ ಅವರು ಸುಮಾರು 33 ವರ್ಷಗಳ ಹಿಂದೆ ಬರೆದ ‘ದಿ ಸೆಟಾನಿಕ್ ವರ್ಸಸ್’ ಎಂಬ ಪುಸ್ತಕವೇ ಕಾರಣ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
1989ರಲ್ಲಿ ಪ್ರಕಟವಾಗಿದ್ದ ದ ಸೆಟಾನಿಕ್ ವರ್ಸಸ್ ಕಾದಂಬರಿಯಲ್ಲಿ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಲಾಗಿದೆ ಎಂದು ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಸಲ್ಮಾನ್ ರಶ್ದಿ ತಲೆ ಕತ್ತರಿಸುವಂತೆ ಇರಾನ್ ಮೂಲಭೂತವಾದಿ ಮೌಲ್ವಿ ಅಯಾತ್ ಉಲ್ಲಾ ಖಾನ್ ಖೋಮೆನಿ ಫತ್ವಾ ಹೊರಡಿಸಿದ್ದರು.
ಇದೊಂದು ಧರ್ಮನಿಂದನೆಯ ಪುಸ್ತಕ ಎಂದು ಘೋಷಿಸಿದ್ದ ಇರಾನ್ ಕಾದಂಬರಿ ಮಾರಾಟವನ್ನು ನಿಷೇಧಿಸಿತ್ತು. ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಕೂಡಾ ದಿ ಸೆಟಾನಿಕ್ ವರ್ಸಸ್ ಕಾದಂಬರಿಯನ್ನು ನಿಷೇಧಿಸಿದ್ದರು. ಬ್ರಿಟನ್ ನ ಹಲವು ನಗರಗಳಲ್ಲಿ ದಿ ಸೆಟಾನಿಕ್ ವರ್ಸಸ್ ಕಾದಂಬರಿಯನ್ನು ಸುಟ್ಟು ಹಾಕಲಾಗಿತ್ತು ಎಂದು ವರದಿ ವಿವರಿಸಿದೆ.
1989ರ ಫೆಬ್ರವರಿ 12ರಂದು ಇಸ್ಲಾಮಾಬಾದ್ ನಲ್ಲಿ ರಶ್ದಿ ಪುಸ್ತಕದ ವಿರುದ್ಧ ಹತ್ತು ಸಾವಿರ ಮಂದಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮೆರಿಕನ್ ಕಲ್ಚರಲ್ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ಅಮೆರಿಕದ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು ಎಂದು ವರದಿ ಹೇಳಿದೆ.
ಧರ್ಮನಿಂದನೆಯ ಕಾದಂಬರಿಯ ದ್ವೇಷ ಇನ್ನೂ ಜೀವಂತವಾಗಿದೆ ಎಂಬುದು ಸಲ್ಮಾನ್ ರಶ್ದಿಯ ಮೇಲೆ ದಾಳಿ ನಡೆದಿರುವುದೇ ಸಾಕ್ಷಿ ಎಂದು ವರದಿ ತಿಳಿಸಿದೆ. ರಶ್ದಿ ಮೇಲಿನ ದಾಳಿಯನ್ನು ಲೇಖಕರು ತೀವ್ರವಾಗಿ ಖಂಡಿಸಿದ್ದು, ಇದೊಂದು ಹೇಡಿತನದ ಕೃತ್ಯ ಎಂದು ತಿಳಿಸಿದ್ದಾರೆ.
ಸಲ್ಮಾನ್ ರಶ್ದಿ ನಾಲ್ಕು ವಿವಾಹವಾಗಿದ್ದರು. ಪದ್ಮ ಲಕ್ಷ್ಮೀ, ಮೇರಿಯನ್ನೇ ವಿಗ್ಗಿನ್ಸ್, ಎಲಿಜಬೆತ್ ವೆಸ್ಟ್ ಮತ್ತು ಕ್ಲಾರಿಸ್ಸಾ ಲುವಾರ್ಡ್ ಅವರನ್ನು ವಿವಾಹವಾಗಿದ್ದರು. ಆದರೆ ನಾಲ್ವರಿಂದಲೂ ವಿಚ್ಛೇದನ ಹೊಂದಿರುವ ರಶ್ದಿ ಒಬ್ಬಂಟಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ದಾಳಿಕೋರ 24ವರ್ಷದ ಹಾರ್ಡಿ ಬಂಧನ:
ಸಲ್ಮಾನ್ ರಶ್ದಿಯ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು 24ವರ್ಷದ ಹಾರ್ಡಿ ಎಂದು ನ್ಯೂಯಾರ್ಕ್ ಪೊಲೀಸರು ಗುರುತಿಸಿದ್ದಾರೆ. ಎಫ್ ಬಿಐ ನೆರವಿನೊಂದಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.