ಹುಬ್ಬಳ್ಳಿ: ಸಾಣೇಹಳ್ಳಿ ಶಿವಕುಮಾರ ಕಲಾಸಂಘ “ಶಿವಸಂಚಾರ’ ನಾಟಕೋತ್ಸವದ ಉದ್ಘಾಟನೆ ನಗರದ ಆದರ್ಶನಗರದ ಕನ್ನಡ ಭವನದಲ್ಲಿ ಗುರುವಾರ ನಡೆಯಿತು. ಡಾ| ಪಾಂಡುರಂಗ ಪಾಟೀಲ ಮಾತನಾಡಿ, ನಾಟಕದ ಮೂಲಕ ಸಮಾಜ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಸಾಣೇಹಳ್ಳಿ ಸ್ವಾಮಿಗಳು.
ಅವರ ತಂಡದವರು ಪ್ರತಿ ವರ್ಷ ವಿಭಿನ್ನ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಹವ್ಯಾಸಿ ರಂಗಭೂಮಿಯ ಉತ್ತೇಜನಕ್ಕೆ ಸಾಣೇಹಳ್ಳಿ ಮಠದ ಕೊಡುಗೆ ಅಪಾರ ಎಂದರು. ಅನೇಕ ಕಲಾವಿದರು, ರಂಗಕರ್ಮಿಗಳನ್ನು ರೂಪಿಸಿದ ಕೀರ್ತಿ ಶಿವಸಂಚಾರಕ್ಕಿದೆ. ನಾಟಕಗಳನ್ನು ಆಯೋಜಿಸುವುದು ಕಡುಕಷ್ಟವಾಗಿದೆ.
ಇಂಥ ಸಂದರ್ಭದಲ್ಲಿ ನಿರಂತರ ನಾಟಕ ಪ್ರದರ್ಶನಗಳನ್ನು ನೀಡುತ್ತ ರಂಗಭೂಮಿಯನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ. ನಾಟಕ ಪ್ರದರ್ಶನಕ್ಕೆ ಕಡಿಮೆ ದರದಲ್ಲಿ ಕನ್ನಡ ಭವನ ನೀಡುವ ಕುರಿತು ಮಹಾಪೌರರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ನಾವು ನಿತ್ಯ ಜೀವನದಲ್ಲಿ ಹಲವು ಬಾರಿ ನಾಟಕ ಮಾಡುತ್ತೇವೆ. ಆದರೆ ನಿಜವಾಗಿಯೂ ಯಾವುದು ನಾಟಕ ಎಂಬುದನ್ನು ತಿಳಿಯಲು ನಾಟಕ ನೋಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಸಾಣೆಹಳ್ಳಿ ಮಠ ಪ್ರತಿ ವರ್ಷ ಮೂರು ವಿಶಿಷ್ಟ ನಾಟಕಗಳನ್ನು ಪ್ರದರ್ಶಿಸುತ್ತಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕಗಳನ್ನು ವೀಕ್ಷಿಸಬೇಕು ಎಂದು ಹೇಳಿದರು. ಆರ್.ಟಿ. ಮಜ್ಜಗಿ ಮಾತನಾಡಿ, ನಾಟಕಗಳ ಆಯೋಜನೆಗೆ ಕನ್ನಡ ಭವನವನ್ನು ಉಚಿತವಾಗಿ ನೀಡಲು ಮಹಾನಗರ ಪಾಲಿಕೆ ಮುಂದಾಗಬೇಕು.
ರಂಗಭೂಮಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದರು. ನಂತರ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅನುವಾದಿಸಿದ, ಮಾಲತೇಶ ಬಡಿಗೇರ ನಿರ್ದೇಶನದ “ಚೋರ ಚರಣದಾಸ’ ನಾಟಕದ ಪ್ರದರ್ಶನ ನಡೆಯಿತು. ಜ. 19ರಂದು “ಮೋಳಿಗೆ ಮಾರಯ್ಯ’ ಹಾಗೂ ಜ. 20ರಂದು “ಸಾಯೋ ಆಟ’ ನಾಟಕಗಳ ಪ್ರದರ್ಶನ ನಡೆಯಲಿದೆ.