“ಸ್ವಲ್ಪ ಕಿಟಕಿ ತೆಗೀತೀರಾ …’ ಅವಳು ಕೇಳುತ್ತಿದ್ದಂತೆಯೇ, ಪಕ್ಕದಲ್ಲೇ ಕುಳಿತಿದ್ದ ಅವನು ಕಿಟಕಿ ತೆಗೆದುಕೊಡುತ್ತಾನೆ. ಥ್ಯಾಂಕ್ಸ್ ಹೇಳುತ್ತಾಳೆ ಅವಳು. ಕ್ರಮೇಣ ಇಬ್ಬರ ನಡುವೆ ಪರಿಚಿಯ ವಿನಮಯವಾಗುತ್ತದೆ. ನಾಲ್ಕಾರು ದಿನಗಳು ಅದೇ ಬಸ್ಸಿನಲ್ಲಿ ಒಟ್ಟಿಗೇ ಪ್ರಯಾಣ ಮಾಡಿದ ಮೇಲೆ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಆ ಸ್ನೇಹ ಪ್ರೀತಿಗೆ ತಿರುಗಬೇಕು ಎನ್ನುವಷ್ಟರಲ್ಲಿ, ಅವನಿಗೆ ಒಂದು ರಹಸ್ಯ ತಿಳಿಯುತ್ತದೆ.
ಅದೇನೆಂದರೆ, ಅವಳು ಕುರುಡಿ ಎಂದು. ಅವನಿಗದು ದೊಡ್ಡ ಮಟ್ಟದ ಆಘಾತ. ಏಕೆಂದರೆ, ಅವನೂ ಒಬ್ಬ ಕುರುಡ. ತನಗೆ ಇಲ್ಲದ ದೃಷ್ಟಿಯನ್ನು, ತನ್ನ ಸಂಗಾತಿಯ ಕಣ್ಣಿನಲ್ಲಿ ನೋಡಬೇಕು ಎಂಬುದು ಅವನ ಆಸೆ. ಆದರೆ, ಯಾವಾಗ ತಾನು ಇಷ್ಟಪಟ್ಟವಳಿಗೂ ದೃಷ್ಟಿ ಇಲ್ಲ ಎಂದು ಗೊತ್ತಾಗುತ್ತದೋ, ಅವನ ಎದೆಯೊಡೆಯುತ್ತದೆ …ಅಂಧರ ಪ್ರೇಮಕಥೆಗಳು ಕನ್ನಡಕ್ಕೆ ಹೊಸದೇನಲ್ಲ. ಕಳೆದ ವರ್ಷವಷ್ಟೇ “ರಾಗ’ ಎಂಬ ಚಿತ್ರ ಬಂದಿತ್ತು.
“ಕೃಷ್ಣ-ತುಳಸಿ’ ಸಹ ಅದೇ ಸಾಲಿಗೆ ಸೇರುವ ಚಿತ್ರವಾದರೂ, ಇದು ಮಿಕ್ಕ ಚಿತ್ರಗಳಿಗೆ ಹೋಲಿಸುವುದು ತಪ್ಪು. ಅದರಲ್ಲೂ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿರುವವರು, ಇಂಥದ್ದೊಂದು ಚಿತ್ರ ಮಾಡಬಹುದು ಎಂದು ನಿರೀಕ್ಷಿಸುವುದು ಇನ್ನೂ ಕಷ್ಟ. ಆದರೆ, ಎಲ್ಲರ ನಿರೀಕ್ಷೆಗಳನ್ನೂ ಸುಳ್ಳು ಮಾಡಿ, ಮೊದಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ ಸುಖೇಶ್ ನಾಯಕ್. ಒಂದು ಸರಳ ಪ್ರೇಮಕಥೆಯನ್ನು, ಅಷ್ಟೇ ಸರಳವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಮಡಿಕೇರಿಯ ಅಂಧ ಯುವಕನಿಗೂ, ಮೈಸೂರಿನ ಅಂಧ ಯುವತಿಗೂ ಲವ್ ಆಗುತ್ತದೆ. ಆದರೆ, ಇಬ್ಬರಿಗೂ ತಾವು ಪ್ರೀತಿಸುವವರಿಗೆ ಕಣ್ಣಿಲ್ಲ ಎಂಬುದು ಗೊತ್ತಿರುವುದಿಲ್ಲ. ಹಾಗೆಯೇ ಇಬ್ಬರೂ ತಾವು ಪ್ರೀತಿಸುವವರ ಕಣ್ಣಲ್ಲಿ ಜಗತ್ತನ್ನು ನೋಡಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಹೀಗಿರುವಾಗ ಇಬ್ಬರಿಗೂ ತಾವು ಪ್ರೀತಿಸುವವರಿಗೆ ಕಣ್ಣಿಲ್ಲ ಎಂದು ಗೊತ್ತಾದರೆ? ಆ ಪ್ರೇಮಕಥೆಯ ಎಂಡಿಂಗ್ ಹೇಗಿರಬಹುದು ಮತ್ತು ಏನಾಗಬಹುದು ಎಂದು ಊಹಿಸಿ?
ಊಹಿಸುವುದಕ್ಕಿಂತ ಒಮ್ಮೆ ಚಿತ್ರ ನೋಡುವುದು ಬೆಸ್ಟು. ಏಕೆಂದರೆ, ಇಲ್ಲೊಂದು ನವಿರಾದ ಪ್ರೇಮಕಥೆಯಿದೆ, ರಮ್ಯವಾದ ಮೈಸೂರಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದೊಳ್ಳೆಯ ಸಂದೇಶವಿದೆ. ಇವೆಲ್ಲವನ್ನೂ ಸೇರಿಸಿ ಚಿತ್ರ ಮಾಡಿದ್ದಾರೆ ಸುಖೇಶ್. “ಕೃಷ್ಣ-ತುಳಸಿ’ ಒಂದೊಳ್ಳೆಯ ಚಿತ್ರವಾಗಲಿಕ್ಕೆ ಹಲವರ ಶ್ರಮವಿದೆ. ಇಡೀ ಚಿತ್ರವನ್ನು ಆವರಿಸಿಕೊಳ್ಳುವುದು ಸಂಚಾರಿ ವಿಜಯ್ ಮತ್ತು ಮೇಘಶ್ರೀ.
ಇಬ್ಬರೂ ತಮ್ಮ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಸಲ್ಲಿಸಿದ್ದಾರೆ. ಮಿಕ್ಕಂತೆ ರಮೇಶ್ ಭಟ್, ಪದ್ಮಜಾ ರಾವ್, ಕುರಿ ಪ್ರತಾಪ್, ತಬಲಾ ನಾಣಿ, ಗುರುರಾಜ್ ಹೊಸಕೋಟೆ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮೊದಲಾರ್ಧದ ಪೂರಾ ನಾಯಕಿ ಅಂಧೆ ಎಂದು ಗೊತ್ತಾಗದಂತೆ, ಆಕೆಯನ್ನು ವಿವಿಧ ಆ್ಯಂಗಲ್‌ಗಳಲ್ಲಿ ಚಿತ್ರಿಸಿರುವ ಛಾಯಾಗ್ರಾಹಕ ನವೀನ್ ಅಕ್ಷಿ ಚಿತ್ರದ ಇನ್ನೊಂದು ಹೈಲೈಟ್.
ಕಿರಣ್ ರವೀಂದ್ರನಾಥ್ ಅವರ ಸಂಗೀತ, ದೀಪು ಕುಮಾರ್ ಅವರ ಸಂಕಲನ ಎಲ್ಲವೂ ಹದವಾಗಿದೆ. “ಭರವಸೆ ಇರಬೇಕು. ಆಗಲೇ ವಿಸ್ಮಯ ಆಗೋದು …’ ಎಂಬ ಸಂಭಾಷಣೆ ಆಗಾಗ ಬರುತ್ತದೆ. ಯಾವುದೇ ನಿರೀಕ್ಷೆ ಇಲ್ಲದೆ, ಭರವಸೆ ಇಟ್ಟು ಚಿತ್ರ ನೋಡಲು ಹೋದರೆ, ವಿಸ್ಮಯವಾಗೋದು ಖಂಡಿತಾ.
ಚಿತ್ರ: ಕೃಷ್ಣ-ತುಳಸಿ
ನಿರ್ಮಾಣ: ಎಂ. ನಾರಾಯಣಸ್ವಾಮಿ
ನಿರ್ದೇಶನ: ಸುಖೇಶ್ ನಾಯಕ್
ತಾರಾಗಣ: ಸಂಚಾರಿ ವಿಜಯ್, ಮೇಘಶ್ರೀ, ರಮೇಶ್ ಭಟ್, ಪದ್ಮಜಾ ರಾವ್, ಕುರಿ ಪ್ರತಾಪ್, ತಬಲಾ ನಾಣಿ, ಗುರುರಾಜ್ ಹೊಸಕೋಟೆ ಮುಂತಾದವರು
* ಚೇತನ್ ನಾಡಿಗೇರ್