Advertisement

ಪ್ರತಿ ಮನೆಯಲ್ಲೂ ಕೇಸರಿ ಬಾವುಟ ಹಾರಿಸಿ

07:33 AM Feb 15, 2019 | |

ನಂಜನಗೂಡು: ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಕಾರ್ಯಕರ್ತರು ಇಂದಿನಿಂದಲೇ ಸನ್ನದ್ಧರಾಗಬೇಕು. ನಗರದ ಪ್ರತಿ ಮನೆಯಲ್ಲೂ ಕೇಸರಿ ಬಾವುಟ ಹಾರಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ತಲುಪಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಮನವಿ ಮಾಡಿದರು.

Advertisement

ನಗರಸಭಾ ವ್ಯಾಪ್ತಿಯ ಆರ್‌.ಪಿ. ರಸ್ತೆಯ ನಿವಾಸಿ, ಬೂತ್‌ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಅವರ ನಿವಾಸದಲ್ಲಿ ಬುಧುವಾರ ಪಕ್ಷದ ಧ್ವಜಾರೋಹಣ ನಡೆಸಿ “ಮನೆ ಮನೆ ಬಿಜೆಪಿ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನತೆಗೆ ತಿಳಿಸಿ: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಐದು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನಡೆಸಿ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ.  ಆಯುಷ್ಮಾನಭವ ಭಾರತ, ಉಜ್ವಲ್‌, ಸ್ವತ್ಛ ಭಾರತ, ಕೌಶಲ್ಯ ಭಾರತ, ಮೇಕ್‌ ಇನ್‌ ಇಂಡಿಯಾ ಮತ್ತಿತರ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯುತ್ತಿದೆ. ಇವುಗಳನ್ನು ಮತದಾರರಿಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಕುಟುಂಬ ರಾಜಕಾರಣ ದೂರವಿಡಿ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಕುಟುಂಬ ರಾಜಕಾರಣವನ್ನು ದೂರವಿಡಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯನಿರ್ವಹಿಸಿ, ಬಿಜೆಪಿ ಮತಗಳನ್ನು ಮತ್ತಷ್ಟು ಭದ್ರಗೊಳಿಸಬೇಕು ಎಂದು ಕೋರಿದರು.

ಇಂದಿರಾ ಗಾಂಧಿ ಕಾಲದಲ್ಲಿ ಆರಂಭಗೊಂಡ ಗರೀಬ್‌ ಹಠಾವೋ ಇಂದಿಗೂ ಕಾಂಗ್ರೆಸ್‌ ಸಂಸ್ಕೃತಿಯೇ ಆಗಿದೆ. ಆದರೆ, ಅದರಲ್ಲಿ ಬಡತನ ತೊಲಗುವ ಬದಲು ಬಡವರ ಸಾವು ಹೆಚ್ಚಾಯಿತು. ಈಗಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅದೇ ಆಗುತ್ತದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ. ಕೆಲವರಿಗೆ ಮಾತ್ರ ಅಧಿಕಾರ ನಡೆಸಲು ಅಧಿಕಾರವಿದೆ.

Advertisement

ಹೀಗಾಗಿ ಈ ಸಂಸ್ಕೃತಿಯನ್ನು ತೊಡೆದುಹಾಕಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿದರು. ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಸಂಚಾಲಕ ಕುಂಬ್ರಳ್ಳಿ ಸುಬ್ಬಣ್ಣ, ಪಕ್ಷ ಸಂಘಟನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಭಾರತಿ ಶಂಕರ್‌, ಸಿ. ರಮೇಶ್‌, ಎಸ್‌.ಮಹದೇವಯ್ಯ, ಮುಖಂಡರಾದ ಯು.ಎನ್‌. ಪದ್ಮನಾಭ್‌ ರಾವ್‌, ರಾಜೇಂದ್ರ, ಸುರೇಶ ಬಾಬು,

ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ಜಿಪಂ ಮಾಜಿ ಅಧ್ಯಕ್ಷ ಕಾಪೂ ಸಿದ್ಧವೀರಪ್ಪ, ಹಾಲಿ ಸದಸ್ಯ ಗುರುಸ್ವಾಮಿ, ನಗರಸಭೆ ಸದಸ್ಯ ಮಹದೇವಸ್ವಾಮಿ, ಬಸವರಾಜು, ನಾರಾಯಣ ರೆಡ್ಡಿ, ಶ್ರೀನಿವಾಸ ರೆಡ್ಡಿ, ಮಹೇಶ ಅತ್ತಿಖಾನೆ, ಬೊಮ್ಮಾಯಿ ಬುತೇಲೂ, ಕೃಷ್ಣಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next