Advertisement

ಹೋರಾಟಗಾರರ ತ್ಯಾಗ ಅವಿಸ್ಮರಣೀಯ

06:15 PM Aug 16, 2022 | Team Udayavani |

ಚಿಕ್ಕಮಗಳೂರು: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಹೆಮ್ಮೆ ಮತ್ತು ಅಭಿಮಾನದಿಂದ ಆಚರಿಸುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರ ಮತ್ತು ತ್ಯಾಗ, ಬಲಿದಾನ ಅವಿಸ್ಮರಣೀಯ ಎಂದು ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ತಿಳಿಸಿದರು.

Advertisement

ಸೋಮವಾರ ನಗರದ ಸುಭಾಷ್‌ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿ ಅವರು ಮಾತನಾಡಿದರು.

ಎರಡು ನೂರು ವರ್ಷಗಳ ಕಾಲ ದಾಸ್ಯದ ಸಂಕೋಲೆಯಲ್ಲಿ ಸಿಲುಕಿ ದೌರ್ಜನ್ಯದಿಂದ ನಲುಗಿ ಹೋಗಿದ್ದ ನಮ್ಮ ಪೂರ್ವಜರು ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ಪಡೆದುಕೊಳ್ಳಲು ತಪ್ಪಸ್ಸು ಮಾಡಿ ತಮ್ಮ ಜೀವನದ ಸಕಲವನ್ನೂ ಧಾರೆ ಎರೆದು ದೇಶದ ಸ್ವಾತಂತ್ರ್ಯದ ಅಚಲ ಹಂಬಲ ದೊಂದಿಗೆ ಹಗಲಿರುಳು ಹೋರಾಡಿದ್ದು ಅವರ ಹೋರಾಟ, ತ್ಯಾಗ- ಬಲಿದಾನವನ್ನು ಸ್ಮರಿಸಿಕೊಳ್ಳುವ ಸುಸಂದರ್ಭವಾಗಿದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯೂ ಬಹುಮುಖ್ಯ ಪಾತ್ರ ವಹಿಸಿದ್ದು, ಜಿಲ್ಲೆಯವರಾದ ಹೊಸಕೊಪ್ಪ ಕೃಷ್ಣರಾಯರು, ಅಣ್ಣಪ್ಪಶೆಟ್ಟಿ, ಆಲ್ದೂರು ಬಸಪ್ಪ ಶೆಟ್ಟಿ, ನರಸಿಂಹರಾಜಪುರ ಕೋದಂಡಭಟ್ಟರು, ಮಾಕೋನಹಳ್ಳಿ ಹುಚ್ಚೇಗೌಡರು, ಭಾಗಮನಿ ದೇವೇಗೌಡರು, ಬಿ.ಎಸ್‌. ಕೃಷ್ಣೇಗೌಡರು, ಕೆ.ಆರ್‌ .ನಾರಾಯಣ ನಾಯಕ್‌, ತರೀಕೆರೆ ಹಂಚಿ ಶಿವಣ್ಣ, ಅಜ್ಜಂಪುರ ಸುಬ್ರಮಣ್ಯ ಶೆಟ್ಟಿ, ಸತ್ಯನಾರಾಯಣ ಶೆಟ್ಟಿ, ಎಳ್ಳಂಬಳಸೆ ವೈ.ಎಂ. ಚಂದ್ರಶೇಖರಯ್ಯ ಸೇರಿದಂತೆ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹೋರಾಡಿದ್ದಾರೆ. ಇವರ ತ್ಯಾಗವನ್ನು ನಾವೆಲ್ಲರೂ ಈ ಅಮೃತ ಮಹೋತ್ಸವದಲ್ಲಿ ಸ್ಮರಿಸಿಕೊಳ್ಳಬೇಕಿದೆ ಎಂದರು.

ರಾಜ್ಯ ಸರ್ಕಾರ ರಾಜ್ಯದ 75 ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ ಸ್ಥಳಗಳನ್ನು ಗುರುತಿಸಿದ್ದು, ಅದರಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಾಂಧೀಜಿ ನೆನಪಿನಂಗಳ ಮತ್ತು ಅಜ್ಜಂಪುರ ಸೇರಿದ್ದು ಇದರ ಜೊತೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ನೆನಪಿಗೆ ತರುವ ಅನೇಕ ಸ್ಥಳಗಳು ಜಿಲ್ಲೆಯಲ್ಲಿವೆ ಎಂದರು.

Advertisement

ಸಮಾರಂಭದಲ್ಲಿ ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್‌, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಉಮಾ ಪ್ರಶಾಂತ್‌, ಅಪರ ಜಿಲ್ಲಾ ಧಿಕಾರಿ ಬಿ.ಆರ್‌.ರೂಪಾ, ಭದ್ರಾ ಹುಲಿ ಸಂರಕ್ಷಣಾಧಿಕಾರಿ ಪ್ರಭಾಕರನ್‌, ನಗರಸಭೆ ಸದಸ್ಯರು ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next