ವರದಿ: ಮಲ್ಲಿಕಾರ್ಜುನ ಕಲಕೇರಿ
ಗುಳೇದಗುಡ್ಡ: ಕೊರೊನಾದಿಂದ ಅತಂತ್ರರಾಗಿರುವ ಕಲಾವಿದರಿಗೆ ಆಸರೆಯಾಗಲೆಂದು ಸರಕಾರ 3 ಸಾವಿರ ರೂ. ಸಹಾಯಧನ ನೀಡಲು ಮುಂದಾಗಿದೆಯೇನೋ ನಿಜ ಆದರೆ ಸರಕಾರದ ನಿಯಮಗಳೇ ತೊಡಕಾಗಿದ್ದು, ಸರಕಾರದ ಪ್ಯಾಕೇಜ್ ಸಿಗುವುದೇ ಕಷ್ಟವಾಗಿದೆ.
ಸಹಾಯಧನ ಪಡೆಯಲು ಕಡ್ಡಾಯವಾಗಿ ಆಧಾರ್‌ಗೆ ಮೊಬೈಲ್ ಜೋಡಣೆಯಾಗಿರಬೇಕು. ಜಿಲ್ಲೆಯಲ್ಲಿ ಅದೆಷ್ಟೋ ಕಲಾವಿದರ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲ. ಇದರಿಂದ ಕಲಾವಿದರಿಗೆ ಸರಕಾರದ ಸಹಾಯಧನ ಕೈತಪ್ಪುವ ಸಾಧ್ಯತೆಗಳು ದಟ್ಟವಾಗಿದೆ. ಸರಕಾರ ಕಲಾವಿದರ ಮಾಸಾಶನ ಪಡೆಯಲು ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಿದೆ. ಆದರೆ ಈ ಅರ್ಜಿ ಸಲ್ಲಿಸುವಾಗ ಆಧಾರ್‌ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಓಟಿಪಿ ಹೋಗುತ್ತದೆ. ಆ ನಂತರವೇ ಅರ್ಜಿ ಸ್ವೀಕೃತವಾಗುತ್ತದೆ. ಅನೇಕ ಕಲಾವಿದರ ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಇಲ್ಲದೇ ಇರುವುದರಿಂದ ನಾಟಕ ಪ್ರದರ್ಶನಗಳು ಇಲ್ಲದೇ ಕೈ ಕೂಡ ಬರಿದಾಗಿದ್ದು, ಸರಕಾರದ ಈ ನಿಯಮ ಕಲಾವಿದರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಕಲಾಗ್ರಾಮ ಹಂಸನೂರ: ಹಂಸನೂರು ಗ್ರಾಮ ಕಲಾವಿದರಿಗೆ ಹೆಸರಾದ ಗ್ರಾಮ. ವೃತ್ತಿ-ಹವ್ಯಾಸಿ ರಂಗಭೂಮಿ ಕಲಾವಿದರು ಇಲ್ಲಿದ್ದು, ರಂಗಭೂಮಿ ಕಲೆಯನ್ನೆ ಬದುಕಾಗಿಸಿಕೊಂಡ ಅನೇಕ ಕುಟುಂಬಗಳಿವೆ. ಈ ಎಲ್ಲ ಕುಟುಂಬಗಳು ಲಾಕ್ ಡೌನ್‌ನಿಂದ ನಲುಗಿ ಹೋಗಿವೆ. ಇಲ್ಲಿರುವ ಅನೇಕ ಕಲಾವಿದರ ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಇಲ್ಲ. ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಜೋಡಿಸಬೇಕಿದೆ. ಆದರೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನವಾಗಿದ್ದರಿಂದ ಕಲಾವಿದರು ಸರ್ಕಾರ ಯೋಜನೆ ಲಾಭ ಪಡೆಯಲು ಕಷ್ಟಸಾಧ್ಯವಾಗಿದೆ. ಆಧಾರ್‌ಗೆ ಮೊಬೈಲ್ ಸಂಖ್ಯೆ ಇಲ್ಲದೇ ಇರುವುದರಿಂದ ಸರಕಾರದ ಸಹಾಯಧನ ಪಡೆಯಲು ಕಲಾವಿದರು ವಂಚಿತರಾಗಿದ್ದು, ಗ್ರಾಮಕ್ಕೆ ಅಧಿ ಕಾರಿಗಳು ಬಂದು ಕಲಾವಿದರ ಮಾಹಿತಿ ಪಡೆದು ಆರ್ಥಿಕ ಸಹಾಯ ನೀಡಬೇಕು. ಕಲಾವಿದರಿಗೆ ಸರಕಾರ ನೀಡುವ ಕೇವಲ 3 ಸಾವಿರ ರೂಪಾಯಿ ಸಾಲಲ್ಲ. ಅದನ್ನು ಹೆಚ್ಚಿಸಬೇಕು.
ಕಾರ್ಮಿಕರಿಗೆ ನೀಡಿರುವಂತೆ ಕಲಾವಿದರಿಗೆ ಕಲಾವಿದರ ಗುರುತಿನ ಚೀಟಿ ನೀಡಬೇಕೆಂದು ಕಲಾವಿದರಾದ ಗೀತಾ ಚಿಂತಾಕಲ್ಲ, ಮಂಜುಳಾ ಚಿಂತಾಕಲ್ಲ, ಇಂದಿರಾ ಚಿಮ್ಮಲ, ನಾಗರತ್ನ ಜಮಖಂಡಿ, ರೇಖಾ ಕಮಲ, ಜಯಶ್ರೀ ಪೂಜಾರ, ಶಾರದಾ ಕಮಲ, ಶಾಮಲಾ ಜಮಖಂಡಿ, ಪ್ರಿಯಾ ಚಿಮ್ಮಲ, ರೇಣುಕಾ ಚಿಮ್ಮಲ, ಶೋಭಾ ಚಿಮ್ಮಲ, ಸೀತಾ ಚಿಮ್ಮಲ, ಶೃತಿ ಜಮಖಂಡಿ, ಮಧುರಾ ಚಿಮ್ಮಲ, ಆರತಿ ಚಿಮ್ಮಲ, ಶಾಂತವ್ವ ಜಮಖಂಡಿ, ಭಾರತಿ ಚಿಮ್ಮಲ, ಬಂಗಾರೆವ್ವ ಚಿಮ್ಮಲ್, ಶಾಂತವ್ವ ಚಿಮ್ಮಲ, ಪರಶುರಾಮ ಹುದ್ದಾರ, ಮನೋಹರ ಚಿಮ್ಮಲ ಆಗ್ರಹಿಸಿದ್ದಾರೆ.