Advertisement

ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬದಲಾಗಲಿ ನಿಯಮ

10:32 PM Mar 25, 2019 | mahesh |

ಲೋಕಸಭೆ ಚುನಾವಣೆಯ ಕಾವು ಏರುತ್ತಿರುವಂತೆಯೇ ಕೆಲವು ನಾಯಕರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿರುವ ಸುದ್ದಿಗಳು ಹರಿದಾಡುತ್ತಿವೆ. ಮುಖ್ಯವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತನ್ನ ಪರಂಪರಾಗತ ಅಮೇಠಿಯ ಜತೆಗೆ ದಕ್ಷಿಣ ಭಾರತದ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳಿವೆ. ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಇದೇ ವೇಳೆ ಕರ್ನಾಟಕದ ಕಾಂಗ್ರೆಸಿಗರೂ ಅವರನ್ನು ರಾಜ್ಯದಿಂದ ಲೋಕಸಭೆಗೆ ಆರಿಸಿ ಕಳುಹಿಸಲು ಉತ್ಸುಕರಾಗಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿಯವರೂ ಈ ಸಲ ವಾರಣಾಸಿಯ ಜತೆಗೆ ಬೆಂಗಳೂರಿನ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಊಹಾಪೋಹಗಳೂ ಇವೆ. ಕೆಲ ದಿನಗಳ ಹಿಂದಿನ ತನಕ ದೇವೇಗೌಡರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದರು. ಆದರೆ ಈಗ ಅವರು ಈ ಸಾಧ್ಯತೆಯನ್ನು ಕೈಬಿಟ್ಟಿದ್ದಾರೆ.

Advertisement

ಜನಪ್ರತಿನಿಧಿ ಕಾಯಿದೆ ಗರಿಷ್ಠ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಿದೆ. ಒಂದು ಕ್ಷೇತ್ರದಲ್ಲಿ ಗೆಲ್ಲುವ ಭರವಸೆ ಇಲ್ಲದಿರುವಾಗ ನಾಯಕರು ಪರ್ಯಾಯವಾಗಿ ಇನ್ನೊಂದು ಕ್ಷೇತ್ರವನ್ನು ಹುಡುಕಿಕೊಳ್ಳುವುದು ಹೊಸದೇನಲ್ಲ. ಇದು ಒಂದು ಕಾರಣವಾದರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆದ್ದು ಬರಬಲ್ಲೆವು ಎಂದು ತೋರಿಸಿಕೊಡುವುದು ಇನ್ನೊಂದು ಉದ್ದೇಶ. ನನ್ನ ಪ್ರಭಾವ ಒಂದು ಕ್ಷೇತ್ರಕ್ಕೆ ಅಥವಾ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಲು ರಾಷ್ಟ್ರೀಯ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ಸ್ಪರ್ಧಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಪ್ರಭಾವಿ ನಾಯಕರು ಬೇರೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅವರ ವರ್ಚಸ್ಸಿನಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರವನ್ನು ಪಕ್ಷದ ವರಿಷ್ಠರು ಹಾಕುತ್ತಾರೆ. 2014ರಲ್ಲಿ ಮೋದಿ ವಡೋದರದ ಜತೆಗೆ ವಾರಾಣಸಿಯಲ್ಲಿ ಸ್ಪರ್ಧಿಸಿರುವುದರ ಹಿಂದೆ ಈ ಲೆಕ್ಕಾಚಾರ ಇತ್ತು ಮತ್ತು ಸರಿಯಾಗಿತ್ತು. ಪಕ್ಷಗಳಿಗೇನೋ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವುದರಿಂದ ಲಾಭವಿರಬಹುದು. ಆದರೆ ಇದರಿಂದ ಜನರಿಗಾಗುವ ಲಾಭ ಏನು? ಹೀಗೆ ಎರಡೆರಡು ಕ್ಷೇತ್ರಗಳಿಗೆ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಒಂದು ಕ್ಷೇತ್ರವನ್ನು 10 ದಿನಗಳ ಒಳಗಾಗಿ ತೆರವುಗೊಳಿಸಬೇಕು. ಈ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಮರು ಚುನಾವಣೆಯಾಗಬೇಕು. ಇದಕ್ಕಾಗಿ ಚುನಾವಣಾ ಆಯೋಗ ಮತ್ತೆ ಅಧಿಸೂಚನೆ ಹೊರಡಿಸುವುದು, ಅಭ್ಯರ್ಥಿಗಳ ಆಯ್ಕೆ, ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ಎಂದೆಲ್ಲ ಇಡೀ ಚುನಾವಣ ಪ್ರಕ್ರಿಯೆ ನಡೆಯಬೇಕು. ನಾಯಕರ ತೆವಲಿಗಾಗಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಈ ಪದ್ಧತಿ ಬೇಕೆ ಎಂದು ಕೇಳಿದರೆ ಬೇಡ ಎನ್ನುವ ಉತ್ತರವೇ ಸಿಗುತ್ತದೆ. ಜನರಿಗಾಗಲಿ, ಚುನಾವಣಾ ಆಯೋಗಕ್ಕಾಗಲಿ, ಕಾನೂನು ಆಯೋಗಕ್ಕಾಗಲಿ ಈ ರೀತಿ ಒಬ್ಬ ಅಭ್ಯರ್ಥಿ ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪದ್ಧತಿಯನ್ನು ಮುಂದುವರಿಸುವ ಇಚ್ಛೆ ಇಲ್ಲ. ಈಗಾಗಲೇ ಚುನಾವಣ ಆಯೋಗ ಈ ಪದ್ಧತಿಯನ್ನು ರದ್ದುಪಡಿಸಬೇಕೆಂಬ ಪ್ರಸ್ತಾವ ಮಂಡಿಸಿದೆ. ಕಾನೂನು ಆಯೋಗ ಕೂಡಾ ಹಾಗೊಂದು ವೇಳೆ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅನಿವಾರ್ಯವಾದರೆ ಉಪಚುನಾವಣೆಯ ಖರ್ಚನ್ನು ಕ್ಷೇತ್ರ ತೆರವುಗೊಳಿಸಿದ ಪಕ್ಷದಿಂದ ಅಥವಾ ಅಭ್ಯರ್ಥಿಯಿಂದ ವಸೂಲು ಮಾಡಬೇಕೆಂಬ ಸಲಹೆ ನೀಡಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂಬ ಆಗ್ರಹಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಇದಿನ್ನೂ ಇತ್ಯರ್ಥಗೊಳ್ಳದಿರುವ ಕಾರಣ ಈ ಸಲ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅಡ್ಡಿಯಿಲ್ಲ. 1996 ಕ್ಕಿಂತ ಮುಂಚೆ ಅಭ್ಯರ್ಥಿಗಳಿಗೆ ಎಷ್ಟು ಕ್ಷೇತ್ರದಲ್ಲಾದರೂ ಸ್ಪರ್ಧಿಸುವ ಹಕ್ಕು ಇತ್ತು. ಏಕಕಾಲದಲ್ಲಿ ಮೂರು ಕ್ಷೇತ್ರಗಳಿಗೆ ಸ್ಪರ್ಧಿಸಿದವರೂ ಇದ್ದಾರೆ. ಅನಂತರ ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸಲಾಯಿತು. 2004ರಲ್ಲೇ ಒಬ್ಬನಿಗೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವ ಅವಕಾಶ ಇರಬೇಕೆಂಬ ಕಾನೂನು ತರಲು ಜನಪ್ರತಿನಿಧಿ ಕಾಯಿದೆಯ ಸೆಕ್ಷನ್‌ 33(7)ಕ್ಕೆ ತಿದ್ದುಪಡಿ ತರುವ ಪ್ರಯತ್ನ ನಡೆಯುತ್ತಿದ್ದರೂ ಯಾವುದೇ ಸರಕಾರವಾಗಲಿ, ಪಕ್ಷವಾಗಲಿ ಇದನ್ನು ಬೆಂಬಲಿಸಿಲ್ಲ. ತಮಗೆ ಅನನುಕೂಲವಾಗುವ ನಿಯಮಗಳನ್ನು ವಿರೋಧಿಸುವಲ್ಲಿ ಪಕ್ಷಗಳ ಎಲ್ಲ ಬೇಧಭಾವಗಳನ್ನು ಮರೆಯುತ್ತವೆೆ. ಎಲ್ಲಿ ತನಕ ನಿಯಮದಲ್ಲಿ ಬದಲಾವಣೆಯಾಗುವುದಿಲ್ಲವೋ ಅಲ್ಲೀ ತನಕ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಇದ್ದೇ ಇರುತ್ತಾರೆ. ಮತದಾರರೇ ಇಂಥ ಅಭ್ಯರ್ಥಿಗಳಿಗೆ ಮತ ನೀಡುವುದಿಲ್ಲ ಎಂಬ ಗಟ್ಟಿ ನಿರ್ಧಾರವನ್ನು ತಳೆದರೇ ಮಾತ್ರ ಏನಾದರೂ ಬದಲಾವಣೆಯನ್ನು ನಿರೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next