ಬೆಂಗಳೂರು: ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಹಾಡಹಗಲೇ ರಸ್ತೆಯಲ್ಲಿ ಪಾನಮತ್ತ ಪುಂಡರ ಗುಂಪೊಂದು ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. “ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಊಟ ಮುಗಿಸಿಕೊಂಡು ಕಚೇರಿಗೆ ವಾಪಾಸ್ ತೆರಳುತ್ತಿದ್ದ ವೇಳೆ ಬಾರ್ ಮುಂದೆ ನಿಂತಿದ್ದ ನಾಲ್ವರು ಪುಂಡರ ಗುಂಪಿನ ಪೈಕಿ ಒಬ್ಬ ನನ್ನ ಉತ್ತರ ಭಾರತ ಮೂಲದ ನನ್ನ ಸ್ನೇಹಿತೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದರಿಂದ ವಿಚಲಿತಗೊಂಡ ಯುವತಿ ಆತನ ಕಪಾಳಕ್ಕೆ ಹೊಡೆದಿದ್ದು, ಯುವಕ ಆಕೆಯನ್ನು ನಿಂದಿಸಲಾರಂಭಿಸಿದ. ಬಳಿಕ ನಾವೆಲ್ಲರೂ ಆಕೆಯ ಸಹಾಯಕ್ಕೆ ಧಾವಿಸಿ ಅಲ್ಲಿಂದ ಕರೆದುಕೊಂಡು ಬಂದೆವು. ಆದರೆ, ಪಾನಮತ್ತ ಯುವಕ, ಯುವತಿಯ ಮೈ ಮುಟ್ಟಿ ಅಸಭ್ಯ ವರ್ತನೆ ತೋರಿದ. ಈ ವೇಳೆ ಉಂಟಾದ ಗಲಾಟೆಯನ್ನು ಸಾರ್ವಜನಿಕರು ಮನರಂಜನೆಯಂತೆ ನೋಡಿದರೇ ವಿನಾ ಯುವತಿಯ ನೆರವಿಗೆ ಬರಲಿಲ್ಲ,’ ಎಂದು ಸಂತ್ರಸ್ತೆಯ ಸ್ನೇಹಿತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸರ ಅವಹೇಳನ: “ಯುವತಿಯ ಸಹಾಯಕ್ಕೆ ಹೋದಾಗ ದುಷ್ಕರ್ಮಿಗಳು ನನ್ನ ಟೀ ಶರ್ಟ್ ಹರಿದು ಹಲ್ಲೆಗೆ ಮುಂದಾದರು. ಕೂಡಲೇ ನನ್ನ ಇನ್ನೊಬ್ಬ ಸ್ನೇಹಿತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ. ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದೆ,’ ಎಂದು ಬರೆದಿರುವ ಯುವಕ, ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿದ್ದು, “ಯೂಸ್‌ಲೆಸ್ ಬೆಂಗಳೂರು ಪೊಲೀಸ್’ ಎಂದು ಜರೆದಿದ್ದಾನೆ. ಪೊಲೀಸರನ್ನು ನಿಂದಿಸಿರುವ ಆತ, ಘಟನೆ ಕುರಿತು ದೂರು ನೀಡುವ ಬಗ್ಗೆ ಮಾತ್ರ ಪ್ರಸ್ತಾಪಿಸಿಲ್ಲ.
ದೂರೇ ನೀಡಿಲ್ಲ:ಈ ಕುರಿತಂತೆ ಪ್ರತಿಕ್ರಿಯಿಸಿರುವ ಜೀವನ್‌ಭೀಮಾನಗರ ಠಾಣೆ ಪೊಲೀಸರು, ಘಟನೆ ನಡೆದು ಮೂರು ದಿನ ಕಳೆದರೂ ಯಾರೊಬ್ಬರೂ ಇದುವರೆಗೆ ದೂರು ನೀಡಿಲ್ಲ. ಫೇಸ್‌ಬುಕ್ ಮೂಲಕ ಪ್ರಕರಣ ಗೊತ್ತಾಗಿದೆ.
ಘಟನೆ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ತೊಂದರೆಗೆ ಒಳಗಾದ ಯುವತಿ ದೂರು ನೀಡಿದರೆ ನ್ಯಾಯ ದೊರಕಿಸಿಕೊಡುತ್ತೇವೆ. ಜತೆಗೆ ದುಷ್ಕರ್ಮಿಗಳ ಪತ್ತೆ ಮಾಡಲು ಯುವತಿಯ ಮಾಹಿತಿ ನಮಗೆ ನೆರವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.